ಶಿವಮೊಗ್ಗ ದಸರಾ ಕಹಿ ಘಟನೆ, ಇದು ದೇವಿಯ ಪವಾಡವೇ ಸೈ, ಚಾಮುಂಡೇಶ್ವರಿ ವಿಗ್ರಹ 100% ಸೇಫ್!

Published : Oct 24, 2026, 01:26 PM IST
Shivamogga Dasara

ಸಾರಾಂಶ

ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಅಂಬಾರಿ ಆನೆ ಸೋಮಣ್ಣ ಬೆದರಿ ಓಡಿದ ಘಟನೆಗೆ ಸಂಬಂಧಿಸಿದಂತೆ ಸಿಸಿಎಫ್ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದೆ. ಘಟನೆಯಲ್ಲಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಭಗ್ನಗೊಂಡಿಲ್ಲ ಮತ್ತು ಎಲ್ಲಾ ಬೆಳ್ಳಿಯ ಆಭರಣಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ. ಸಹಪಾಠಿ ಆನೆಗಳನ್ನು ನೋಡಿ ಸೋಮಣ್ಣ ಆನೆ ಅಜ್ಞಾತ ಕಾರಣಕ್ಕೆ ಆತಂಕಗೊಂಡು ಓಡಿದ್ದೇ ಈ ಅವಾಂತರಕ್ಕೆ ಕಾರಣ ಎಂದು ಉಲ್ಲೇಖಿಸಲಾಗಿದೆ.

ಶಿವಮೊಗ್ಗ: ಇದು ದೇವಿಯ ಪವಾಡವೇ ಸೈ! ಚಾಮುಂಡೇಶ್ವರಿ ವಿಗ್ರಹ 100% ಸೇಫ್! ವಿಗ್ರಹ ಭಗ್ನಗೊಂಡಿಲ್ಲ, ಛಿದ್ರವಾಗಿಲ್ಲ. ವಿಗ್ರಹದ ಕೈ ಮುರಿದು ಬಿದ್ದಿಲ್ಲ. ಸ್ಕ್ರೂ ಇರುವ ಕೈ ಕಳಚಿ ಬಂದಿತ್ತಷ್ಟೇ. ಆನೆ ದಾಳಿಯ ನಂತರವೂ ಚಾಮುಂಡೇಶ್ವರಿ ವಿಗ್ರಹಕ್ಕೆ ಧಕ್ಕೆಯಾಗಿಲ್ಲ. ಭಗ್ನಗೊಳ್ಳದ ವಿಗ್ರಹ ದೇವಿಯ ಪವಾಡವೇ ಆಗಿದೆ. ದೇವಿಗೆ ಇರುವ ಪ್ರಭಾವಳಿ, ಮಂಟಪಗಳು, ಕೆಳಗಡೆ ಪ್ಲಾಟ್ ಫಾರ್ಮ್, ಫಲಕಗಳು, ಎಲ್ಲವೂ ಕೂಡ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಎಲ್ಲವೂ ಕೂಡ ಸುರಕ್ಷಿತವಾಗಿದೆ.

ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಅಂಬಾರಿ ಹೊತ್ತ ಆನೆ 'ಸೋಮಣ್ಣ' ಇದ್ದಕ್ಕಿದ್ದಂತೆ ಬೆದರಿ ಓಡಿದ ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಗಳು ಹೊರಬಂದಿವೆ. ದೇವಿಯ ವಿಗ್ರಹ ಮುರಿದು ಬಿದ್ದಿದೆ ಎಂಬ ವದಂತಿಗಳಿಗೆ ತೆರೆಬಿದ್ದಿದ್ದು, ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಹಾಗೂ ಎಲ್ಲಾ ಬೆಳ್ಳಿಯ ಆಭರಣಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಇನ್ನು ಘಟನೆ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಅವರು ವಿವರವಾದ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ದೇವಿಯ ವಿಗ್ರಹ ಭಗ್ನಗೊಂಡಿಲ್ಲ

ಘಟನೆಯಲ್ಲಿ ಬೆಳ್ಳಿಯ ಮಂಟಪದಲ್ಲಿದ್ದ ಚಾಮುಂಡೇಶ್ವರಿ ದೇವಿಯ ವಿಗ್ರಹ ಕೆಳಗೆ ಬಿದ್ದಾಗ, ದೇವಿಯ ಕೈ ಮುರಿದು ಬಿದ್ದಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಕುರಿತು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ದೇವಿಯ ವಿಗ್ರಹಕ್ಕೆ ಯಾವುದೇ ಹಾನಿಯಾಗಿಲ್ಲ, ಛಿದ್ರವಾಗಿಲ್ಲ. ದೇವಿಯ ವಿಗ್ರಹವು 8 ಕೈಗಳನ್ನು ಹೊಂದಿರುವ ವಿಶೇಷ ಮರದ ಮೂರ್ತಿಯಾಗಿದ್ದು, ಪ್ರತಿಯೊಂದು ಕೈಯೂ ಪ್ರತ್ಯೇಕವಾಗಿ ಜೋಡಿಸಬಹುದಾದ ಮಾದರಿಯದ್ದಾಗಿದೆ. ಮಾಧ್ಯಮಗಳಲ್ಲಿ ಕಾಣಿಸಿಕೊಂಡ 5ನೇ ನಂಬರ್ ಕೈ ಕೇವಲ ಸ್ಕ್ರೂ ಕಳಚಿ ಹೊರಬಂದಿತ್ತಷ್ಟೇ ಹೊರತು ಮುರಿದಿಲ್ಲ. ಅದನ್ನು ಮತ್ತೆ ಯಥಾಸ್ಥಿತಿಗೆ ಜೋಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದೇವಿಯ ಪ್ರಭಾವಳಿ, ಬೆಳ್ಳಿಯ ಮಂಟಪ, ಪ್ಲಾಟ್‌ಫಾರ್ಮ್ ಹಾಗೂ ಎಲ್ಲಾ ಬೆಳ್ಳಿ ವಸ್ತುಗಳು 100% ಸುರಕ್ಷಿತವಾಗಿದ್ದು, ಪ್ರಸ್ತುತ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಉಪಆಯುಕ್ತರ ಸುಪರ್ದಿಯಲ್ಲಿವೆ.

ಸರ್ಕಾರಕ್ಕೆ ಸಿಸಿಎಫ್ ಸಲ್ಲಿಸಿದ ವರದಿಯ ಪ್ರಮುಖ ಮುಖ್ಯಾಂಶಗಳು:

1. ತಾಲೀಮು ಮತ್ತು ಪೂರ್ವಸಿದ್ದತೆ:

2026ರ ಅಕ್ಟೋಬರ್ 7 ರಂದೇ ದಸರಾ ತಾಲೀಮಿಗೆ ಸರ್ಕಾರದ ಅನುಮತಿ ಸಿಕ್ಕಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ದಿನಗಳ ಕಾಲ ಆನೆಗಳಿಗೆ ತರಬೇತಿ ನೀಡಲಾಗಿತ್ತು. ಪ್ರತಿದಿನ 4 ಕಿ.ಮೀ ನಡಿಗೆ ಹಾಗೂ 500 ರಿಂದ 600 ಕೆಜಿ ಮರಳು ಮೂಟೆ ಹೊರಿಸಿ ಅಭ್ಯಾಸ ಮಾಡಿಸಲಾಗಿತ್ತು. ಪಟಾಕಿ ಶಬ್ದ, ಜನಸಂದಣಿ ಹಾಗೂ ವಾಹನಗಳ ಸದ್ದಿಗೆ ಹೊಂದಿಕೊಳ್ಳುವಂತೆ ಆನೆಗಳಿಗೆ ಪೂರ್ವ ಸಿದ್ಧತೆ ಮಾಡಲಾಗಿತ್ತು. ಅಕ್ಟೋಬರ್ 15 ರಂದು ಆನೆಗಳನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಿ, ಅಕ್ಟೋಬರ್ 16 ರಿಂದ ನಿಗದಿತ ಮೆರವಣಿಗೆ ರಸ್ತೆಯಲ್ಲೇ ತಾಲೀಮು ನಡೆಸಲಾಗಿತ್ತು.

2. ಸೋಮಣ್ಣ ಆನೆಯನ್ನೇ ಆಯ್ಕೆ ಮಾಡಿದ್ದು ಏಕೆ?

ವರದಿಯ ಪುಟ 10 ಮತ್ತು 11 ರಲ್ಲಿ ಅಂಬಾರಿ ಹೊರಲು ಸೋಮಣ್ಣ ಆನೆಯನ್ನು ಆಯ್ಕೆ ಮಾಡಿದ ಕಾರಣವನ್ನು ಸ್ಪಷ್ಟಪಡಿಸಲಾಗಿದೆ. ಇಬ್ಬರು ಪಶುವೈದ್ಯರು, ಸಿಬ್ಬಂದಿ ಹಾಗೂ ನಿವೃತ್ತ ಜಮೇದಾರರನ್ನೊಳಗೊಂಡ ತಂಡ ಸಾಗರ್, ಸೋಮಣ್ಣ ಮತ್ತು ಬಹದ್ದೂರ್ ಆನೆಗಳ ಸಾಮರ್ಥ್ಯವನ್ನು ಚರ್ಚಿಸಿತ್ತು. 'ಸಾಗರ್' ಆನೆಯು ಸಕ್ರಿಯವಾಗಿಲ್ಲದ ಕಾರಣ ಮತ್ತು ಭಾರ ಹೊರಲು ಉತ್ಸುಕವಾಗಿರದಿದ್ದರಿಂದ, ಸ್ವತಃ ಸಾಗರನ ಮಾವುತ ಇಂತಿಯಾಜ್ ಅವರೇ ಸೋಮಣ್ಣನನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದರು. ಎಲ್ಲರ ಒಮ್ಮತದ ಮೇಲೆಯೇ ಸೋಮಣ್ಣನನ್ನು ಅಂಬಾರಿ ಆನೆಯಾಗಿ ಅಂತಿಮಗೊಳಿಸಲಾಗಿತ್ತು.

3. ಅಕ್ಟೋಬರ್ 21 ರಂದು ನಡೆದ ಘಟನೆಯ 'ಟೈಮ್‌ಲೈನ್':

  • ಮಧ್ಯಾಹ್ನ 2:30: ಮೆರವಣಿಗೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡವು.
  • ಮಧ್ಯಾಹ್ನ 3:30: ಸೋಮಣ್ಣ ಆನೆಗೆ ಬೆಳ್ಳಿಯ ಅಂಬಾರಿ ಕಟ್ಟಲಾಯಿತು.
  • ಮಧ್ಯಾಹ್ನ 3:45: ಕೋಟೆ ಆಂಜನೇಯ ದೇವಸ್ಥಾನದ ಬಳಿ ನಂದಿ ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಬ್ಯಾರಿಕೇಡ್‌ಗಳನ್ನು ಹಾಕಿ, ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿಯ ಸುರಕ್ಷಿತ ಕಾವಲಿನಲ್ಲಿ 3 ಆನೆಗಳು ಸಾಲಾಗಿ ಸಾಗುತ್ತಿದ್ದವು.

4. ನಿಖರವಾಗಿ ಏನಾಯಿತು?

ನಿಗದಿತ ಮಾರ್ಗದಲ್ಲಿ ರಾಮಣ್ಣ ಶ್ರೀನಿವಾಸ ಪಾರ್ಕ್ ಸಮೀಪದವರೆಗೆ ಸುಮಾರು 700 ಮೀಟರ್ ದೂರ ಆನೆಗಳು ಅತ್ಯಂತ ಸಮಾಧಾನದಿಂದ ಸಾಗಿದ್ದವು. ಪಾರ್ಕ್ ಹತ್ತಿರ ಬರುತ್ತಿದ್ದಂತೆ ಮುಂದೆ ಸಾಗುತ್ತಿದ್ದ ಜನಸ್ತೋಮದ ನಡಿಗೆ ನಿಧಾನವಾಯಿತು. ಇದರಿಂದಾಗಿ ಆನೆಯ ನಡಿಗೆಯೂ ಮಂದಗತಿಯಾಯಿತು.

ಆಗ ಸೋಮಣ್ಣ ಆನೆಯು ಸುಮ್ಮನೆ ನಿಂತು, ಪಕ್ಕಕ್ಕೆ ತಿರುಗಲು ಪ್ರಾರಂಭಿಸಿತು. ಸಾಮಾನ್ಯವಾಗಿ ಮೂತ್ರ ವಿಸರ್ಜನೆ ಮಾಡಲು ಸ್ಥಳಾವಕಾಶ ಮಾಡಿಕೊಳ್ಳಲು ಆನೆಗಳು ಹೀಗೆ ತಿರುಗುತ್ತವೆ ಎಂದು ಸಿಬ್ಬಂದಿ ಭಾವಿಸಿದ್ದರು. ಆದರೆ ಸೋಮಣ್ಣ ಪಕ್ಕಕ್ಕೆ ತಿರುಗುತ್ತಿದ್ದಂತೆ, ಹಿಂದೆ ಬರುತ್ತಿದ್ದ ಸಾಗರ್ ಮತ್ತು ಬಹದ್ದೂರ್ ಆನೆಗಳು ಕೂಡ ಎಡಗಡೆಗೆ ತಿರುಗಿಕೊಂಡವು.

ಹೀಗೆ ಹಿಂತಿರುಗಿ ಸಹಪಾಠಿ ಆನೆಗಳನ್ನು ನೋಡಿದ ಸೋಮಣ್ಣ, ಯಾವುದೋ ಅನಿರೀಕ್ಷಿತ ಕಾರಣ ಇರಬಹುದು ಎಂದು ಇದ್ದಕ್ಕಿದ್ದಂತೆ ತೀವ್ರ ಆತಂಕಗೊಂಡು, ಹೂಂಕರಿಸಿ, ಬಾಲ ಎತ್ತಿ ಗಾಬರಿಗೊಂಡಿತು. ಗಾಬರಿಗೊಂಡ ಆನೆಯು ಹಿಂದೆ ಇದ್ದ ಸಾಗರ್ ಮತ್ತು ಬಹದ್ದೂರ್ ಆನೆಗಳನ್ನು ಪಕ್ಕಕ್ಕೆ ತಳ್ಳಿ, ಅಂಬಾರಿ ಸಮೇತ ಬಂದ ದಾರಿಯಲ್ಲೇ ಹಿಂದೆ ಓಡಲು ಆರಂಭಿಸಿತು. ಇದನ್ನು ನೋಡಿ ಬಹದ್ದೂರ್ ಆನೆಯೂ ಅದರ ಹಿಂದೆ ಓಡಿತು.

ಮೆರವಣಿಗೆಯಲ್ಲಿ ಮುಂದೆ ಸಾಗುತ್ತಿದ್ದ ಜನಸ್ತೋಮ ನಿಧಾನಗೊಂಡಾಗ, ಹಿಂದೆ ಸಾಲಾಗಿ ಬರುತ್ತಿದ್ದ ಸಹಪಾಠಿ ಆನೆಗಳನ್ನು ನೋಡಿದ ಸೋಮಣ್ಣ ಆನೆ ಯಾವುದೋ ಅಜ್ಞಾತ ಕಾರಣಕ್ಕೆ ಇದ್ದಕ್ಕಿದ್ದಂತೆ ಆತಂಕಕ್ಕೊಳಗಾಗಿ ಗಾಬರಿಯಿಂದ ಓಡಿದ್ದೇ ಈ ಅವಾಂತರಕ್ಕೆ ಮುಖ್ಯ ಕಾರಣ ಎಂದು ಸಿಸಿಎಫ್ ತಮ್ಮ ತನಿಖಾ ವರದಿಯಲ್ಲಿ ಅಂತಿಮವಾಗಿ ಉಲ್ಲೇಖಿಸಿದ್ದಾರೆ.

PREV
Read more Articles on
click me!

Recommended Stories

ಎಲ್ಲಿ ಏನೇನಾಯ್ತು ನನಗೆ ಗೊತ್ತಿದೆ, ದಸರಾ ವಜ್ರಮುಷ್ಠಿ ಕಾಳಗ ರದ್ದು ಬಗ್ಗೆ ಪ್ರಮೋದಾದೇವಿ ಸ್ಪಷ್ಟನೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರು ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಪೊಲೀಸ್ ಅನುಮತಿ