92 ವರ್ಷದ ವೃದ್ಧೆಯೂ ಸೇರಿ 11 ಜನರ ಕುಟುಂಬ ಕೊರೋನಾ ಗೆದ್ದಿತು

By Suvarna NewsFirst Published Apr 27, 2021, 10:10 PM IST
Highlights

ಕೊರೋನಾ ವಿರುದ್ಧ ಹೋರಾಡಿ ಗೆದ್ದು ಬಂದ ಕುಟುಂಬ/ ಒಂದೇ ಕುಟುಂಬದ ಹನ್ನೊಂದು ಜನರಿಗೆ ಕೊರೋನಾ/ ಬೆಂಗಳೂರಿನಲ್ಲಿ ನಡೆದ ಮದುವೆಗೆ ಹೋಗಿದ್ದರು/ 62 ವರ್ಷದ ವೃದ್ದೆಯಿಂದ ಹಿಡಿದು 9 ವರ್ಷದ ಬಾಲಕಿ ಸೇರಿದಂತೆ ಒಟ್ಟು 11 ಜನರಿಗೆ ಕೊರೋನಾ

ಶಿವಮೊಗ್ಗ (ಏ.28):  ಒಂದು ಕಡೆ ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಸೋಂಕು ಜಯಿಸಿ ಬಂದ ಅದೃಷ್ಟಶಾಲಿಗಳ ದಂಡೂ ಅಷ್ಟೇ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಶಿಕಾರಿಪುರದಲ್ಲಿ 92 ವರ್ಷದ ವೃದ್ಧೆ ಸೇರಿ ಒಂದೇ ಕುಟುಂಬದ 11 ಕೊರೋನಾ ಗೆದ್ದಿರುವುದು ಸೋಂಕಿಗೆ ತುತ್ತಾಗಿ ಆತಂಕಕ್ಕೊಳಗಾಗಿರುವವರು ಮತ್ತು ಅವರ ಕುಟುಂಬ ಸದಸ್ಯರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಜಿಲ್ಲೆಯ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ತಾಳಗುಂದ ಹೋಬಳಿ ಮಾಳಗೊಂಡನಕೊಪ್ಪ ಗ್ರಾಮದ ಹಿರಿಯಜ್ಜಿ ಇಂದಿರಾ ಬಾಯಿ ಅವರ ಪರಿವಾರವೇ ಈ ಕೊರೋನಾ ಗೆದ್ದ ಕುಟುಂಬ. ಕುಟುಂಬದ 92 ವರ್ಷದ ಅಜ್ಜಿ ಇಂದಿರಾಬಾಯಿ, 70 ವರ್ಷದ ಪುತ್ರ ಸುಶೀಲೇಂದ್ರರಾವ್‌ ಸೇರಿ ಎಲ್ಲರೂ ಗುಣಮುಖರಾಗಿ ಮನೆಗೆ ಮರಳಿರುವುದು ಎಲ್ಲರ ಖುಷಿಗೆ ಪಾತ್ರವಾಗಿದೆ. ಸದ್ಯ ಕುಟುಂಬದ ಎಲ್ಲ 11 ಮಂದಿ ಆರೋಗ್ಯದಿಂದಿದ್ದಾರೆ.

ಕಾರ್ಯಕ್ರಮದಲ್ಲಿ ಅಂಟಿತು: ಈ ದೊಡ್ಡ ಕುಟುಂಬದಲ್ಲಿ ಕೆಲವರು ಏ.4 ರಂದು ಬೆಂಗಳೂರಿನಲ್ಲಿ ನಡೆದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಹಾಗೂ ಅದೇ ದಿನ ದಾವಣಗೆರೆಯಲ್ಲಿ ನಡೆದ ಸಂಬಂಧಿಕರ ಸಮಾರಂಭದಲ್ಲಿ ಇನ್ನು ಕೆಲವರು ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾದ ಬಳಿಕ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಮೊದಲು ಜ್ವರ ಕಾಣಿಸಿಕೊಂಡಿದೆ. ಅನುಮಾನಗೊಂಡು ಕೋವಿಡ್‌ ತಪಾಸಣೆಗೆ ಒಳಗಾದಾಗ ಸೋಂಕು ದೃಢಪಟ್ಟಿದೆ.

ಸಾವಿರ ಮಂದಿ ಇರೋ ಹಿಂಡಲಗಾ ಜೈಲ್ ಕೊರೋನಾದಿಂದ ಫುಲ್ ಸೇಫ್ : ಹೇಗೆ..?

ಈ ಹಿನ್ನೆಲೆಯಲ್ಲಿ ಕುಟುಂಬದ 92 ವರ್ಷದ ಅಜ್ಜಿ ಇಂದಿರಾಬಾಯಿ ಅವರಿಂದ ಮೊದಲ್ಗೊಂಡು 9 ವರ್ಷದ ಬಾಲಕಿ ಸೇರಿ ಎಲ್ಲ 11 ಮಂದಿಯೂ ಕೋವಿಡ್‌ ಪರೀಕ್ಷೆಗೆ ಒಳಪಟ್ಟರು. ಈ ವೇಳೆ ಎಲ್ಲರಿಗೂ ಸೋಂಕು ತಗುಲಿರುವುದು ಖಚಿತವಾಯಿತು. ಹೀಗಾಗಿ ಕುಟುಂಬದ ಎಲ್ಲಾ ಹನ್ನೊಂದು ಮಂದಿಯೂ ತಕ್ಷಣ ಸಮೀಪದ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಾದರು. ಅಲ್ಲಿ ಚಿಕಿತ್ಸೆ ಪಡೆದ ನಂತರ ಕುಟುಂಬದ ಅಷ್ಟೂಸದಸ್ಯರು ಸೋಂಕಿನಿಂದ ಗುಣಮುಖರಾಗಿದ್ದು, ಏ.24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯಕ್ಕೆ ಮನೆಗೆ ವಾಪಸಾಗಿರುವ ಇವರಲ್ಲಿ ಕೊರೋನಾ ದೃಢಪಟ್ಟಾಗ ಇದ್ದ ಆತಂಕ ಮಾಯವಾಗಿದೆ. ಎಲ್ಲರೂ 92 ವರ್ಷದ ಅಜ್ಜಿಯೂ ಮೊದಲ್ಗೊಂಡು ಕೊರೋನಾ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ.

click me!