
ಶಿವಮೊಗ್ಗ (ಫೆ.06): ಇಬ್ಬರೂ ಆತ್ಮೀಯ ಸ್ನೇಹಿತರು. ಒಬ್ಬ ಡ್ರೈವರ್ ಮತ್ತೊಬ್ಬ ಅಡಿಗೆ ಭಟ್ಟ. ಆದರೆ, ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ರವಿಯ ಹೆಂಡತಿಗೆ ಮೆಸೇಜ್, ಫೋನ್ ಕಾಲ್ ಮಾಡುತ್ತಾ ದಂಪತಿಯ ಸಂಬಂಧ ಹಾಳು ಮಾಡುತ್ತಿದ್ದನು. ಇದನ್ನು ಪ್ರಶ್ನೆ ಕಣ್ಣಿಗೆ ಖಾರದ ಪುಡಿ ಹಾಕಿ ಹಾಡಹಗಲೇ ಚಾಕು ಚುಚ್ಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಕೆಲವೊಬ್ಬರು ಸ್ನೇಹಿತರನ್ನು ಕುಟುಂಬಕ್ಕಿಂತ ಹೆಚ್ಚಾಗಿ ನಂಬುತ್ತಾರೆ. ಆದರೆ, ಎಲ್ಲಾ ಸ್ನೇಹಿತರೂ ಒಳ್ಳೆಯವರಾಗಿರುವುದಿಲ್ಲ. ಅದೇ ರೀತಿ ಇಲ್ಲೊಬ್ಬ ಸ್ನೇಹಿತನನ್ನು ಆಗಾಗ್ಗೆ ಮನೆಗೆ ಕರೆದುಕೊಂಡು ಹೋದರೆ ಗೆಳೆಯನ ಹೆಂಡತಿಗೇ ಮೆಸೇಜ್ ಮಾಡುತ್ತಾ ಹತ್ತಿರವಾಗಿದ್ದಾನೆ. ಈ ವಿಚಾರ ಆತನ ಗೆಳೆಯನಿಗೆ ತಿಳಿದಿದ್ದು, ಪ್ರಶ್ನೆ ಮಾಡುವುದಕ್ಕೆಂದು ಸ್ನೇಹಿತನ ಬಳಿ ಹೋಗಿದ್ದಾರೆ. ನೀನು ನನ್ನ ಹೆಂಡತಿಗೆ ಏಕೆ ಮೆಸೇಜ್, ಫೋನ್ ಕರೆ ಮಾಡುತ್ತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇಷ್ಟಕ್ಕೆ ಸಿಟ್ಟಿಗೆದ್ದ ಸ್ನೇಹಿತ ಆತನ ಕಣ್ಣಿಗೆ ಖಾರದ ಪುಡಿ ಎರಚಿ, ಹಾಡಹಗಲೇ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿದ್ದಾನೆ.
ಈ ಘಟನೆ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ. ಹಾಡು ಹಗಲೇ ನಡೆದ ಚಾಕು ಇರಿತದ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ಡ್ರೈವರ್ ಕೆಲಸ ಮಾಡುವ ರವಿ (34) ಚಾಕು ಇರಿತಕ್ಕೊಳಗಾದವ. ಈತನ ಸ್ನೇಹಿತ ಅಡುಗೆ ಕೆಲಸ ಮಾಡುವ ಅರುಣ್ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ರವಿಯ ಹೆಂಡತಿಗೆ ಅರುಣ್ ನಿರಂತರವಾಗಿ ಫೋನ್ ಮಾಡುವುದು, ಮೆಸೇಜ್ ಮಾಡುವುದನ್ನು ಮಾಡುತ್ತಿದ್ದನು. ಆಗ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರವಿ, ಅರುಣನನ್ನು ಕರೆದಿದ್ದಾನೆ.
ಇದನ್ನೂ ಓದಿ: ಪ್ರಯಾಗ್‌ರಾಜ್ ಕಾಲ್ತುಳಿತದಲ್ಲಿ ಮೃತಪಟ್ಟ ತಾಯಿ-ತಂಗಿಯ ಆಭರಣ ಸುರಕ್ಷಿತವಾಗಿ ತಲುಪಿದೆ ಎಂದ ಸಹೋದರ!
ಹೊಸಮನೆ ಬಡಾವಣೆಯ ತಿಥಿ ಊಟದ ಅಡುಗೆಗೆ ಎಂದು ಬಂದಿದ್ದ ಅರುಣ್, ತಾನಿರುವಲ್ಲಿಗೆ ಬರುವಂತೆ ರವಿಯನ್ನು ಕರೆದಿದ್ದಾನೆ. ಇಲ್ಲಿಗೆ ಬೈಕ್‌ನಲ್ಲಿ ಬಂದ ರವಿ ಮತ್ತು ಅರುಣ್ ನಡುವೆ ಮಾತಿನ ಜಟಾಪಟಿ ನಡೆಯುತ್ತದೆ. ಆದರೆ, ಅರುಣ್ ಅಡುಗೆ ಸ್ಥಳದಿಂದ ಹೊರಗೆ ಬರುವಾಗಲೇ ಖಾರದಪುಡಿ, ಚಾಕು, ತೆಗೆದುಕೊಂಡು ಬಂದಿದ್ದನು. ರವಿ ಮತ್ತು ಅರುಣ್ ನಡುವೆ ಮಾತಿನ ಚಕಮಕಿ ಅತಿಯಾಗಿ ಬೈಕಿನಲ್ಲಿ ಕುಳಿತಿದ್ದ ರವಿ ಮೇಲೆ ಅಡುಗೆ ಭಟ್ಟ ಅರುಣ್ ಖಾರದಪುಡಿ ಎರಚಿ ಚಾಕು ಚುಚ್ಚಿದ್ದಾನೆ.
ರವಿ ಬೈಕ್‌ನಿಂದ ಇಳಿಯುವ ಮುನ್ನವೇ ಭುಜ, ಪಕ್ಕೆ ಎಲುಬುಗಳಿಗೆ ಚಾಕುನಿಂದ ಚುಚ್ಚಿ ಪರಾರಿಯಾಗಿದ್ದಾನೆ. ಅಲ್ಲಿಗೆ ಬಂದ ರವಿಯ ಸ್ನೇಹಿತರು ರವಿಯನ್ನು ಕೂಡಲೇ ಶಿವಮಿಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ರವಿ ಸ್ನೇಹಿತರು ಮಾಹಿತಿ ನೀಡಿದ್ದು, ಪೊಲೀಸರು ಅರುಗೆಭಟ್ಟ ಅರುಣ್‌ನನ್ನು ಹುಡುಕುತ್ತಿದ್ದಾರೆ. ಆದರೆ, ಅರುಣ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.