ಮಾನ್ಸೂನ್ ಸಂಭಾವ್ಯ ಅಪಾಯ ಎದುರಿಸಲು ಮುಂಜಾಗ್ರತೆ ವಹಿಸಿ: ಶಿವಮೊಗ್ಗ ಡಿಸಿ

By Kannadaprabha News  |  First Published Jun 3, 2020, 9:52 AM IST

ಶಿವಮೊಗ್ಗ ಜಿಲ್ಲೆಯಲ್ಲಿ ಮಾನ್ಸೂನ್ ಅವಾಂತರದ ಬಗ್ಗೆ ಈಗಲೇ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸಿದ್ದತೆ ನಡೆಸಿ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಶಿವಮೊಗ್ಗ(ಜೂ.03): ಮುಂಗಾರಿನ ಅವಧಿಯಲ್ಲಿ ಉಂಟಾಗಬಹುದಾದ ಎಲ್ಲಾ ಸಂಭಾವ್ಯ ಅಪಾಯಗಳನ್ನು ಎದುರಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಮುಂಗಾರು ಅವಧಿಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಿನ್ನೆಲೆಯಲ್ಲಿ, ಈ ಬಾರಿ ಮೊದಲೇ ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು. ಜಿಲ್ಲಾಡಳಿತದ ಬಳಿ ಲಭ್ಯವಿರುವ ಬೋಟು, ರಕ್ಷಣಾ ಕವಚಗಳು ಎಲ್ಲಾ ಸಾಧನ ಸಲಕರಣೆಗಳನ್ನು ಪರಿಶೀಲಿಸಬೇಕು ಎಂದರು. ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಗ್ರಾಮಗಳನ್ನು ಈಗಲೇ ಗುರುತಿಸಬೇಕು. ತಾಲೂಕಿನಲ್ಲಿ ಲಭ್ಯವಿರುವ ರಕ್ಷಣಾ ಸಾಮಾಗ್ರಿ, ಸಲಕರಣೆಗಳ ಪಟ್ಟಿಯನ್ನು ಸಿದ್ಧಪಡಿಸಿ, ಸನ್ನದ್ಧ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಮಳೆಗೆ ಸುಲಭವಾಗಿ ಕುಸಿಯಬಹುದಾದ ಮನೆ, ಕಟ್ಟಡಗಳನ್ನು ಗುರುತಿಸಿ ತೆರವು ಅಥವಾ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕು ಎಂದು ಹೇಳಿದರು.

Tap to resize

Latest Videos

ಜಿಲ್ಲಾಡಳಿತದಿಂದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ 6 ಬೋಟುಗಳು, 25 ರಕ್ಷಣಾ ಕವಚಗಳು, ಮುರಿದು ಬೀಳುವ ಮರಗಳನ್ನು ತೆರವುಗೊಳಿಸಲು 50 ಟ್ರೀ ಕಟ್ಟರ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಹಲವಾರು ಸಾಹಸಿ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಎಲ್ಲರ ಸಹಕಾರವನ್ನು ಪಡೆಯಬೇಕು. ಇದಕ್ಕಾಗಿ ಅಂತಹ ಸಂಘ ಸಂಸ್ಥೆಗಳ ವಿವರ, ಅವರಲ್ಲಿ ಲಭ್ಯವಿರುವ ರಕ್ಷಣಾ ಸಲಕರಣೆಗಳ ವಿವರಗಳನ್ನು ಪಟ್ಟಿಮಾಡಬೇಕು ಎಂದು ತಿಳಿಸಿದರು.

ನೆರೆ ನೀರು ಸುಲಭವಾಗಿ ನುಗ್ಗಬಹುದಾದ ತಗ್ಗು ಪ್ರದೇಶದಲ್ಲಿರುವ ಜನರಿಗೆ ಈಗಾಗಲೇ ಸೂಚನೆಗಳನ್ನು ನೀಡಬೇಕು. ಒಂದು ವೇಳೆ ಜನರನ್ನು ತುರ್ತಾಗಿ ಸ್ಥಳಾಂತರಿಸುವ ಸಂದರ್ಭ ಬಂದರೆ ಅವರಿಗೆ ತಾತ್ಕಾಲಿಕ ಪುನರ್ವಸತಿಗಾಗಿ ಎಲ್ಲಾ ತಾಲೂಕುಗಳಲ್ಲಿ ಈಗಲೇ ಗುರುತಿಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಬೇಕು. ಗಾಳಿ ಮಳೆಗೆ ಉರುಳಿ ಬೀಳುವ ವಿದ್ಯುತ್‌ ಕಂಬಗಳನ್ನು ತಕ್ಷಣ ದುರಸ್ತಿ ಮಾಡಲು ಸಿದ್ದತೆ ಮಾಡಬೇಕು. ಇದಕ್ಕಾಗಿ ಅಗತ್ಯ ಪ್ರಮಾಣದ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು, ತಂತಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮಳೆಯಿಂದ ಸಾವು ನೋವುಗಳು ಸಂಭವಿಸದಂತೆ ಗರಿಷ್ಟಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಶಿವಮೊಗ್ಗದ ನಿಧಿಗೆ ಕೆರೆಯಲ್ಲಿ ಅತಿವೃಷ್ಟಿಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆಯೋಜಿಸಲಾಗಿರುವ ತರಬೇತಿ ಶಿಬಿರಕ್ಕೆ ಜಿಲ್ಲಾಧಿಕಾರಿ ಶಿವಕುಮಾರ್‌ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕೆ.ಎಂ. ಶಾಂತರಾಜು ಇತರರು ಇದ್ದರು.
 

click me!