Mysuru : ' 2024ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ '

By Kannadaprabha NewsFirst Published Dec 1, 2022, 7:35 AM IST
Highlights

ಡಬ್ಬಲ್‌ ಡೆಕ್ಕರ್‌ ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

  ಮೈಸೂರು (ಡಿ.01): ಡಬ್ಬಲ್‌ ಡೆಕ್ಕರ್‌ ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ಮೈಸೂರು ಕಾಂಗ್ರೆಸ್‌ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಸೋಲು ನೂರಕ್ಕೆ ನೂರು ಗ್ಯಾರಂಟಿ. ಈ ಸತ್ಯ ಅರಿವಾಗಿ ಬಿಜೆಪಿಯವರು ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ, ಹತಾಶರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಚುನಾವಣೆ ಕಾರ್ಮೋಡ ಕಾಣಿಸುತ್ತಿದೆ. ಮುಖ್ಯಮಂತ್ರಿ ರಾಜ್ಯದ ಆಡಳಿತ ಮರೆತಿದ್ದಾರೆ. ಮಂತ್ರಿಮಂಡಲ ಹೇಗೆ ಚುನಾವಣೆ ಎದುರಿಸಬೇಕೆಂಬ ಚಿಂತೆಯಲ್ಲಿ ಮಗ್ನರಾಗಿದ್ದಾರೆ. ರಾಜ್ಯವ್ಯಾಪಿ ಪ್ರವಾಸ ಮಾಡುತ್ತ ಮನಸೋ ಇಚ್ಛೆ ಮಾತಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ಸಿಗರು ನಿಜವಾದ ಹಿಂದುಗಳು. ಆರ್‌ಎಸ್‌ಎಸ್‌, ಬಿಜೆಪಿ ಹಿಂದುತ್ವದ ವಿರೋಧಿಗಳು. ಹಿಂದುತ್ವ ತತ್ವ ಸರ್ವೇ ಜನಾ ಸುಖೀನ ಭವಂತು, ವಸುಧೈವ ಕುಟುಂಬಕಂನಲ್ಲಿ ನಂಬಿಕೆ ಇದೆ. ಆದರೆ, ಸಂಘ ಪರಿವಾರ, ಬಿಜೆಪಿಯವರಿಗೆ ಮನುವಾದದಲ್ಲಿ ನಂಬಿಕೆ ಇದೆ. ಹೀಗಾಗಿ ಇವರು ಹಿಂದೂಗಳಲ್ಲ, ಮನುವಾದಿಗಳು ಎಂದು ಕುಟುಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿ ಸಂಬಂಧ ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ, ವಿಚಾರ ಸಂಸತ್‌ನಲ್ಲಿ ಚರ್ಚೆಯಾಗಿ ಅಂಗೀಕರಿಸಬೇಕು. ಬಿಜೆಪಿಯವರು ನಿಜ ಹಿಂದೂತ್ವವಾದಿಗಳಾಗಿದ್ದರೆ ಪಾರ್ಲಿಮೆಂಟಿನಲ್ಲಿ ಅಂಗೀಕಾರ ಮಾಡಬೇಕು ಎಂದು ಅವರು ಆಗ್ರಹಿಸಿದರು.

ರಾಮನಿಗೆ ದ್ರೋಹ

ಕೊಟ್ಟಮಾತಿನಂತೆ ನಡೆದುಕೊಳ್ಳದ, ವಾಗ್ದಾನಗಳನ್ನು ಈಡೇರಿಸದೇ ನಿಜವಾಗಿ ರಾಮನಿಗೆ ದ್ರೋಹ ಬಗೆದವರು ಮೊದಲು ಪ್ರಧಾನಿ ಮೋದಿ ನಂತರ ಬಿಜೆಪಿ ಪರಿವಾರ. 2014ರಲ್ಲಿ ಮೋದಿಯವರು ನೀಡಿದ ವಾಗ್ದಾನಗಳಲ್ಲಿ ಯಾವುದನ್ನು ಈಡೇರಿಸಿದ್ದಾರೆ? ಕಪ್ಪು ಹಣ ತರಲಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಯಿತು. ಕೊಟ್ಟಮಾತಿನಂತೆ ನಡೆದುಕೊಳ್ಳದವರನ್ನು ಏನಂತ ಕರೆಯಬೇಕು ಎಂದು ಪ್ರಶ್ನಿಸಿದರು.

ಸಂವಿಧಾನಕ್ಕೆ ದ್ರೋಹ

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲು ಸಂವಿಧಾನ ಮತ್ತು ಅಂಬೇಡ್ಕರ್‌ ವಿಚಾರಕ್ಕೆ ದ್ರೋಹ ಎಸಗಲಾಗಿದೆ. ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಹಿಂದುಳಿದ ವರ್ಗಗಳಿಗೆ ಯಾವ ಆಧಾರದಲ್ಲಿ ಮೀಸಲು ಕೊಡಬೇಕೆಂದು ಸ್ಪಷ್ಟವಾಗಿ ಬರೆದಿದ್ದಾರೆ. ಅದರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡಬೇಕೆಂದು ಇಲ್ಲ ಎಂದರು.

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಕ್ಕೆ ಮೀಸಲಿಟ್ಟಅನುದಾನವನ್ನು ಆಯಾ ವರ್ಷವೇ ಖರ್ಚು ಮಾಡಬೇಕೆಂದು ಸಿದ್ದರಾಮಯ್ಯ ಕಾನೂನು ತಂದರು. ಈಗಿನ ಬೊಮ್ಮಾಯಿ ಸರ್ಕಾರ ವಿದ್ಯಾರ್ಥಿ ವೇತನ, ಸಂಶೋಧಕರಿಗೆ ಶಿಷ್ಯ ವೇತನ ನೀಡಿಲ್ಲ. ಬೆಂಗಳೂರಿನ ಕೇಶವ ಕೃಪಾ, ಹೆಡ್ಗೇವಾರ್‌ ಭವನದ ನಿರ್ದೇಶನದ ಮೇರೆಗೆ ಕರ್ತವ್ಯ ನಿರ್ವಹಿಸುವ ಬಿಜೆಪಿಯರಿಗೆ ಸ್ವಾತಂತ್ರ್ಯ ಇಲ್ಲ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರಾಧ್ಯಕ್ಷ ಆರ್‌. ಮೂರ್ತಿ, ಮುಖಂಡರಾದ ಭಾಸ್ಕರ್‌ ಗೌಡ, ಬಸವಣ್ಣ, ನಾಗಭೂಷಣ್‌, ಗಿರೀಶ್‌, ಮಹೇಶ್‌ ಇದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ಲಘುವಾಗಿ ಮಾತಾಡುವುದು ಶೋಭ ತರುವುದಿಲ್ಲ. ಸ್ವಾತಂತ್ರ್ಯ ಗಳಿಸಿಕೊಟ್ಟಪಕ್ಷವೊಂದರ ಅಧ್ಯಕ್ಷರಾಗಿ ಸೈದ್ಧಾಂತಿಕವಾಗಿ ಯಾವ ರೀತಿ ಪಕ್ಷವನ್ನು ಮುನ್ನಡೆಸಬೇಕೆಂಬ ಶಕ್ತಿ ಖರ್ಗೆ ಅವರಿಗಿದೆ.

- ವಿ.ಎಸ್‌. ಉಗ್ರಪ್ಪ, ಮಾಜಿ ಸಂಸದ

ಡಬ್ಬಲ್‌ ಡೆಕ್ಕರ್‌ ಸರ್ಕಾರ ಎಲ್ಲ ರೀತಿಯಲ್ಲೂ ವಿಫಲವಾಗಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌. ಉಗ್ರಪ್ಪ ಆರೋಪ

2023ರ ಚುನಾವಣೆಯಲ್ಲಿ ಬಿಜೆಪಿ ಸೋಲು ನೂರಕ್ಕೆ ನೂರು ಗ್ಯಾರಂಟಿ. ಈ ಸತ್ಯ ಅರಿವಾಗಿ ಬಿಜೆಪಿಯವರು ವಾಮಮಾರ್ಗಗಳನ್ನು ಅನುಸರಿಸುತ್ತಿದ್ದಾರೆ,

click me!