ಗಡಿ ವಿವಾದ: ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರ ಸರಣಿ ಸಭೆ

By Kannadaprabha News  |  First Published Dec 1, 2022, 8:00 AM IST

ಕರ್ನಾಟಕ-ಮಹಾರಾಷ್ಟ್ರ ಗಡಿ ತಿಕ್ಕಾಟದ ನಡುವೆಯೇ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್‌ ಅವರು ಡಿ.3ರಂದು ಬೆಳಗಾವಿ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ. 


ಬೆಳಗಾವಿ(ಡಿ.01):  ಕರ್ನಾಟಕ-ಮಹಾರಾಷ್ಟ್ರ ಗಡಿ ತಿಕ್ಕಾಟದ ನಡುವೆಯೇ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್‌ ಅವರು ಡಿ.3ರಂದು ಬೆಳಗಾವಿ ಪ್ರವಾಸ ಕೈಗೊಳ್ಳುವುದು ಖಚಿತವಾಗಿದೆ. ಈ ವೇಳೆ ಅವರು ಬೆಳಗಾವಿಯಲ್ಲಿ ಮರಾಠಿಗರ ಜತೆಗೆ ಸರಣಿ ಸಭೆಗಳನ್ನೂ ನಡೆಸಲಿದ್ದಾರೆ. ಮಹಾರಾಷ್ಟ್ರ ಸಚಿವರ ಈ ಭೇಟಿಗೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಒಂದು ವೇಳೆ ಚಂದ್ರಕಾಂತ ಪಾಟೀಲ್‌ರನ್ನು ತಡೆಯದಿದ್ದರೆ ಮುಂದಾಗುವ ಅನಾಹುತಕ್ಕೆ ಸರ್ಕಾರ, ಜಿಲ್ಲಾಡಳಿತವೇ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆಯನ್ನೂ ನೀಡಿದೆ. ಈ ಮೂಲಕ ಮಹಾರಾಷ್ಟ್ರ ಸಚಿವರ ಈ ಭೇಟಿ ಎರಡೂ ರಾಜ್ಯಗಳ ನಡುವಿನ ಗಡಿ ಸಂಘರ್ಷದ ಕಿಡಿಗೆ ಮತ್ತಷ್ಟುತುಪ್ಪ ಸುರಿಯುವ ಸಾಧ್ಯತೆ ಇದೆ.

ಗಡಿ ವಿಚಾರಕ್ಕೆ ಸಂಬಂಧಿಸಿ ಮಹಾಜನ್‌ ವರದಿಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸುಪ್ರೀಂಕೋರ್ಚ್‌ ಮೆಟ್ಟಿಲೇರಿದ್ದು, ಮುಂದಿನ ವಾರ ಈ ಅರ್ಜಿ ಕುರಿತು ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದರ ನಡುವೆಯೇ ಪದೇ ಪದೆ ಗಡಿ ಗಲಾಟೆ ಎಬ್ಬಿಸಿ ಭಾಷಾ ಸೌಹಾರ್ದತೆ ಕೆಡಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಆಹ್ವಾನದ ಮೇರೆಗೆ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಬೆಳಗಾವಿ ಜಿಲ್ಲೆಯಲ್ಲೇ ಸುತ್ತಾಟ ನಡೆಸಲಿರುವ ಸಚಿವರು, ನಗರ ಸೇರಿ ಗಡಿ ಭಾಗದ ವಿವಿಧ ಹಳ್ಳಿಗಳಲ್ಲಿ ಸಂಚರಿಸಲಿದ್ದಾರೆ. ಮಹಾರಾಷ್ಟ್ರ ಸಚಿವರ ಪ್ರವಾಸದ ಪಟ್ಟಿಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ರವಾನೆಯೂ ಆಗಿದೆ.

Latest Videos

undefined

Belagavi: ಕರ್ನಾಟಕಕ್ಕೆ ಸೇರಲು ನಡೆದಿದೆ ನಿರಂತರ ಹೋರಾಟ

ಹೀಗಿದೆ ಪ್ರವಾಸ ಪಟ್ಟಿ:

ಬೆಳಗಾವಿಗೆ ಆಗಮಿಸಲಿರುವ ಚಂದ್ರಕಾಂತ ಪಾಟೀಲ್‌ ಬೆಳಗ್ಗೆ 11ಕ್ಕೆ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಗಡಿಹೋರಾಟ ವೇಳೆ ಗಲಭೆ ಸೃಷ್ಟಿಸಿ ಮೃತಪಟ್ಟವರ ಸ್ಮರಣಾರ್ಥ ಹಿಂಡಲಗಾ ಗ್ರಾಮದ ಬಳಿ ನಿರ್ಮಿಸಿರುವ ಹುತಾತ್ಮ ಸ್ಮಾರಕಕ್ಕೂ ಭೇಟಿ ನೀಡಲಿದ್ದಾರೆ. ನಂತರ 11.35ಕ್ಕೆ ಬೆಳಗಾವಿಯ ಎಂಇಎಸ್‌ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ತುಕಾರಾಮ ಮಹಾರಾಜ ಸಾಂಸ್ಕೃತಿಕ ಕಾರ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಎಂಇಎಸ್‌ ಮುಖಂಡ ಪ್ರಕಾಶ ಮರಗಾಳೆ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಗಡಿ ಹೋರಾಟದಲ್ಲಿ ಮೃತಪಟ್ಟಮಧು ಬಾಂದೇಕರ, ವಿದ್ಯಾ ಶಿಂಧೋಳ್ಕರ ಅವರ ನಿವಾಸಕ್ಕೆ ತೆರಸಿ ಕೆಲಕಾಲ ಕುಟುಂಬ ಸದಸ್ಯರೊಂದಿಗೆ ಕೆಲಕಾಲ ಚರ್ಚಿಸಲಿದ್ದಾರೆ. ಅಪರಾಹ್ನ 3.15ಕ್ಕೆ ಹಳೇ ಬೆಳಗಾವಿಗೆ ತೆರಳಲಿರುವ ಸಚಿವರು, ಸಂಜೆ 6 ಗಂಟೆಯವರೆಗೂ ಗಡಿ ಭಾಗದ ಸುಳಗಾ, ಉಚಗಾಂವ, ಬೆಳಗುಂದಿ, ಹಿಂಡಲಗಾದ ವಿಜಯನಗರ, ಕಂಗ್ರಾಳಿ ಕೆಎಚ್‌ ಗ್ರಾಮಗಳಲ್ಲಿ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 6ಗಂಟೆಗೆ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಕರವೇ ಎಚ್ಚರಿಕೆ: 

ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲರು ಬೆಳಗಾವಿ ಭೇಟಿ ವೇಳೆ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡಿ ನಾಡದ್ರೋಹಿ ಎಂಇಎಸ್‌ ಜತೆಗೆ ಸಭೆ ಮಾಡುವುದನ್ನು ನಾವು ವಿರೋಧಿಸುತ್ತೇವೆ, ಅವರ ಪ್ರಚೋದನೆಗೆ ತಡೆಯೊಡ್ಡದಿದ್ದರೆ ನಾವೇ ಅವರಿಗೆ ಸರಿಯಾದ ಪಾಠ ಕಲಿಸಬೇಕಾದೀತು ಎಂದು ಕರವೇ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ದೀಪಕ್‌ ಗುಡಗನಟ್ಟಿನೇತೃತ್ವದಲ್ಲಿ ಎಚ್ಚರಿಸಿದೆ.
ಬುಧವಾರ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿರುವ ಕರವೇ ಮುಖಂಡರು, ಒಂದು ವೇಳೆ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಆಗಮಿಸಿದರೆ ಮುಂದಾಗುವ ಅನಾಹುತಕ್ಕೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವೇ ಹೊಣೆಯಾಗಬೇಕಾದೀತು ಎಂದು ಎಚ್ಚರಿಕೆ ನೀಡಿದರು.

ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಬೊಮ್ಮಾಯಿ ಭೇಟಿಗೆ ಆಹ್ವಾನ

ಬೆಳಗಾವಿ: ಗಡಿಭಾಗದ ಕನ್ನಡಿಗರ ಸಮಸ್ಯೆ ಆಲಿಸಲಿಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸೆಂಬರ್‌ ಮೊದಲನೇ ವಾರ ಮಹಾರಾಷ್ಟ್ರ ಕನ್ನಡರಿಗೆ ಆಹ್ವಾನ ನೀಡಿದ್ದಾರೆಂದು ಸಾಂಗ್ಲಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಕನ್ನಡ ಹೋರಾಟಗಾರ ಮಹಾದೇವ ಅಂಕಲಗಿ ಹೇಳಿದ್ದಾರೆ.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ತರ್ಲೆ ಮಾಡೋಕೆ ಬಂದರೆ ಕಠಿಣ ಕ್ರಮ: ಎಡಿಜಿಪಿ ವಾರ್ನಿಂಗ್

ಈ ಸಂಬಂಧ ಬುಧವಾರ ಮಹಾರಾಷ್ಟ್ರ ರಾಜ್ಯದ ಜತ್‌ ತಾಲೂಕಿನ ಮಡಗ್ಯಾಳ ಗ್ರಾಮದಲ್ಲಿ ಕರವೇ ಗೋಕಾಕ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ್‌ ಅವರು ಮಹಾರಾಷ್ಟ್ರ ಗಡಿಭಾಗದ ಕನ್ನಡಿಗರಿಗೆ ಮುಖ್ಯಮಂತ್ರಿ ಭೇಟಿಗೆ ಆಹ್ವಾನ ನೀಡಿದ್ದಾರೆ. ಬೊಮ್ಮಾಯಿ ಅವರು ಮಹಾರಾಷ್ಟ್ರ ರಾಜ್ಯದ ಗಡಿಭಾಗದ ಕನ್ನಡಿಗರ ಮೇಲೆ ಪ್ರೀತಿ ತೋರಿದ್ದಾರೆ. 2012ರಲ್ಲಿ ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾವು ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಸ್ವಂದಿಸಿ ಅವರೂ ನಮಗೆ ಭರವಸೆ ನೀಡಿದರು. ಈಗ ಬೊಮ್ಮಾಯಿ ಅವರೂ ಭೇಟಿಗೆ ಸಮಯಾವಕಾಶ ನೀಡಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಕನ್ನಡಿಗರ ಪರವಾಗಿ ಆಭಾರಿಯಾಗಿದ್ದೇವೆ. ಕರ್ನಾಟಕ ಸರ್ಕಾರದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ. ಆದಷ್ಟುಬೇಗ ಮಹಾರಾಷ್ಟ್ರದ ಕನ್ನಡಿಗರ ಸಮಸ್ಯೆಗಳಿಗೆ ಸ್ವಂದಿಸಿ ಸಹಕಾರ ನೀಡಬೇಕು ಎಂದು ಅಂಕಲಗಿ ಮನವಿ ಮಾಡಿದ್ದಾರೆ.

- ಗಡಿ ವಿವಾದ: ಬೆಂಕಿಗೆ ತುಪ್ಪ ಸುರಿಯಲು ಬರುತ್ತಿದ್ದಾರೆ ಮಹಾರಾಷ್ಟ್ರದ ಸಚಿವರು

- ಮಹಾರಾಷ್ಟ್ರ ಏಕೀಕರಣ ಸಮಿತಿ ಆಹ್ವಾನದ ಮೇರೆಗೆ ಆಗಮನ
- ಗಡಿ ಸಮನ್ವಯ ಸಚಿವ ಚಂದ್ರಕಾಂತ್‌ ಪಾಟೀಲ್‌ರಿಂದ ಸಭೆ
- ಬೆಳಗಾವಿಯಲ್ಲಿ ಮರಾಠಿ ಸಂಘಟನೆಗಳ ಜೊತೆ ಸರಣಿ ಸಭೆ
- ಮಹಾರಾಷ್ಟ್ರ ಸಚಿವರಿಗೆ ಸಭೆ ನಡೆಸಲು ಬಿಡಬೇಡಿ: ಕರವೇ
 

click me!