30 ರಿಂದ 40 ಟನ್ ಅದಿರು, ಮರಳು ತುಂಬಿಕೊಂಡುವ ಹೋಗುವ ಲಾರಿಗಳ ಮುಲಾಜಿಲ್ಲದೆ ತಡೆದು ದಂಡ ವಿಧಿಸಬೇಕು. ಓಡಾಟ ಪುನರಾವರ್ತನೆ ಆದಲ್ಲಿ ಮುಲಾಜಿಲ್ಲದೇ ಸೀಜ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಪ್ರಾದೇಶಿಕ ಸಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ತಾಕೀತು ಮಾಡಿದರು.
ಚಿತ್ರದುರ್ಗ (ನ.05): 30 ರಿಂದ 40 ಟನ್ ಅದಿರು, ಮರಳು ತುಂಬಿಕೊಂಡುವ ಹೋಗುವ ಲಾರಿಗಳ ಮುಲಾಜಿಲ್ಲದೆ ತಡೆದು ದಂಡ ವಿಧಿಸಬೇಕು. ಓಡಾಟ ಪುನರಾವರ್ತನೆ ಆದಲ್ಲಿ ಮುಲಾಜಿಲ್ಲದೇ ಸೀಜ್ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಪ್ರಾದೇಶಿಕ ಸಾರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ತಾಕೀತು ಮಾಡಿದರು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಗೆ ಆರ್‌ಟಿಓ ಬದಲು ಕಚೇರಿ ಸೂಪರಿಟೆಂಡೆಂಟ್ ಹಾಜರಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶೋಕಾಸ್ ನೋಟೀಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕರಾದ ತಿಪ್ಪಾರೆಡ್ಡಿ, ಗೂಳಿಹಟ್ಟಿಶೇಖರ್, ರಘುಮೂರ್ತಿ ಅದಿರು ಸಾಗಾಣಿಕೆ ಲಾರಿಗಳ ಓಡಾಟದಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗಿ ಹೋಗಿವೆ. ನೂರಾರು ಕೋಟಿ ರು. ಅನುದಾನ ತಂದು ರಸ್ತೆ ಮಾಡಿಸಿದ್ದು, ಅವೆಲ್ಲ ಮತ್ತೆ ಗುಂಡಿ ಬಿದ್ದಿವೆ. ಓವರ್ ಲೋಡ್ ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಲೇಬೇಕೆಂದು ಒತ್ತಾಯಿಸಿದರು. ಜಿಲ್ಲಾ ರಸ್ತೆಗಳು 10 ಟನ್ ಭಾರ ಹೊರುವ ಸಾಮರ್ಥ್ಯದಲ್ಲಿ ಸಿದ್ದಪಡಿಸಲಾಗಿರುತ್ತದೆ.
Haveri: 12 ಕೋಟಿ ವೆಚ್ಚದಲ್ಲಿ ಗಾರ್ಮೆಂಟ್ಸ್ ಘಟಕಕ್ಕೆ ಚಾಲನೆ: ಸಚಿವ ಬಿ.ಸಿ.ಪಾಟೀಲ್
30 ರಿಂದ 40 ಟನ್ ತುಂಬಿಕೊಂಡು ಹೋದರೆ ರಸ್ತೆಗಳು ಉಳಿಯುವುದಾದರೂ ಎಂತು? ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇದುವರೆಗೂ ಎಷ್ಟುಲಾರಿಗಳ ತಡೆದು ಕ್ರಮ ಕೈಗೊಂಡಿದ್ದೀರಿ ಎಂದು ಶಾಸಕ ತಿಪ್ಪಾರೆಡ್ಡಿ ಪ್ರಶ್ನಿಸಿದರು. ಮೂರು ಲಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗ ಸಮಜಾಯಿಷಿ ಕೇಳಿ ಮತ್ತಷ್ಟುಕೋಪಗೊಂಡ ಸಚಿವ ಬಿ.ಸಿ.ಪಾಟೀಲ್ ನಾಳೆಯಿಂದಲೇ ಓವರ್ ಲೋಡ್ ತುಂಬಿಕೊಂಡು ಹೋಗುವ ಲಾರಿಗಳ ತಡೆದು ದಂಡ ವಿಧಿಸಬೇಕು. ಸೀಜ್ ಮಾಡಿ ಎಚ್ಚರಿಕೆ ಸಂದೇಶ ರವಾನಿಸುವಂತೆ ಸೂಚಿಸಿದರು.
ಪರಿಹಾರ ಮೊತ್ತ ಸಾಲಕ್ಕೆ ಜಮೆ: ಸಾಲದ ಬಾಧೆ ತಾಳಲಾರದೆ ಅತ್ಮಹತ್ಯೆ ಮಾಡಿಕೊಂಡಿದ್ದ ರೈತನೋರ್ವನಿಗೆ ರಾಜ್ಯ ಸರ್ಕಾರ ನೀಡಿದ್ದ ಪರಿಹಾರದ ಮೊತ್ತವ ಹಳೇ ಸಾಲಕ್ಕೆ ಜಮಾ ಮಾಡಿಕೊಂಡಿರುವ ಪ್ರಕರಣವೊಂದನ್ನು ಶಾಸಕ ಗೂಳಿಹಟ್ಟಿಶೇಖರ್ ಸಭೆ ಗಮನಕ್ಕೆ ತಂದರು. ಕಂಚಿಪುರದ ಬಸವರಾಜಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಹೆಂಡತಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಎಸ್‌ಬಿಐ ಖಾತೆಗೆ ಚೆಕ್ ಹಾಕಿದಾಗ ಅಲ್ಲಿನ ಮ್ಯಾನೇಜರ್ ಹಳೇ ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ.
ಇದು ಅತ್ಯಂತ ಅಮಾನವೀಯ ನಿಲುವು. ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಗಂಡನ ಕಳೆದುಕೊಂಡ ಕುಟುಂಬ ಮೊದಲೇ ನೋವಿನಲ್ಲಿ ಇರುತ್ತೆ. ಪರಿಹಾರದ ಮೊತ್ತವ ಹಳೇ ಸಾಲಕ್ಕೆ ಜಮೆ ಮಾಡಿಕೊಳ್ಳಲು ಯಾರು ಹೇಳಿದರು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ರನನ್ನು ಪ್ರಶ್ನಿಸಿದರು. ಸಾಲಕ್ಕೆ ಜಮೆ ಮಾಡಿಕೊಂಡ ಮೊತ್ತ ಮರಳಿ ಮಹಿಳೆ ಖಾತೆಗೆ ಜಮೆ ಮಾಡಬೇಕು. ಈ ಸಂಬಂಧದ ವರದಿಯ ಜಿಲ್ಲಾಡಳಿತಕ್ಕೆ ತಲುಪಿಸಬೇಕೆಂದು ಸೂಚಿಸಿದರು.
ಮಳೆಯಿಂದ ಹಾನಿಗೊಳಗಾದ ಬೆಳೆಯ ಪರಿಹಾರದ ಮೊತ್ತವನ್ನು ಕೂಡಾ ಸಾಲಕ್ಕೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂಬ ಸಾಕಷ್ಟುದೂರುಗಳು ನಮ್ಮ ಗಮನಕ್ಕೆ ಬಂದಿವೆ. ಇದು ಕೂಡಾ ಸರಿಯಾದ ಕ್ರಮವಲ್ಲ. ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆಂದು ರೈತರು ದೂರಿದ್ದಾರೆ. ಈ ಬಗ್ಗೆಯೂ ಗಮನ ಹರಿಸಬೇಕು. ಸಾಲಕ್ಕೆ ಪರಿಹಾರ ಜಮೆ ಹಾಗಿದ್ದರೆ ಮರಳಿ ರೈತರ ಖಾತೆಗೆ ಹಾಕಬೇಕೆಂದು ನಿರ್ದೇಶನ ನೀಡಿದರು.
ಜಟಾಪಟಿ: ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಮೇಲೆ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಶಾಸಕರಾದ ತಿಪ್ಪಾರೆಡ್ಡಿ ಹಾಗೂ ಟಿ.ರಘುಮೂರ್ತಿ ನಡುವೆ ಜಟಾಪಟಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ತಿಪ್ಪಾರೆಡ್ಡಿ ಸುಮಾರು 24 ಲಕ್ಷ ರು. ದುರುಪಯೋಗ ಪಡಿಸಿಕೊಳ್ಳಲಾಗಿದೆ. ಈಬಗ್ಗೆ ಪಿಡಿಒ ಹಾಗೂ ಅಧ್ಯಕ್ಷರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲವೆಂದು ಪ್ರಶ್ನಿಸಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ತಾಪಂ ಇಓ ಅಧ್ಯಕ್ಷ ಹಾಗೂ ಪಿಡಿಓ ಮೇಲೆ ಕ್ರಿಮಿನಲ್ ಕೇಸ್‌ಬುಕ್ ಮಾಡಲಾಗುತ್ತಿದೆ. ಈ ಬಗ್ಗೆ ಜಿಪಂ ಸಿಇಒ ಗಮನಕ್ಕೂ ತರಲಾಗಿದೆ ಎಂದರು. ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಬೆಳಗಟ್ಟಗ್ರಾಮ ಪಂಚಾಯಿತಿ ನನ್ನ ವ್ಯಾಪ್ತಿಗೆ ಬರುತ್ತದೆ ಎಂದು ಪರೋಕ್ಷವಾಗಿ ಶಾಸಕ ತಿಪ್ಪಾರೆಡ್ಡಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾರ್ಯದರ್ಶಿಗಳು ಪತ್ರ ಬರೆದಿದ್ದಾರೆ. ಮೊದಲು ತನಿಖೆ ನಡೆಸಿ ವರದಿ ಪಡೆಯಿರಿ. ಅಲ್ಲಿ ತನಕ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದು ಬೇಡವೆಂದರು.
ರೈತರೇ ಆಧುನಿಕ, ವೈಜ್ಞಾನಿಕ ಕೃಷಿಯತ್ತ ಚಿತ್ತ ಹರಿಸಿ: ಸಚಿವ ಬಿ.ಸಿ.ಪಾಟೀಲ್
ನುಸುಳಿದ ವಿವಿ ಸಾಗರ ಜಲಾಶಯ ಕೋಡಿ: ವಿವಿ ಸಾಗರ ಜಲಾಶಯದ ಕೋಡಿ ಎತ್ತರದ ವಿಷಯ ಕೆಡಿಪಿ ಸಭೆಯಲ್ಲಿ ನುಸುಳಿ ಕೆಲಕಾಲ ಬಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು. ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿಶೇಖರ್ ಕೋಡಿ ಎತ್ತರ ಕಡಿಮೆ ಮಾಡಿದಿದ್ದರೆ, ಹೊಸದುರ್ಗ ರೈತರು ಸಮಸ್ಯೆ ಅನುಭವಿಸುತ್ತಾರೆ. ಸಚಿವರು ಗಮನ ಹರಿಸಬೇಕೆಂದರು. ಬಹು ವರ್ಷದ ನಂತರ ಜಲಾಶಯ ತುಂಬಿದೆ. ಜನರಿಗೆ ನೀರು ಬೇಕು, ಬಹಳಷ್ಟು ಜನರಿಗೆ ಒಳ್ಳಯದು ಆಗಬೇಕಾದರೆ ಒಂದಿಷ್ಟುಜನರಿಗೆ ತೊಂದರೆ ಆಗುತ್ತದೆ ಎಂದು ಶಾಸಕ ತಿಪ್ಪಾರೆಡ್ಡಿ, ಚಂದ್ರಪ್ಪ , ರಘು ಮೂರ್ತಿ ಹೇಳಿದರು. ವಿಧಾನ ಪರಿಷತ್ ಸದಸ್ಯ ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಓ ದಿವಾಕರ್, ಎಸ್ಪಿ ಪರಶುರಾಂ ಸಭೆಯಲ್ಲಿ ಉಪಸ್ಥಿತರಿದ್ದರು.