ಹಿರಿಯ ಪತ್ರಕರ್ತೆ ಶಶಿಪ್ರಭಾ ನಿಧನ

By Kannadaprabha NewsFirst Published Mar 12, 2021, 9:54 AM IST
Highlights

ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಶಿಪ್ರಭಾ ಹಿರೇಮಠ| ಇಂದು ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಎಸಳೂರು ಹೋಬಳಿಯ ಹೆಗ್ಗಡಹಳ್ಳಿ ಅಂತ್ಯ ಸಂಸ್ಕಾರ| ಶಶಿಪ್ರಭಾ ಹಿರೇಮಠ ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂತಾಪ| 

ಬೆಂಗಳೂರು(ಮಾ.12): ಹಿರಿಯ ಪತ್ರಕರ್ತೆ ಶಶಿಪ್ರಭಾ ಹಿರೇಮಠ ಅವರು ಬುಧವಾರ ತಡರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು.

ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ನಂದಿನಿ ಬಡಾವಣೆಯಲ್ಲಿರುವ ನಿವಾಸದಲ್ಲಿ ಬುಧವಾರ ರಾತ್ರಿ ಅಕಾಲಿಕ ಮರಣ ಹೊಂದಿದ್ದಾರೆ. ಇಂದು(ಶುಕ್ರವಾರ) ಬೆಳಗ್ಗೆ 11ರ ಸುಮಾರಿಗೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಎಸಳೂರು ಹೋಬಳಿಯ ಹೆಗ್ಗಡಹಳ್ಳಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತಿ ಹೆಗ್ಗಡಹಳ್ಳಿ ಮಠದ ಆಡಳಿತಾಧಿಕಾರಿ ವೇದಮೂರ್ತಿ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ, ಮಗಳು ಅಭಿಲಾಷಾ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಕೃಷಿ ವಿಜ್ಞಾನಿ, ಪದ್ಮಭೂಷಣ ಭತ್ತದ ಮಹದೇವಪ್ಪ ನಿಧನ

ಕಾನೂನು ಪದವೀಧರೆಯಾಗಿದ್ದ ಶಶಿಪ್ರಭಾ ಅವರು ‘ಸಮಾಚಾರ ಭಾರತಿ’ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದರು. ಆ ನಂತರ ಲೋಕವಾಣಿ, ಈ ಸಂಜೆ, ಸಂಯುಕ್ತ ಕರ್ನಾಟಕ, ಸಂಜೆವಾಣಿ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದರು. ಪತ್ರಿಕೋದ್ಯಮದ ಜೊತೆಗೆ ಪ್ರೆಸ್‌ಕ್ಲಬ್‌ ಕಾರ್ಯಕಾರಿ ಸಮಿತಿ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಉಪಾಧ್ಯಕ್ಷೆ ಹಾಗೂ ನಿರ್ದೇಶಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಚಲನಚಿತ್ರ ಸೆನ್ಸಾರ್‌ ಮಂಡಳಿ ಸದಸ್ಯರಾಗಿ ನಾಲ್ಕು ವರ್ಷ ಸೇವೆ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮಗಳಿಗೆ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದರು.

ಶಶಿಪ್ರಭಾ ಹಿರೇಮಠ ಅವರು ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 
 

click me!