ಮದುವೆ ನಂತರದ ಬೀಗರ ಊಟ ನಿಷೇಧಿಸಲು ಗ್ರಾಮಸ್ಥರಿಂದ ಒಮ್ಮತದ ನಿರ್ಧಾರ; ಮಹತ್ವದ ಹೆಜ್ಜೆ

Published : Oct 12, 2026, 07:32 AM IST
Non Veg

ಸಾರಾಂಶ

ಗ್ರಾಮಸ್ಥರು ಮದುವೆ ನಂತರ ನಡೆಯುವ ಅದ್ಧೂರಿ ಬೀಗರ ಊಟವನ್ನು (ಬಾಡೂಟ) ನಿಷೇಧಿಸಲು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ದುಂದುವೆಚ್ಚ ಮತ್ತು ಆರ್ಥಿಕ ಹೊರೆಯನ್ನು ತಪ್ಪಿಸಿ, ಆ ಹಣವನ್ನು ಕುಟುಂಬದ ಅಭಿವೃದ್ಧಿಗೆ ಬಳಸುವ ಉದ್ದೇಶದಿಂದ ಈ ಮಾದರಿ ಹೆಜ್ಜೆ ಇಡಲಾಗಿದೆ.

ಎಚ್.ಕೆ.ಬಿ. ಸ್ವಾಮಿ

ಶಿವಮೊಗ್ಗ: ವಿವಾಹದ ನಂತರ ಆರತಕ್ಷತೆಯ ನೆಪದಲ್ಲಿ ನಡೆಯುವ ಅದ್ಧೂರಿ ಬೀಗರ ಊಟ (ಬಾಡೂಟ) ಹೆಚ್ಚು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ಮನಗಂಡ ತಾಲೂಕಿನ ಚಿಕ್ಕಶಕುನ ಮತ್ತು ಶೀಗೇಹಳ್ಳಿ ಅವಳಿ ಗ್ರಾಮಸ್ಥರು ಬೀಗರ ಊಟದ ಪದ್ಧತಿಯನ್ನು ನಿಷೇಧಿಸುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ.

ಮಾಂಸಾಹಾರಿ ಬೀಗರ ಊಟಕ್ಕೆ ಕಡಿವಾಣ ಹಾಕುವ ನಿರ್ಧಾರ

ಅದ್ಧೂರಿ ಬೀಗರ ಊಟ ನಿಷೇಧ ಕುರಿತು ತಾಲೂಕಿನ ಚಿಕ್ಕಶಕುನ ಮತ್ತು ಶೀಗೇಹಳ್ಳಿ ಗ್ರಾಮಸ್ಥರು ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ಸೇರಿ ತಮ್ಮ ಗ್ರಾಮಗಳ ಯಾವುದೇ ಕುಟುಂಬ ಅದ್ಧೂರಿ ಬೀಗರ ಊಟ ನಡೆಸದಿರಲು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಸರಳ ಆಚರಣೆಗಳಿಗೆ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಮೂಲಕ ತಾಲೂಕಿನಲ್ಲಿ ಸ್ವಯಂ ಪ್ರೇರಿತವಾಗಿ ಅದ್ಧೂರಿ ಮಾಂಸಾಹಾರಿ ಬೀಗರ ಊಟಕ್ಕೆ ಕಡಿವಾಣ ಹಾಕುವ ನಿರ್ಧಾರ ಪ್ರಕಟಿಸಿರುವ ಚಿಕ್ಕಶಕುನ, ಶೀಗೇಹಳ್ಳಿ ಗ್ರಾಮಗಳು ಗಮನ ಸೆಳೆದು ಪ್ರೇರಣೆಯಾಗುವ ಮೂಲಕ ತಾಲೂಕಿನ ಪ್ರತೀ ಗ್ರಾಮಗಳಲ್ಲಿ ಆಂದೋಲನ ಪ್ರಾರಂಭವಾಗುವ ಲಕ್ಷಣಗಳು ಕಂಡು ಬಂದಿದೆ.

ಸೊರಬ, ಸಾಗರ, ಶಿಕಾರಪುರ, ಹೊಸನಗರ, ತೀರ್ಥಹಳ್ಳಿ ತಾಲೂಕು ಸೇರಿದಂತೆ ಮಲೆನಾಡು ದೀವರು (ಈಡಿಗ) ಸಮುದಾಯದಲ್ಲಿ ಮದುವೆ ಸಂದರ್ಭದಲ್ಲಿ ನಡೆಯುವ ಬೀಗರೂಟದ ಆಚರಣೆ ಹೆಚ್ಚು ಪ್ರಚುರದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ಇದನ್ನು ಇತರೆ ಸಮುದಾಯಗಳು ಸಹ ಅನುಸರಿಸುತ್ತಿವೆ. ಇದು ವರ್ಷದಿಂದ ವರ್ಷಕ್ಕೆ ಪ್ರತಿಷ್ಠೆಯ ಸಂಕೇತವಾಗಿ ಮಾರ್ಪಡುತ್ತಿದ್ದು, ದುಂದು ವೆಚ್ಚದ ಪೈಪೋಟಿಗೆ ಕಾರಣವಾಗುತ್ತಿದೆ. ಮದುವೆ ಮುಹೂರ್ತಕ್ಕೆ ಹೆಚ್ಚು ಜನ ಸೇರದಿದ್ದರೂ ವಿವಾಹ ಮರುದಿನದ ಬೀಗರ ಊಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂಧು, ಬಳಗದವರು ಹಾಗೂ ಮಿತ್ರರು ಸೇರಿ ಭೋಜನ ಸವಿಯುತ್ತಾರೆ. ಇದಕ್ಕೆ ಸುಮಾರು ನಾಲ್ಕೈದು ಲಕ್ಷ ರು.ಗಳ ಖರ್ಚಾಗುತ್ತದೆ.

ಕುಟುಂಬಗಳ ಮೇಲೆ ಆರ್ಥಿಕ ಹೊರೆ

ಬರಗಾಲ ಹಾಗೂ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿಯೂ ಇಂತಹ ಆಚರಣೆಗಳಿಂದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಇದಕ್ಕೆ ಬಡ ಕುಟುಂಬಗಳು ಹೊರತಾಗಿಲ್ಲ. ಸಾಲ ಮಾಡಿಯಾದರೂ ಬೀಗರೂಟದ ಅತಿಥ್ಯ ನೀಡಬೇಕು ಎನ್ನುವ ಮನೋಭಾವ ಬೆಳೆದಿದೆ. ಇದಕ್ಕೆ ಕಡಿವಾಣ ಹಾಕುವ ಮೂಲಕ ಆರ್ಥಿಕ ಸಂಕಷ್ಟದಿಂದ ಬಿಡುಗಡೆ ನೀಡುವುದು ಸಾಮಾಜಿಕ ಕಳಕಳಿಯಾಗಿದೆ ಎನ್ನುವುದು ಗ್ರಾಮಸ್ಥರ ಅಭಿಮತವಾಗಿದೆ.

ಬೀಗರೂಟಕ್ಕಾಗಿ ಮಾಡುವ ಅನಗತ್ಯ ಖರ್ಚನ್ನು ತಪ್ಪಿಸಿ, ಆ ಹಣವನ್ನು ಕುಟುಂಬದ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳುವುದರಿಂದ ಸಾಲದ ಸುಳಿಗೆ ಸಿಲುಕುವುದನ್ನು ಕಡಿಮೆ ಮಾಡಬಹುದು ಎನ್ನುವ ಉದ್ದೇಶದಿಂದ ಎಲ್ಲಾ ಗ್ರಾಮಸ್ಥರ ಒಕ್ಕೊರಲಿನಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಿಕ್ಕಶಕುನ, ಶೀಗೇಹಳ್ಳಿ ಗ್ರಾಮದ ಅಧ್ಯಕ್ಷರಾದ ಸಣ್ಣಪ್ಪ, ಕೆರಿಯಪ್ಪ ಮತ್ತು ಗ್ರಾಮಸ್ಥರಾದ ವೀರಭದ್ರ, ಪರಶುರಾಮ, ವೈ.ಜಿ. ಗುರುಮೂರ್ತಿ, ರುದ್ರೇಶ್, ರಾಮಪ್ಪ, ರಾಮಪ್ಪ ಮೈಲಾನ್, ಸೀನಪ್ಪ, ಅಶೋಕ, ನಾಗರಾಜ ತಿಳಿಸಿದ್ದಾರೆ.

ನಮ್ಮ ಹಿರಿಯರು ನಮಗಾಗಿ ಉಳಿಸಿ ಹೋದ ಶಾಸ್ತ್ರ, ಸಂಪ್ರದಾಯ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಸಮಾಜಕ್ಕೆ ಹೊರೆಯಾಗದ ರೀತಿಯಲ್ಲಿ ಮುಂದುವರಿಸಿದಾಗ ಮಾತ್ರ ಅವುಗಳ ನಿಜವಾದ ಆಶಯ ಸಾರ್ಥಕವಾಗುತ್ತದೆ. ಮದುವೆ ನಂತರದ ಬೀಗರ ಊಟದಲ್ಲಿ ಆರ್ಥಿಕ ಹೊರಯಾಗುವುದಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಇದೆ. ಅವಳಿ ಗ್ರಾಮಗಳು ಬೀಗರೂಟ ನಿಷೇಧತೆಯನ್ನು ತೆಗೆದುಕೊಂಡಿರುವ ನಿರ್ಧಾರ ಸಮಾಜಕ್ಕೆ ಮಾದರಿಯಾಗಿದೆ. ಈ ರೀತಿಯ ಪ್ರಕ್ರಿಯೆ ಪ್ರತಿ ಗ್ರಾಮದಲ್ಲಿಯೂ ನಡೆಯಬೇಕಿದೆ.

- ಎಂ.ಎಲ್. ನೋಪಿ ಶಂಕರ, ತಾಲೂಕು ಅದ್ಧೂರಿ ಬೀಗರೂಟ ಆಂದೋಲನ ಮುಖ್ಯಸ್ಥ:

ಇಂದು ಮಾಡುವ ಅನಗತ್ಯ ಖರ್ಚು ನಾಳೆ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಾರದು. ಮಕ್ಕಳ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಕುಟುಂಬದ ಭವಿಷ್ಯಕ್ಕಾಗಿ ಬಳಸಬೇಕಾದ ಹಣವನ್ನು ಕೇವಲ ಜನರ ಮೆಚ್ಚುಗೆಗಾಗಿ ಖರ್ಚು ಮಾಡುವುದು ವಿವೇಕಯುತ ನಡೆ ಎನಿಸಿಕೊಳ್ಳುವುದಿಲ್ಲ. ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯಗಳನ್ನು ಗೌರವದಿಂದ ಮುಂದುವರಿಸಬೇಕು. ಆದರೆ ಸಂಪ್ರದಾಯದ ಹೆಸರಿನಲ್ಲಿ ವೈಯಕ್ತಿಕ ಪ್ರತಿಷ್ಠೆಗಾಗಿ ಪೈಪೋಟಿಗೆ ಇಳಿಯುವುದು ಸರಿಯಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಬೀಗರ ಊಟ (ಬಾಡೂಟ) ನಿಷೇಧಿಸಲಾಗಿದೆ.

– ವೈ.ಜಿ. ಗುರುಮೂರ್ತಿ, ಶೀಗೇಹಳ್ಳಿ ಗ್ರಾಮಸ್ಥ

PREV
Read more Articles on
click me!

Recommended Stories

ಶಿವಮೊಗ್ಗ, ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಂಸದ ರಾಘವೇಂದ್ರ
ಮಂಗಳೂರು: ಶಿರ್ಲಾಲು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಅಪರೂಪದ ಕರಿಚಿರತೆ!