
ಶಿವಮೊಗ್ಗ: ಸಮಯಕ್ಕೆ ಸರಿಯಾಗಿ ಕಾರು ನೀಡದೆ ಗ್ರಾಹಕರಿಗೆ ಸತಾಯಿಸಿದ ಮಹೀಂದ್ರ ಶೋರೂಂ ಒಂದಕ್ಕೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಸೂಕ್ತ ದಂಡ ಹಾಗೂ ಬಡ್ಡಿ ಸಹಿತ ಹಣ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಭದ್ರಾವತಿ ಮೂಲದ ಮನೋಜ್‌ಕುಮಾರ್ ಎ.ಸಿ. ಎಂಬುವವರು 2026ರ ಫೆಬ್ರವರಿಯಲ್ಲಿ ಶಿವಮೊಗ್ಗದ ಶೋ ರೂಮ್ ಒಂದರಲ್ಲಿ ಮಹೀಂದ್ರ ಎಕ್ಸ್‌ಯುವಿ 3ಎಕ್ಸ್‌ಒ ಕಾರು ಬುಕ್ ಮಾಡಿದ್ದರು. ಮುಂಗಡವಾಗಿ 21000 ಹಣ ಪಾವತಿಸಿ, ತಮ್ಮ ಹಳೆಯ ವಾಹನವನ್ನು 1,70,000 ಮೌಲ್ಯದ ಎಕ್ಸ್‌ಚೇಂಜ್ ಆಫರ್‌ಗೆ ನೀಡಿದ್ದರು. ಸುಮಾರು 30 ರಿಂದ 35 ದಿನಗಳ ಒಳಗಾಗಿ ಹೊಸ ವಾಹನ ನೀಡುವುದಾಗಿ ಶೋರೂಂ ಸಿಬ್ಬಂದಿ ಭರವಸೆ ನೀಡಿದ್ದರು. ಆದರೆ, ನೀಡಿದ ಸಮಯಕ್ಕೆ ವಾಹನ ನೀಡದೆ ಗ್ರಾಹಕರನ್ನು ಸತಾಯಿಸಲಾಗಿತ್ತು.
ಸಮಯಕ್ಕೆ ಸರಿಯಾಗಿ ಕಾರು ಸಿಗದ ಕಾರಣ, ಏಪ್ರಿಲ್ 27 ರಂದು ಬುಕಿಂಗ್ ರದ್ದುಗೊಳಿಸಿದ ಮನೋಜ್‌ಕುಮಾರ್, ತಮ್ಮ ಮುಂಗಡ ಮೊತ್ತ ಹಾಗೂ ಹಳೆಯ ವಾಹನದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಕೋರಿದ್ದರು. ಮೇ 4 ರಂದು ಶೋರೂಂನವರು ಹಣವನ್ನು ವಾಪಸ್ ನೀಡಿದರಾದರೂ, ವಾಹನ ಸಿಗದೆ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾದ ಹಿನ್ನೆಲೆಯಲ್ಲಿ, ಸೇವೆಯಲ್ಲಿ ಲೋಪ ಎಸಗಿದ್ದಾರೆಂದು ಆರೋಪಿಸಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ಪೀಠವು, ಶೋರೂಂ ಕಡೆಯಿಂದ ಸೇವಾ ಲೋಪವಾಗಿರುವುದನ್ನು ಎತ್ತಿಹಿಡಿದಿದೆ. ದೂರುದಾರರಿಗೆ ಪಾವತಿಸಬೇಕಿದ್ದ 21,000 ಮುಂಗಡ ಹಣಕ್ಕೆ ಶೇ. 8 ರಷ್ಟು ಬಡ್ಡಿ, ಮಾನಸಿಕ ಕಿರುಕುಳಕ್ಕೆ 25,000 ಪರಿಹಾರ ಹಾಗೂ ಕೋರ್ಟ್ ವೆಚ್ಚವಾಗಿ 10,000 ಹಣವನ್ನು 45 ದಿನಗಳ ಒಳಗಾಗಿ ನೀಡಬೇಕೆಂದು ಆ.13 ರಂದು ತೀರ್ಪು ನೀಡಿದೆ. ತಪ್ಪಿದಲ್ಲಿ ಒಟ್ಟು ಮೊತ್ತಕ್ಕೆ ಶೇ. 10ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: Shivamogga: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ರೈತರಲ್ಲಿ ಆತಂಕ ಮೂಡಿಸಿದ ಹನುಮಂತ ದೇವರ ಕಾರ್ಣಿಕ ನುಡಿ