ಇವರಿಗೆ ಹಾಲಲ್ಲ, ದನಗಳ ಸಗಣಿಯೇ ಬಂಗಾರ; ಹೊಲದಲ್ಲಿ ದನ ಕಟ್ಟಿದರೆ ದಿನಕ್ಕೆ ₹1,500, ಸಗಣಿ ಗುಡ್ಡೆಗೆ ₹50 ಸಾವಿರ

Published : Nov 24, 2026, 02:17 PM IST
koppal farmers cattle dung income cattle grazing

ಸಾರಾಂಶ

ನಗರದ ಜನರಿಗೆ ಆಧುನಿಕ ಜೀವನ, ಐಷಾರಾಮಿ ಮನೆ, ಕಾರು, ದೊಡ್ಡ ಸಂಬಳವೇ ಬದುಕಿನ ಭಾಗವಾಗಿರಬಹುದು. ಆದರೆ ಹಳ್ಳಿಗಳಲ್ಲಿ ಇಂದಿಗೂ ಪ್ರಕೃತಿಯನ್ನೇ ನಂಬಿ, ಜಾನುವಾರುಗಳನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಬದುಕುತ್ತಿರುವ ಅನೇಕ ಕುಟುಂಬಗಳಿವೆ.

ನಗರದ ಜನರಿಗೆ ಆಧುನಿಕ ಜೀವನ, ಐಷಾರಾಮಿ ಮನೆ, ಕಾರು, ದೊಡ್ಡ ಸಂಬಳವೇ ಬದುಕಿನ ಭಾಗವಾಗಿರಬಹುದು. ಆದರೆ ಹಳ್ಳಿಗಳಲ್ಲಿ ಇಂದಿಗೂ ಪ್ರಕೃತಿಯನ್ನೇ ನಂಬಿ, ಜಾನುವಾರುಗಳನ್ನೇ ಆಸ್ತಿಯನ್ನಾಗಿ ಮಾಡಿಕೊಂಡು ಬದುಕುತ್ತಿರುವ ಅನೇಕ ಕುಟುಂಬಗಳಿವೆ. ಅಂಥದ್ದೇ ಒಂದು ವಿಭಿನ್ನ ಬದುಕಿನ ಪರಿಚಯ ಇಲ್ಲಿದೆ. ಇಲ್ಲಿ ದನಗಳ ಸಗಣಿಯೇ ಇವರಿಗೆ ಆದಾಯದ ಮೂಲ. ಅದರಿಂದಲೇ ಕುಟುಂಬಗಳ ಹೊಟ್ಟೆಪಾಡು ನಡೆಯುತ್ತಿದೆ.

ಕೊಪ್ಪಳದ ಶಹಪುರ ಗ್ರಾಮದಲ್ಲಿ ವಿಶಿಷ್ಟ ಜೀವನ

ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲೂಕಿನ ಶಹಪುರ ಗ್ರಾಮದಲ್ಲಿ ಹಲವು ಕುಟುಂಬಗಳು ತಲೆಮಾರುಗಳಿಂದ ದನ ಸಾಕಣೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿವೆ. ಇಲ್ಲಿ ಸುಮಾರು 800ರಿಂದ 900 ದನಗಳನ್ನು ಸಾಕಲಾಗುತ್ತಿದೆ. ಕಿಲಾರಿ, ಹಳ್ಳಿಕಾರ್ ಸೇರಿದಂತೆ ದೇಶಿ ತಳಿಯ ದನಗಳನ್ನು ಸಾಕುತ್ತಿರುವ ಈ ಕುಟುಂಬಗಳು ಕೃಷಿಕರಿಗೆ ಸಾವಯವ ಗೊಬ್ಬರ ಒದಗಿಸುವ ಕೆಲಸವನ್ನೂ ಮಾಡುತ್ತಿವೆ.

ರಮೇಶ್ ಎಂಬುವವರು ಕಲಾಮಾಧ್ಯಮಕ್ಕೆ ಹೇಳುವ ಪ್ರಕಾರ, ಅವರ ಕುಟುಂಬದವರಿಗೆ ದನ ಸಾಕಣೆಯೇ ಬದುಕು ಮತ್ತು ದುಡಿಮೆ. ಒಬ್ಬೊಬ್ಬರು ಸುಮಾರು 100ರಿಂದ 105 ದನಗಳನ್ನು ಸಾಕುತ್ತಿದ್ದಾರೆ. ನಾಲ್ಕೈದು ಮನೆಗಳು ಹಾಗೂ ಆರು-ಏಳು ಕುಟುಂಬಗಳ ಸದಸ್ಯರು ಒಟ್ಟಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

200 ದನಗಳನ್ನು ಹೊಲದಲ್ಲಿ ಕಟ್ಟಿ ಸಗಣಿ ಸಂಗ್ರಹ

ಈ ಕುಟುಂಬಗಳ ಆದಾಯದ ಪ್ರಮುಖ ಮೂಲ ದನಗಳ ಸಗಣಿ. ರೈತರು ತಮ್ಮ ಹೊಲಗಳಲ್ಲಿ ದನಗಳನ್ನು ಕಟ್ಟಲು ಅವಕಾಶ ನೀಡುತ್ತಾರೆ. ಅಲ್ಲಿ ದನಗಳು ಮೇಯುವುದರ ಜೊತೆಗೆ ಸಗಣಿ ಹಾಕುತ್ತವೆ. ಇದರಿಂದ ಹೊಲದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಇದಕ್ಕಾಗಿ ಸುಮಾರು 200 ದನಗಳನ್ನು ಹೊಲದಲ್ಲಿ ಕಟ್ಟಿದರೆ ಒಂದು ದಿನಕ್ಕೆ 1,500 ರೂಪಾಯಿಯವರೆಗೆ ಹಣ ಸಿಗುತ್ತದೆ ಎಂದು ರೈತರು ತಿಳಿಸಿದ್ದಾರೆ. ಒಂದು ಹೊಲದಲ್ಲಿ ಕೆಲವು ದಿನಗಳ ಕಾಲ ದನಗಳನ್ನು ಕಟ್ಟಿದ ಬಳಿಕ ಮತ್ತೊಂದು ಹೊಲಕ್ಕೆ ತೆರಳುತ್ತಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಪರಿಚಯದ ರೈತರನ್ನು ಸಂಪರ್ಕಿಸಿ ಈ ಕೆಲಸ ಮುಂದುವರಿಸುತ್ತಾರೆ.

ತಿಂಗಳಿಗೊಮ್ಮೆ ಸಗಣಿ ಗುಡ್ಡೆ ಸಿದ್ಧ

ದನಗಳನ್ನು ಒಂದೇ ಸ್ಥಳದಲ್ಲಿ ಕಟ್ಟಿದಾಗ ಸಂಗ್ರಹವಾಗುವ ಸಗಣಿಯನ್ನು ಪ್ರತ್ಯೇಕವಾಗಿ ಗುಡ್ಡೆ ಮಾಡಲಾಗುತ್ತದೆ. ಸುಮಾರು 150 ದನಗಳಿಂದ ಒಂದು ತಿಂಗಳ ಅವಧಿಯಲ್ಲಿ ಸಂಗ್ರಹವಾಗುವ ಸಗಣಿಯನ್ನು ಒಂದು ಗುಡ್ಡೆಯಾಗಿ ರೂಪಿಸುತ್ತಾರೆ.

ಇದನ್ನು ಅಡಿಕೆ ತೋಟ, ಬಾಳೆ ತೋಟ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಖರೀದಿಸುತ್ತಾರೆ. ಒಂದು ಗುಡ್ಡೆಗೆ ಸುಮಾರು 50 ಸಾವಿರ ರೂಪಾಯಿ ಬೆಲೆ ನಿಗದಿಪಡಿಸಿ ಮಾರಾಟ ಮಾಡುವುದಾಗಿ ಅವರು ಹೇಳುತ್ತಾರೆ. ರೈತರು ಈ ಸಗಣಿಯನ್ನು ಗೊಬ್ಬರವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸಹಾಯವಾಗುತ್ತದೆ.

ಬೆಳಗ್ಗೆ 5 ಗಂಟೆಗೆ ಆರಂಭವಾಗುವ ದಿನಚರಿ

ಇವರ ಜೀವನ ಸುಲಭವಲ್ಲ. ಪ್ರತಿದಿನ ಬೆಳಗ್ಗೆ ಸುಮಾರು 5 ಗಂಟೆಗೆ ಎದ್ದು ದನಗಳ ಆರೈಕೆ ಮಾಡುತ್ತಾರೆ. ಹಾಲು ಹಿಂಡುವುದು, ದನಗಳಿಗೆ ಮೇವು ಒದಗಿಸುವುದು, ಸಗಣಿ ಸಂಗ್ರಹಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡುತ್ತಾರೆ. ಬೆಳಗ್ಗೆ ಮತ್ತು ಸಂಜೆ ದನಗಳನ್ನು ಕಟ್ಟುವ ಕೆಲಸ ನಡೆಯುತ್ತದೆ. ನಂತರ ಅವುಗಳನ್ನು ಹತ್ತಿರದ ಗುಡ್ಡ ಮತ್ತು ಕಾಡು ಪ್ರದೇಶಗಳಿಗೆ ಮೇಯಿಸಲು ಕರೆದೊಯ್ಯುತ್ತಾರೆ. ಸಂಜೆ 6 ಗಂಟೆ ಸುಮಾರಿಗೆ ಮತ್ತೆ ದನಗಳನ್ನು ಒಂದೆಡೆ ಸೇರಿಸಿ ಕಟ್ಟುತ್ತಾರೆ.

ಗುಡಿಸಲಲ್ಲೇ ವಾಸ, ಸರಳ ಜೀವನ

ಈ ಕುಟುಂಬಗಳ ಬದುಕಿನ ಮತ್ತೊಂದು ವಿಶೇಷವೆಂದರೆ ಇವರ ಸರಳ ಜೀವನಶೈಲಿ. ದನಗಳನ್ನು ಕಟ್ಟಿರುವ ಹೊಲಗಳ ಬಳಿಯೇ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡು ರಾತ್ರಿ ಅಲ್ಲಿಯೇ ವಾಸಿಸುತ್ತಾರೆ. ಮಳೆ ಬಂದಾಗಲೂ ಲಭ್ಯವಿರುವ ಸರಳ ವ್ಯವಸ್ಥೆಯಲ್ಲೇ ರಾತ್ರಿ ಕಳೆಯುತ್ತಾರೆ. ಊಟಕ್ಕಾಗಿ ತಮ್ಮ ಮನೆಗಳಿಗೆ ತೆರಳಿ ಮತ್ತೆ ದನಗಳ ಬಳಿಗೆ ವಾಪಸ್ ಬರುತ್ತಾರೆ. ಆಧುನಿಕ ಸೌಲಭ್ಯಗಳಿಲ್ಲದಿದ್ದರೂ ತಮ್ಮ ಕೆಲಸ ಮತ್ತು ಬದುಕಿನ ಬಗ್ಗೆ ಅವರಿಗೆ ತೃಪ್ತಿಯಿದೆ.

100 ವರ್ಷಗಳಿಂದ ಮುಂದುವರಿದ ಉದ್ಯೋಗ

ಇದು ನಿನ್ನೆಯೋ ಮೊನ್ನೆಯೋ ಆರಂಭವಾದ ಕೆಲಸವಲ್ಲ. ಅಪ್ಪನ ಕಾಲದಿಂದಲೂ ಸುಮಾರು 100 ವರ್ಷಗಳಿಂದ ಇದೇ ಉದ್ಯೋಗವನ್ನು ಮುಂದುವರಿಸಿಕೊಂಡು ಬರುತ್ತಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕೆಲವರು ಎಂಟನೇ ತರಗತಿಯವರೆಗೆ ಓದಿ ನಂತರ ಕುಟುಂಬದ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ದನಗಳಿಂದ ಸಿಗುವ ಸಗಣಿಯನ್ನು ಮಾರಾಟ ಮಾಡುವುದರ ಜೊತೆಗೆ ಕರುಗಳನ್ನು ಕೂಡ ರೈತರಿಗೆ ಮಾರಾಟ ಮಾಡುತ್ತಾರೆ. ಕರುಗಳ ಗಾತ್ರಕ್ಕೆ ಅನುಗುಣವಾಗಿ ಸುಮಾರು 10 ಸಾವಿರದಿಂದ 12 ಸಾವಿರ ರೂಪಾಯಿವರೆಗೆ ಬೆಲೆ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಸಗಣಿಯಲ್ಲಿದೆ ಅನ್ನದ ದಾರಿ

ಸಾಮಾನ್ಯವಾಗಿ ಹಲವರು ಸಗಣಿಯನ್ನು ತ್ಯಾಜ್ಯವೆಂದು ಭಾವಿಸಬಹುದು. ಆದರೆ ಈ ಕುಟುಂಬಗಳಿಗೆ ಅದೇ ಜೀವನದ ಆಧಾರ. ದನಗಳ ಸಗಣಿಯನ್ನು ಸಂಗ್ರಹಿಸಿ ರೈತರ ಹೊಲಗಳಿಗೆ ಗೊಬ್ಬರವಾಗಿ ತಲುಪಿಸುತ್ತಾರೆ. ಆ ಹೊಲಗಳಲ್ಲಿ ಬೆಳೆದ ಅಕ್ಕಿ, ರಾಗಿ, ಜೋಳ ಮತ್ತು ಬೇಳೆ ಕೊನೆಗೆ ನಮ್ಮೆಲ್ಲರ ಊಟದ ತಟ್ಟೆ ಸೇರುತ್ತವೆ.

ಹೀಗಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಕಷ್ಟದ ಕೆಲಸ ಮಾಡುತ್ತಿರುವವರ ಶ್ರಮವನ್ನು ಮರೆಯುವಂತಿಲ್ಲ. ನಮ್ಮ ತಟ್ಟೆಗೆ ಅನ್ನ ತಲುಪುವ ಹಿಂದೆ ರೈತರಷ್ಟೇ ಅಲ್ಲದೆ, ಜಾನುವಾರು ಸಾಕಣೆ ಮತ್ತು ಸಾವಯವ ಗೊಬ್ಬರ ಉತ್ಪಾದನೆಯಲ್ಲಿ ತೊಡಗಿರುವ ಇಂತಹ ಕುಟುಂಬಗಳ ಕೊಡುಗೆಯೂ ಮಹತ್ವದ್ದಾಗಿದೆ.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಕೇಸ್: ಕೋರ್ಟ್‌ನಲ್ಲಿ ಮತ್ತೊಬ್ಬ ಸಾಕ್ಷಿ ಕೂಡ ಯು-ಟರ್ನ್, ಪ್ರಕರಣದಲ್ಲಿ ಸಾಲು ಸಾಲು ಸಾಕ್ಷಿಗಳು ಉಲ್ಟಾ!
ಆಂಧ್ರ, ತಮಿಳುನಾಡು ಬಿಟ್ಟು ಸ್ಯಾಟಲೈಟ್‌ ಉತ್ಪಾದನಾ ಕೇಂದ್ರಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ Pixxel