
ಹನೂರು: ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಮೂಲಕ ರಾಜ್ಯ ಹೆದ್ದಾರಿ- 79ರಲ್ಲಿ ವಾಹನ ಪ್ರವೇಶ ಶುಲ್ಕ ವಸೂಲಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಮೂಲ ಸಿದ್ಧಾಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಾಮರಾಜನಗರ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆಗ್ರಹ ಮಾಡಿದೆ.
ಆ. 6ರಂದು ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶುಲ್ಕ ವಸೂಲಿ ವಿರೋಧಿಸಿ, ರಾಜ್ಯ ಹೆದ್ದಾರಿ- 79 ತಡೆ ಹಾಗೂ ಕೊಳ್ಳೇಗಾಲ ಮತ್ತು ಪಾಲರ್ ಚೆಕ್ ಪೋಸ್ಟ್‌ಗಳಲ್ಲಿ ಹೋರಾಟ ನಡೆಸಲಾಗಿತ್ತು. ಅಧಿಕಾರಿಗಳು ಇನ್ನು ಮುಂದೆ ಟೋಲ್ ಶುಲ್ಕ ಸಂಗ್ರಹಿಸುವುದಿಲ್ಲ ಎಂದು ಭರವಸೆ ನೀಡಿದ ಮೇರೆಗೆ ಹೋರಾಟವನ್ನು ಕೈಬಿಡಲಾಗಿತ್ತು.
ಆದರೆ ಸೆ.4ರಂದು ನಡೆದ ಸಭೆಯ ನಂತರ ಮತ್ತೆ ಶುಲ್ಕ ಸಂಗ್ರಹವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇದು ರೈತರಿಗೆ ಮತ್ತು ಸ್ಥಳೀಯ ಸಾರ್ವಜನಿಕರಿಗೆ ಅನ್ಯಾಯವಾಗಿದೆ ಎಂದು ಸಂಘವು ಖಂಡಿಸಿದೆ.
ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತೆರಳುವ ರೈತರು ಮತ್ತು ಪ್ರಯಾಣಿಕರು ಈಗಾಗಲೇ ಹೆಚ್ಚಿನ ಹೊರೆಯನ್ನು ಹೊರುತ್ತಿದ್ದಾರೆ. ಹೀಗಾಗಿ ಕೂಡಲೇ ಶುಲ್ಕ ವಸೂಲಿಯನ್ನು ನಿಲ್ಲಿಸಿ, 10 ದಿನಗಳೊಳಗೆ ರೈತರು ಮತ್ತು ಸಾರ್ವಜನಿಕರ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಲಾಗಿದೆ.
ಅಲ್ಲದೆ, ಮಲೆ ಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್, ಶುಲ್ಕ ವಸೂಲಿಯ ಹಕ್ಕುಬಾಧ್ಯತೆ, ಭಕ್ತರ ಕಾಣಿಕೆಗಳ ಲೆಕ್ಕ, ರಸ್ತೆ ಡಾಂಬರೀಕರಣದ ಖರ್ಚು-ವೆಚ್ಚ, ಟೆಂಡರ್ ವಿವರಗಳು ಮತ್ತು 2026ರವರೆಗಿನ ಆಡಿಟ್ ವರದಿಯನ್ನು ಸಭೆಯಲ್ಲಿ ನೀಡಬೇಕು ಎಂದು ವಿನಂತಿಸಿದ್ದಾರೆ.
ಜಿಲ್ಲಾಧ್ಯಕ್ಷ ಗೌಡೇಗೌಡ, ಹನೂರು ತಾಲೂಕು ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಪ್ರಸಾದ್, ಪ್ರಧಾನ ಕಾರ್ಯದರ್ಶಿ ವೆಂಕಟಾಚಲ ಮತ್ತು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮ್ದದ್ ಖಾನ್ ಸಹಿ ಹಾಕಿ ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳು ಈ ಕೂಡಲೇ ಮಲೆ ಮಹದೇಶ್ವರ ಬೆಟ್ಟದಲ್ಲಿ ಟೋಲ್ ಸಂಗ್ರಹಕ್ಕೆ ಅನುಮತಿ ನೀಡಿರುವುದನ್ನು ನಿಲ್ಲಿಸಬೇಕು. ತಮಿಳುನಾಡಿಗೆ ಮತ್ತು ಆ ಭಾಗದ ರೈತರು ಓಡಾಡಲು ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಟೋಲ್ ಸಂಗ್ರಹಿಸಲಿ. ಇಲ್ಲದಿದ್ದರೆ ಸಂಘಟನೆಯ ಮೂಲಕ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಗೌಡೆಗೌಡ ಹೇಳಿದ್ದಾರೆ.
ಹನೂರು: ವಿಜಯದಶಮಿ ಪ್ರಯುಕ್ತ ಸಂಪ್ರದಾಯದಂತೆ ಶ್ರೀ ಮಲೆಮಾದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕುದುರೆ ವಾಹನೋತ್ಸವ ಮತ್ತು ತೆಪ್ಪೋತ್ಸವಗಳನ್ನು ಆಯೋಜಿಸಲಾಗಿತ್ತು. ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟಕ್ಕೆ ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ ಹಿನ್ನೆಲೆ ಶ್ರೀ ಕ್ಷೇತ್ರದಲ್ಲಿ ಮಾದಪ್ಪನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಸುವಂತೆ ಮಾದಪ್ಪನ ಭಕ್ತಾದಿಗಳು ನಿವೇದನೆ ಮಾಡಿಕೊಂಡರು.
ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್, ಉಪ ಕಾರ್ಯದರ್ಶಿ ಚಂದ್ರಶೇಖರ್ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವರ್ಗದವರು, ನಾಮನಿರ್ದೇಶನ ಸದಸ್ಯ ಮರಿಸ್ವಾಮಿ, ಹಣಕಾಸು ಲೆಕ್ಕಪತ್ರ ಸಲಹೆಗಾರ ಮಾದೇವ್ ಸಿ, ಆಗಮಿಕ ಕರವೀರ ಸ್ವಾಮಿ, ಪಾರು ಪತ್ತೆದಾರ್, ಮಹಾಲಿಂಗನ ಕಟ್ಟೆ ಮಾದೇಶ್, ಸರ್ಕಲ್ ಇನ್ಸ್ಪೆಕ್ಟರ್ ಆನಂದಮೂರ್ತಿ, ಬೇಡಗಂಪಣ ಅರ್ಚಕ ವರ್ಗದವರು, ಹಾಗೂ ಇತರ ದೇವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.