
ಗದಗ (ನ.5): ನರಗುಂದ ತಾಲೂಕಿನ ಹೊರವಲಯದಲ್ಲಿರುವ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಅಪರೂಪದ ಕರಿನಾಗರ ಪ್ರತ್ಯಕ್ಷವಾಗಿತ್ತು, ಸ್ಥಳೀಯರ ಸಹಾಯದಿಂದ ನಾಗರ ಹಾವನ್ನ ರಕ್ಷಿಸಲಾಗಿದೆ. ನಿನ್ನೆ ಸಂಜೆ ನಾಲ್ಕು ಗಂಟೆಗೆ ಶಾಲೆ ಆವರಣದಲ್ಲಿ ಕರಿನಾಗರ ಕಂಡಿತ್ತು.. ಕಟ್ಟಡ ಕೆಲಸಗಾರರು ಗಮನಿಸಿ, ಶಾಲೆ ಮುಖ್ಯಸ್ಥರಿಗೆ ತಿಳಿಸಿದ್ರು. ಉರಗ ತಜ್ಞರೂ ಆಗಿರುವ ಶಾಲೆ ಪ್ರಾಚಾರ್ಯ ಮಂಜುನಾಥ್ ಎಸ್ ನಾಯಕ್ ಅವರು ಉರಗವನ್ನ ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಪುಣೆಯಲ್ಲಿ ಪತ್ತೆಯಾಯ್ತು ಅಪರೂಪದ ಬಿಳಿ ಹಾವು
ಅಪರೂಪದ ಹಾವನ್ನ ರಕ್ಷಣೆ ಮಾಡಿದ ಬಳಿಕ ಮಾತನಾಡಿದ ಮಂಜುನಾಥ್ ಅವರು, ಹಾವನ್ನ ಕಂಡಾಗ ಕೊಲ್ಲಬೇಡಿ. ಹತ್ತಿರ ಲಭ್ಯವಿರುವ ಉರಗತಜ್ಞರನ್ನು ಸಂಪರ್ಕಿಸಬೇಕು. ಉರಗಗಳನ್ನ ರಕ್ಷಿಸಿ ಅವುಗಳ ಆವಾಸಕ್ಕೆ ಬಿಡಬೇಕು. ಇದು ನಿಸರ್ಗಕ್ಕೆ ನಾವು ತೋರುವ ಗೌರವ ಅಂತಾ ಮಂಜುನಾಥ್ ತಿಳಿಸಿದರು.
ಆಯಾ ಭೌಗೋಳಿಕ ಪ್ರದೇಶಕ್ಕೆ ತಕ್ಕಂತೆ ಸಾಮಾನ್ಯವಾಗಿ ನಾಗರ ಹಾವುಗಳ (ಮಾರ್ಫ್) ದೇಹದ ಚರ್ಮದ ವರ್ಣವು ಗೋಧಿ ಬಣ್ಣ, ಕಂದು, ಗಾಢ ಕಂದು ಬಣ್ಣದಿಂದ ಕೂಡಿರುತ್ತದೆ. ಚರ್ಮದ ಬಣ್ಣಕ್ಕೆ ಕಾರಣವಾದ ವರ್ಣದ್ರವ್ಯ ಮೆಲಾನಿನ್ ಸ್ರವಿಸುವಿಕೆಯ ಪ್ರಮಾಣದಲ್ಲಿ ವ್ಯತ್ಯಾಸವಾದಾಗ ನಾಗರಹಾವುಗಳ ಮೈಬಣ್ಣವು ವ್ಯತ್ಯಾಸವಾಗುತ್ತದೆ. ಮೆಲಾನಿನ್ ವರ್ಣದ್ರವ್ಯವು ಚರ್ಮ, ಕಣ್ಣು ಮತ್ತು ಕೂದಲಿಗೆ ಬಣ್ಣವನ್ನು ಒದಗಿಸುತ್ತದೆ. ಇದಲ್ಲದೆ ಮೆಲಾನಿನ್ ಸೂರ್ಯನಿಂದ ಬರುವವ ನೇರಳಾತಿತ ಕಿರಣಗಳಿಂದ ರಕ್ಷಿಸುತ್ತದೆ. ಹಾವುಗಳನ್ನೊಳಗೊಂಡಂತೆ ಈ ವರ್ಣ ದ್ರವ್ಯವು ಅನೇಕ ಪ್ರಾಣಿಗಳಲ್ಲಿ ಮರೆಮಾಚುವಿಕೆಗೆ (ಕ್ಯಾಮೊಫ್ಲಾಜ್), ಥರ್ಮೋರೆಗ್ಯೂಲೇಷನ್‌ನ (ಉಷ್ಣಗ್ರಾಹಿ) ಕಾರ್ಯವನ್ನು ನಿರ್ವಹಿಸುತ್ತದೆ.
ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆಯು ಹಠಾತ್ ಅನುವಂಶಿಕ ಬದಲಾವಣೆಯಿಂದಾಗಿ ಉಂಟಾಗಿ ಹಾವುಗಳಲ್ಲಿ ಈ ವಿರಳ ವಿದ್ಯಮಾನವು ಅಲ್ಬಿನಿಸ್ ಮತ್ತು ಲ್ಯೂಯೋಸಿಸ್ಟಿಕ್ ಹಾವುಗಳ ಜನನಕ್ಕೆ ಕಾರಣವಾಗುತ್ತದೆ. ಈ ವಿದ್ಯಮಾನದ ಹಾವುಗಳ ಆಯುಷ್ಯ ಕಡಿಮೆ ಇರುವುದರಿಂದ ನಿಸರ್ಗದಲ್ಲಿ ಇವು ಬದುಕಿಉಳಿಯುವುದು ತುಂಬಾ ವಿರಳ.
ಅಯ್ಯೋ ಹಾವು ಹಾವು... ಸ್ಕೂಲ್ ಬಸ್ ಕೆಳಗಿತ್ತು ಭಯಾನಕ ದೈತ್ಯ ಹೆಬ್ಬಾವು
ಮೆಲಾನಿನ್ ವರ್ಣದ್ರವ್ಯದ ಸ್ರವಿಸುವಿಕೆ ಹೆಚ್ಚಾದಾಗ ಹಾವುಗಳು ಮೈ ಬಣ್ಣವು ಕಪ್ಪುರೂಪಕ್ಕೆ( ಬ್ಲಾಕ್ ಮಾರ್ಫ್ ಕೋಬ್ರಾ) ತಿರುಗುತ್ತದೆ. ಇಂತಹ ನಾಗರವಾವುಗಳಿಗೆ ಕರಿನಾಗರ ಎನ್ನುವರು. ಈ ವಿದ್ಯಮಾನದ ಕಪ್ಪುವರ್ಣದ ಹಾವುಗಳು ಉತ್ತರ ಭಾರತದ ರಾಜ್ಯಗಳಲ್ಲಿ ಗೋಚರಿಸುತ್ತವೆ. ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತನಲ್ಲಿ ಈ ಮಾರ್ಫನ ನಾಗರ ಹಾವುಗಳು ದಾಖಲಾಗಿವೆ. ಕರ್ನಾಟಕದಲ್ಲಿ ಈ ವಿದ್ಯಮಾನದ ಕರಿನಾಗರ ಹಾವುಗಳು ತೀರಾ ವಿರಳವಾಗಿ ಕಂಡುಬರುತ್ತವೆ. ಅಧಿಕೃತವಾಗಿ ದಾಖಲಾದ ಮಾಹಿತಿ ಇಲ್ಲ. ಇಂತಹ ಹಾವುಗಳನ್ನು ಹೈಪರ್‌ಮೆಲಾನಿಸ್ಟಿಕ್ ಕೋಬ್ರಾ ಎಂತಲೂ ಕರೆಯಬಹುದು. ಹೀಗಾಗಿ ಇಂಥ ಅಪರೂಪದ ಹಾವುಗಳನ್ನು ಕೊಲ್ಲದೇ ಸಂರಕ್ಷಿಸಬೇಕಾಗಿದೆ.