ಹೊಸ ವರ್ಷಾಚರಣೆ: ಬೆಂಗ್ಳೂರಿಗೆ ಪ್ರತ್ಯೇಕ ರೂಲ್ಸ್‌..!

By Kannadaprabha NewsFirst Published Dec 26, 2020, 7:18 AM IST
Highlights

ಕೊರೋನಾ ಹಬ್ಬುವ ಭೀತಿ ಹೊಸ ವರ್ಷಾಚರಣೆ ವೇಳೆ ಹೆಚ್ಚಿನ ಜನರ ಗುಂಪುಗೂಡುವಿಕೆ ನಿರ್ಬಂಧಿಸಲು ಕಠಿಣ ನಿಯಮ| ಮೋಜು, ಮಸ್ತಿಗೆ ಬ್ರೇಕ್‌| ಮಾರ್ಗಸೂಚಿ ರೂಪಿಸುವಂತೆ ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವ ಬೊಮ್ಮಾಯಿ ಸೂಚನೆ| 

ಬೆಂಗಳೂರು(ಡಿ.26): ಹೊಸ ವರ್ಷಾಚರಣೆ ವೇಳೆ ಬೆಂಗಳೂರಿಗೆ ಸೀಮಿತವಾಗಿ ಅನೇಕ ನಿರ್ಬಂಧ ಇರುವ ಕಠಿಣ ನಿಯಮಗಳನ್ನು ಒಳಗೊಂಡ ಪ್ರತ್ಯೇಕ ಮಾರ್ಗಸೂಚಿ ರೂಪಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಹೆಚ್ಚಿನ ಜನರು ಗುಂಪುಗೂಡುವಿಕೆಗೆ ನಿರ್ಬಂಧಿಸುವ ಸಲುವಾಗಿ ನಿಯಮ ರೂಪಿಸಲಾಗುತ್ತದೆ ಎಂದರು.
ಈಗಾಗಲೇ ಮಾರ್ಗಸೂಚಿ ರೂಪಿಸುವಂತೆ ಆಯುಕ್ತ ಕಮಲ್‌ ಪಂತ್‌ ಅವರಿಗೆ ಸೂಚಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ಮಾರ್ಗಸೂಚಿ ಪ್ರಕಟವಾಗಲಿದೆ. ನೈಟ್‌ ಕರ್ಫ್ಯೂ ಹಿಂಪಡೆದರೂ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತದೆ. ಕೊರೋನಾ ಸೋಂಕು ಹರಡುವಿಕೆಗೆ ತಡೆಗಟ್ಟಲು ಇದು ಅನಿರ್ವಾಯವಾಗಿದೆ ಎಂದು ಸಚಿವರು ಹೇಳಿದರು.

ಬ್ರಿಟನ್ ವೈರಸ್‌ ಮಧ್ಯೆ ರಾಜ್ಯದಲ್ಲಿ ಕೊರೋನಾ ಸೊಂಕಿತರ ಅಂಕಿ-ಸಂಖ್ಯೆ ಇಲ್ಲಿದೆ

ರಾಜ್ಯ ಸರ್ಕಾರವು ಅನಿವಾರ್ಯ ಕಾರಣಗಳಿಂದ ನೈಟ್‌ ಕರ್ಫ್ಯೂ ಹಿಂಪಡೆದಿದೆ. ಹಾಗಂದ ಮಾತ್ರಕ್ಕೆ ಹೊಸ ವರ್ಷಾಚರಣೆ ವೇಳೆ ಮನಬಂದಂತೆ ಮೋಜು ಮಸ್ತಿಗೆ ಅವಕಾಶವಿಲ್ಲ. ನಗರದಲ್ಲಿ ಡಿ.31 ಹಾಗೂ ಜ.1ರಂದು ಕೆಲವೊಂದು ಕಠಿಣ ನಿಯಮಗಳನ್ನು ಗೃಹ ಇಲಾಖೆ ತೆಗೆದುಕೊಳ್ಳಲಿದೆ. ಇದಕ್ಕೆ ನಾಗರಿಕರು ಸಹಕರಿಸಬೇಕು ಎಂದು ವಿನಂತಿಸಿದರು.

ವರ್ಷಾಂತ್ಯದ ಎರಡು ದಿನಗಳು ಬಾರ್‌, ಪಬ್‌, ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳು ಸೇರಿದಂತೆ ಇತರೆಡೆ ಕೆಲವುಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್‌ ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಹೊಸ ಸಂವತ್ಸರದ ಸ್ವಾಗತದ ಸಡಗರಕ್ಕೆ ಹೆಚ್ಚಿನ ಜನರು ಒಂದೆಡೆ ಸೇರುವುದರಿಂದ ಸೋಂಕು ಹರಡಬಹುದು. ಈಗಾಗಲೇ ದಸರಾ ಹಾಗೂ ದೀಪಾವಳಿ ಸರಳವಾಗಿ ಆಚರಿಸಿದ್ದೇವೆ. ಅದೇ ರೀತಿ ಹೊಸ ವರ್ಷಾಚರಣೆಗೂ ಜನರು ಸಹಕಾರ ಕೊಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 
 

click me!