
ಶಿವಮೊಗ್ಗ(ನ.24): ಶಿವಮೊಗ್ಗದಿಂದ ವಿಮಾನಯಾನ ರದ್ದಾಗುವ ಭೀತಿಯ ಬೆನ್ನಲ್ಲೇ ಕೇಂದ್ರ ಸರ್ಕಾರ ಜನರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ‘ಉಡಾನ್ 6.0’ ಟೆಂಡರ್‌ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಗೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು ಈ ವಿಷಯ ತಿಳಿಸಿ, ಇದಕ್ಕಾಗಿ ಪ್ರಧಾನಿ ಮೋದಿ ಸರ್ಕಾರಕ್ಕೆ ಜಿಲ್ಲೆಯ ಜನರ ಪರವಾಗಿ ಹೆಮ್ಮೆಯ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು
ಈ ಟೆಂಡರ್ ನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಮಾರ್ಗ ಆಯ್ಕೆಯ ಮುಕ್ತ ಅವಕಾಶ ನೀಡಲಾಗಿದ್ದು, ಶಿವಮೊಗ್ಗದಿಂದ ಯಾವ ಮಾರ್ಗಕ್ಕೆ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ವಿಮಾನಯಾನ ಸಂಸ್ಥೆಗಳ ವಿವೇಚನೆಗೇ ಬಿಡಲಾಗಿದೆ. ಬಿಡ್ ನಲ್ಲಿ ಪಾಲ್ಗೊಳ್ಳುವ ಸಂಸ್ಥೆಗಳಿಗೆ ಉಡಾನ್ ಸಬ್ಸಿಡಿ ಸೌಲಭ್ಯ ದೊರೆಯಲಿದೆ ಎಂದು ಸಂಸದರು ತಿಳಿಸಿದರು.
ಈ ವರ್ಷದ ಡಿಸೆಂಬರ್ 31 ರವರೆಗೂ ಟೆಂಡರ್ ಸಲ್ಲಿಸಲು ಅವಕಾಶವಿದ್ದು, ಹಿಂದಿನ ಟೆಂಡರ್‌ಗಳಂತೆ ನಿರ್ದಿಷ್ಟ ಸ್ಥಳಗಳು ಅಥವಾ ಮಾರ್ಗಗಳನ್ನು ಈ ಬಾರಿ ಉಲ್ಲೇಖಿಸಿಲ್ಲ. ಇದರಿಂದ ವಿಮಾನಯಾನ ನಡೆಸುವ ಸಂಸ್ಥೆಗಳಿಗೆ ಮಾರ್ಗ ನಿರ್ಧಾರ ಸುಲಭವಾಗಲಿದೆ ಎಂದು ಹೇಳಿದರು.
ಈ ಬಾರಿ ಟೆಂಡರ್ ಪ್ರಕ್ರಿಯೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣ ಹೊರಗುಳಿಯುವ ಆತಂಕ ಇತ್ತು. ಹಾಗಾಗದೆ ಇರಲುತಮ್ಮ ನಿರಂತರ ಪ್ರಯತ್ನಗಳ ಜೊತೆಗೆ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಒತ್ತಾಸೆ ಕೂಡ ಕಾರಣವಾಗಿವೆ ಎಂದ ಸಂಸದರು. ಅವರಿಗೆ ಕೂಡ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಪೂರೈಸಿದೆ. ಆದರೆ ಉಡಾನ್ ಸೇವೆ ಜಾರಿಯಾಗಲು ಕೆಲವು ಕಾಲ ಹಿಡಿಯಲಿದೆ. 2027 ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳವರೆಗೆ ಕಾಲ ತೆಗೆದುಕೊಳ್ಳಬಹುದು. ಅಂದರೆ ಸರಿ ಸುಮಾರು 3 ತಿಂಗಳ ಕಾಲ ವಿಮಾನಯಾನ ಸ್ಥಗಿತದ ಅವಧಿ ಇರಬಹುದು. ಇದಾಗಬಾರದು. ಆ ಮಧ್ಯಂತರ ಅವಧಿಯಲ್ಲಿ (ಅಂದಾಜು 2-3 ತಿಂಗಳವರೆಗೆ) ರಾಜ್ಯ ಸರ್ಕಾರ ವಿಜಿಎಫ್ (VGF - Viable Gap Funding) ಯೋಜನೆಯಡಿ ಕನಿಷ್ಠ ಶಿವಮೊಗ್ಗ–ಬೆಂಗಳೂರು ಮತ್ತು ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಿಗೆ ಅಥವಾ ಒಂದು ಮಾರ್ಗಕ್ಕಾದರೂ ತಾತ್ಕಾಲಿಕ ನೆರವು ನೀಡಿ, ವಿಮಾನ ಸೇವೆ ಒದಗಿಸಲು ನೆರವಾಗಬೇಕು ಎಂದು ರಾಜ್ಯ ಸರ್ಕಾರವನ್ನು ಸಂಸದರು ಒತ್ತಾಯಿಸಿದರು.
ಈ ಹಿಂದಿನ ಕಾನೂನಿನಂತೆ ಉಡಾನ್ ಅವಧಿ ಮುಗಿದ ಬಳಿಕ ಒಂದು ವರ್ಷದ ವಾಣಿಜ್ಯ ವಿರಾಮ (ಕಮರ್ಷಿಯಲ್ ಬ್ರೇಕ್) ಇರುತ್ತಿತ್ತು, ಆದರೆ ಈ ಬಾರಿ ಯಾವುದೇ ವಿರಾಮವಿಲ್ಲದೆ ಮುಂದಿನ ಟೆಂಡರ್‌ನಲ್ಲಿ ಶಿವಮೊಗ್ಗ ಸೇರ್ಪಡೆಯಾಗಿರುವುದರಿಂದ, ಮುಂದಿನ ಐದು ವರ್ಷಗಳ ಕಾಲ ಉಡಾನ್ ಯೋಜನೆಯಿಂದಾಗಿ ಶಿವಮೊಗ್ಗ ವಾಣಿಜ್ಯವಾಗಿ ಬೆಳೆದು ಸಹಜವಾಗಿಯೇ ವಿಮಾನ ಸೇವೆಗಳು ಬರುವ ವಿಶ್ವಾಸವಿದೆ ಎಂದು ಅವರು ಸಂಸದ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ಕಾರ್ಗೋ ವಿಮಾನ ಸೇವೆ ಮತ್ತು ನೈಟ್ ಲ್ಯಾಂಡಿಂಗ್ ಕುರಿತು ಮಾತನಾಡಿದ ಸಂಸದರು, ಕಾರ್ಗೋ ಸೇವೆಯೂ ಸೇರಿದಂತೆ ಎಲ್ಲವೂ ಸ್ಥಳೀಯ ಬೇಡಿಕೆ, ಬೆಳೆಗಳು ಹಾಗೂ ರಫ್ತು ಅವಕಾಶಗಳನ್ನು ಆಧರಿಸಿ ಸಮೀಕ್ಷೆ ನಡೆಸಿ ನಿರ್ಧರಿಸಲಾಗುತ್ತದೆ, ಜೊತೆಗೆ ಮೂರು ವಿಮಾನಯಾನ ಸಂಸ್ಥೆಗಳೊಂದಿಗೆ ಟೆಂಡರ್‌ನಲ್ಲಿ ಪಾಲ್ಗೊಳ್ಳುವ ಕುರಿತು ಈಗಾಗಲೇ ಮಾತುಕತೆ ನಡೆಸುವ ಪ್ರಯತ್ನ ಸಾಗಿದೆ ಎಂದು ತಿಳಿಸಿದರು.