ಸರ್ಕಾರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ವಿತರಣೆ ಮಾಡುತ್ತಿದ್ದರೆ ಕೆಲ ದಂಧೆಕೋರರು ಇದನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಂಡು ಪಡಿತರ ಅಕ್ಕಿಗೆ ಹೆಚ್ಚಿನ ಹಣ ನೀಡಿ ಸಂಗ್ರಹಿಸಿ ಮತ್ತೆ ದುಪ್ಪಟ್ಟ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.
ಭೀಮಶಿ ಭರಮಣ್ಣವರ
ಗೋಕಾಕ(ಜ.18): ಸರ್ಕಾರ ಹಸಿವು ನೀಗಿಸುವ ನಿಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿ ಹೊಂದಿದವರಿಗೆ ಅಕ್ಕಿ ವಿತರಣೆ ಮಾಡುತ್ತಿದ್ದರೆ ಕೆಲ ದಂಧೆಕೋರರು ಇದನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಂಡು ಪಡಿತರ ಅಕ್ಕಿಗೆ ಹೆಚ್ಚಿನ ಹಣ ನೀಡಿ ಸಂಗ್ರಹಿಸಿ ಮತ್ತೆ ದುಪ್ಪಟ್ಟ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದರೆ, ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತ್ತಿರುವುದು ಹಲವು ಅನುಮಾನಗಳು ಹುಟ್ಟು ಹಾಕುವಂತೆ ಮಾಡಿದೆ. ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ 92,434 ಬಿಪಿಎಲ್ ಪಡಿತರ ಚೀಟಿ, 6,189 ಎಪಿಎಲ್ ಪಡಿತರ ಚೀಟಿ ಸೇರಿ ಒಟ್ಟು 98,623 ಪಡಿತರ ಚೀಟಿಗಳಿವೆ. ಇದರಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಪ್ರತಿ ವ್ಯಕ್ತಿಗೆ 6 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
100 ಟನ್‌ಗಿಂತಲೂ ಅಧಿಕ ದಂಧೆಕೋರರ ಪಾಲು:
ಗೋಕಾಕ ಹಾಗೂ ಅರಬಾವಿ ಸುಮಾರು 200 ಟನ್‌ಗಿಂತ ಹೆಚ್ಚು ಸರ್ಕಾರದ ಗೋದಾಮಿನಿಂದ ಬರುತ್ತಿದ್ದು, ಇದರಲ್ಲಿ ಅರ್ಧ ಭಾಗದಷ್ಟು ಜನರು ಸರ್ಕಾರದಿಂದ ಬರುವ ಅಕ್ಕಿಯನ್ನು ಉಪಯೋಗಿಸುತ್ತಿಲ್ಲ. ಅದರಲ್ಲೂ ನಗರ ಪಟ್ಟಣಗಳ ಜನರು ಅನ್ನಭಾಗ್ಯ ಅಕ್ಕಿಯನ್ನು ಆಹಾರಕ್ಕೆ ಉಪಯೋಗಿಸುತ್ತಿಲ್ಲ. ತಾಲೂಕಿನಲ್ಲಿ ಅಂದಾಜು 100 ಟನ್‌ಗಿಂತಲೂ ಹೆಚ್ಚಿನ ಅನ್ನಭಾಗ್ಯ ಅಕ್ಕಿ ದಂಧೆಕೋರರ ಪಾಲಾಗುತ್ತಿದೆ. ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಗಮನದಲ್ಲಿ ಇದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿವೆ.
BELAGAVI NEWS: ಜಿಲ್ಲಾಡಳಿತದ ನೆರಳಲ್ಲಿ ಕಲ್ಲು ಗಣಿಗಾರಿಕೆ?
ಕೆಜಿಗೆ 10 ನೀಡಿ ಅಕ್ಕಿ ಸಂಗ್ರಹ:
ಗೋಕಾಕ ನಗರದಲ್ಲಿ 28, ಗೋಕಾಕ ಗ್ರಾಮೀಣ 112 ಹಾಗೂ ಅರಬಾವಿ ಕ್ಷೇತ್ರದಲ್ಲಿ 68 ಪಡಿತರ ವಿತರಣೆಗೆ ನ್ಯಾಯ ಬೆಲೆ ಅಂಗಡಿಗಳಿವೆ. ಅವುಗಳಲ್ಲಿಯೂ ಪಡಿತರ ವಿತರಣೆ ಮಾಡದೇ ಪಡಿತರ ಚೀಟಿ ಹೊಂದಿದವರಿಗೆ ಪ್ರತಿ ಕೆಜಿಗೆ .10ದಂತೆ ಹಣ ನೀಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿಯೂ ಸಹ ಇದೇ ರೀತಿ ಅಕ್ಕಿ ನೀಡುವ ಬದಲು ಹಣ ನೀಡಲಾಗುತ್ತಿದೆ. ಅಲ್ಲದೇ ಕೆಲವರು ಮನೆ ಮನೆಗೆ ತೆರಳಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ದಿನಸಿ ಅಂಗಡಿಗಳಲ್ಲಿ ಅಕ್ಕಿ ಸಂಗ್ರಹಣೆ ಮಾಡುತ್ತಿದ್ದು, ಕಳೆದ ಕೊರೋನಾ ಲಾಕ್‌ಡೌನ್ ನಂತರದ ದಿನಗಳಿಂದ ಹೆಚ್ಚಾಗಿ ಈ ಅವ್ಯವಹಾರ ನಡೆಯುತ್ತಿದ್ದು, ಆಹಾರ ಇಲಾಖೆ, ತಾಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿರುವುದೇ ಇದಕ್ಕೆ ಕಾರಣವಾಗಿದೆ.
ನ್ಯಾಯಬೆಲೆ ಅಂಗಡಿಯಿಂದ ದಂಧೆಕೋರರಿಗೆ ರಫ್ತು
ಇಲ್ಲಿಯ ನ್ಯಾಯಬೆಲೆ ಅಂಗಡಿಕಾರರು ಪಡಿತರ ಚೀಟಿ ಹೊಂದಿರುವವರಿಂದ ಹಣ ನೀಡಿ ಸಂಗ್ರಹಿಸಿದ ಅಕ್ಕಿಯನ್ನು ಸ್ಥಳೀಯ ಏಜೆಂಟ್‌ರಗೆ ಪ್ರತಿ ಕೆಜಿಗೆ 15 ಕಳುಹಿಸಲಾಗುತ್ತಿದೆ. ಏಜೆಂಟ್‌ರು ಗೋದಾಮುಗಳಲ್ಲಿ ಅಕ್ಕಿ ಸಂಗ್ರಹಿಸಿ ಅಲ್ಲಿಂದ ಅಕ್ಕಿ ದಂಧೆಕೋರರಿಗೆ ಪ್ರತಿ ಕೆಜಿಗೆ 30 ಅಧಿಕ ಹಣಕ್ಕೆ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗಾವಿಯಿಂದ ಸಿಕಂದರಾಬಾದ್‌ಗೆ ನಿತ್ಯ ರೈಲು ಸೇವೆ: ಜೋಶಿ ಮನವಿಗೆ ಸ್ಪಂದಿಸಿದ ಸಚಿವ ವೈಷ್ಣವ್
ಶಾಮೀಲಾಗಿರುವರೇ ದೊಡ್ಡ ಕುಳಗಳು?
ಸರ್ಕಾರದಿಂದ ಬರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಾಳು ಸಂತೆಯಲ್ಲಿ ಮಾರಾಟಮಾಡುತ್ತಿರುವ ಸಂಗತಿ ಒಂದೆಡೆಯಾದರೆ ಪಡಿತರ ಅಕ್ಕಿ ಸಂಗ್ರಹಿಸಿ ಅಕ್ಕಿಯನ್ನು ಪಾಲಿಶ್ ಮಾಡುವ ಮೂಲಕ ಅತಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ದೊಡ್ಡ ಕುಳಗಳೇ ಇದರಲ್ಲಿ ಶಾಮೀಲಾಗಿವೆ ಎಂಬ ಸಂಶಯವಿದೆ.
ನ್ಯಾಯ ಬೆಲೆ ಅಂಗಡಿಗಳು
- ಗೋಕಾಕ ನಗರ-28
- ಗೋಕಾಕ ಗ್ರಾಮೀಣ-112
- ಅರಬಾವಿ ಕ್ಷೇತ್ರದಲ್ಲಿ-68
ಪಡಿತರಚೀಟಿಗಳ ವಿವರ
ಗೋಕಾಕ ಹಾಗೂ ಅರಬಾವಿ ಮತಕ್ಷೇತ್ರದಲ್ಲಿ 92,434 ಬಿಪಿಎಲ್ ಪಡಿತರ ಚೀಟಿ
ಎಎಪಿ ಪಡಿತರ ಚೀಟಿ 6,189
ಒಟ್ಟು 98,623 ಪಡಿತರ ಚೀಟಿಗಳು