ಕಳವು ಪ್ರಕರಣ ಸುಖಾಂತ್ಯಕ್ಕೆ ತೆರೆಮರೆಯ ಕಸರತ್ತು! ಮಿಲ್, ಟ್ರಾನ್ಸಪೋರ್ಟ್ ಕಂಪನಿಯವರಿಂದ ಅಕ್ಕಿ ಚೀಲಗಳ ಸಂಗ್ರಹ? "ಕಪ್ಪ" ನೀಡದಿದ್ದರೆ ಆರೋಪ ಪಟ್ಟಿಯಲ್ಲಿ ಹೆಸರಾಕುವ ಬೆದರಿಕೆ: ಆರೋಪ
ಆನಂದ್ ಎಂ. ಸೌದಿ
ಯಾದಗಿರಿ(ಡಿ.08): ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ ಪಡಿತರ ಅಕ್ಕಿ ಕಳವು ಪ್ರಕರಣದ ಸುಖಾಂತ್ಯಕ್ಕೆ ಸಿದ್ಧತೆಗಳನ್ನು ನಡೆಸಿರುವ ಅಧಿಕಾರಿಗಳು, ಬಲಿಪಶು ಹುಡುಕಾಟದಲ್ಲಿ ತೆರೆಮರೆಯ ಕಸರತ್ತು ನಡೆಸಿದಂತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕಾಗಿ, ಜಿಲ್ಲೆಯ ವಿವಿಧೆಡೆಯ ಕೆಲವು ಅಕ್ಕಿ ವ್ಯಾಪಾರಿಗಳು, ಸಾರಿಗೆ ವಾಹನಗಳ ಮಾಲೀಕರುಗಳನ್ನು ಸಂಪರ್ಕಿಸುವ ಅಧಿಕಾರಿಗಳು, ನಾಪತ್ತೆಯಾದ ದಾಸ್ತಾನಿನ ಲೆಕ್ಕ ಸರಿದೂಗಿಸಲು ಅಕ್ಕಿ ಚೀಲ ನೀಡುವಂತೆ ಸೂಚಿಸಿದ್ದಾರಂತೆ!
undefined
"ನಾವು ಅಕ್ಕಿ ಮಾರಾಟ ವ್ಯಾಪಾರಿಗಳು. 1-2 ಲೋಡ್ ಅಕ್ಕಿ ಚೀಲಗಳನ್ನು (1 ಲೋಡ್ ಎಂದರೆ 50 ಕೆಜಿಯ 500 ಚೀಲಗಳು) ಕಳುಹಿಸುವಂತೆ ಅಧಿಕಾರಿಗಳು ನಮಗೆ ಫೋನ್ ಮಾಡಿ ಹೇಳಿದ್ದಾರೆ. ಈ ಕಳಳ್ಳತನ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ, ಮತ್ಯಾಕೆ ಎಂದರೆ ಕೇಳುತ್ತಿಲ್ಲ. ಹೆಚ್ಚಿಗೆ ಮಾತನಾಡಿದರೆ, ಎಫ್‌ಐಆರ್‌ನಲ್ಲಿ ನಮ್ಮ ಹೆಸರನ್ನೇ ಸೇರಿಸುವ ಬೆದರಿಕೆ ಹಾಕುತ್ತಿದ್ದಾರೆ" ಎಂದು "ಕನ್ನಡಪ್ರಭ"ದೆದುರು ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.
ತೀವ್ರ ಚರ್ಚೆ ಹಾಗೂ ಆರೋಪಗಳಿಗೆ ಕಾರಣವಾದ ಈ ಪ್ರಕರಣ ಮುಕ್ತಾಯಗೊಳಿಸಲು ಇಂತಹ ಪ್ರಯತ್ನ ನಡೆದಿದೆ. ಕಳವಾಗಿದ್ದ ಮಾಲು ಸಮೇತ ಆರೋಪಿಗಳನ್ನು ಹಿಡಿಯಲಾಗಿದೆ (ರಿಕವರಿ) ಎಂಬುದಾಗಿ ತೋರಿಸಲು, ಕೆಲವೆಡೆ ಇಂತಹ ಸಂಗ್ರಹ ನಡೆದಿರಬಹದು. ಎಂಬ ಶಂಕೆಯನ್ನೂ ಅವರು ವ್ಯಕ್ತಪಡಿಸಿದರು.
ಯಾದಗಿರಿ: ಅಕ್ಕಿ ಅಕ್ರಮಕ್ಕೆ ಖಾಕಿ ಕಾವಲು?
ಏನಿದು ಅಕ್ಕಿ ಕಳವು ಪ್ರಕರಣ?
ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಗೋದಾಮಿನಿಂದ, 50 ಕೆಜಿ ತೂಕದ, 12,154 ಚೀಲಗಳ, ಸುಮಾರು 2 ಕೋಟಿ ರು.ಗಳಿಗೂ ಹೆಚ್ಚಿನ ಅನ್ನಭಾಗ್ಯ ಅಕ್ಕಿ ದಾಸ್ತಾನು 5 ತಿಂಗಳ ಅವಧಿಯಲ್ಲಿ (2 ಜೂನ್ 2023 ರಿಂದ 23-11-2023 ರವರೆಗೆ) ನಾಪತ್ತೆಯಾಗಿದೆ ಎಂದು ಆಹಾರ ಇಲಾಖೆಯ ಯಾದಗಿರಿ ಜಿಲ್ಲೆಯ ಉಪನಿರ್ದೇಶಕ ಭೀಮರಾಯ ಶಹಾಪುರ ಠಾಣೆಗೆ ದೂರು ನ.25ರಂದು ದೂರು ನೀಡಿದ್ದರು.
ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕಣದಲ್ಲಿ ರಾಜಕೀಯ ಪ್ರಭಾವಿಗಳು ಹಾಗೂ ಅಧಿಕಾರಿಗಳು "ಹಸ್ತ"ಕ್ಷೇಪ ನಡೆಸಿದ್ದಾರೆಂದ ಗಂಭೀರ ಆರೋಪಗಳು ಕೇಳಿಬಂದಿವೆ. ಅಕ್ರಮದಲ್ಲಿ ಕೇಳಿಬಂದಿರುವ ಹೆಸರಿನ ವ್ಯಕ್ತಿಯನ್ನು ಕೆಲವು ಪೊಲೀಸ್ ಹಿರಿಯ ಅಧಿಕಾರಿಗಳೇ ಸನ್ಮಾನಿಸಿದ್ದ ಪ್ರಸಂಗವೂ ವ್ಯಾಪಕ ಟೀಕೆಗೊಳಗಾಗಿದೆ. ಇವರಿಂದ ಪ್ರಾಮಾಣಿಕ ತನಿಖೆ ಸಾಧ್ಯವೇ ಎಂಬ ಪ್ರಶ್ನೆಗಳು ಮೂಡಿವೆ, ಹೀಗಾಗಿ, ಈತನ ರಕ್ಷಿಸಲು ಮತ್ತೊಬ್ಬರ ತಲೆಗೆ ಕಳ್ಳತನದ ಪಟ್ಟ ಕಟ್ಟಲು ಸಿದ್ಧತೆಗಳು ನಡೆದಿವೆ ಎಂಬ ಮಾತುಗಳು ಖಾಕಿಪಡೆಯಲ್ಲೇ ಕೇಳಿಬಂದಿವೆ.
ಶಹಾಪುರ: ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ (ಟಿಎಪಿಸಿಎಂಎಸ್) ಗೋದಾಮಿನಿಂದ 2 ಕೋಟಿ ರು.ಗಳ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾಡಳಿತ ಗಂಭೀರ ಕ್ರಮ ಕೈಗೊಂಡಿದೆ. ಟಿಎಪಿಸಿಎಂಎಸ್‌ಗೆ ಸರ್ಕಾರದಿಂದ ಬರಬೇಕಾಗಿದ್ದ ಲಾಭಾಂಶ ಮತ್ತು ಸಹಾಯಧನ ಮೊತ್ತ 1.57 ಕೋಟಿ ರು. ಗಳ ತಡೆಹಿಡಿದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಆದೇಶಿಸಿದ್ದಾರೆ. ಟಿಎಪಿಸಿಎಂಎಸ್ ಸಂಘವು ಪಡಿತರ ಕಾರ್ಡುದಾರರಿಗೆ ವಿತರಿಸಬೇಕಾಗಿದ್ದ ಅಕ್ಕಿ (6077 ಕ್ವಿಂಟಲ್) ಯನ್ನು ದುರುಪಯೋಗ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ, ಆಹಾರ ಭದ್ರತೆ ಕಾಯ್ದೆ 2013 ಅಂತ್ಯೋದಯ ಅನ್ನಭಾಗ್ಯ ನಿಯಮ ಉಲ್ಲಂಘನೆ, ಅಗತ್ಯ ವಸ್ತುಗಳ ಕಾಯ್ದೆ ಉಲ್ಲಂಘನೆ 1955ರ ಕಲಂ 3 ಮತ್ತು 7ರ ಕಾಯ್ದೆ ಉಲ್ಲಂಘನೆ, ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣ ಕಾಯ್ದೆ ಪದ್ಧತಿ ವಿಶೇಷ ಷರತ್ತು 14ರಿಂದ 21 ಬದ್ಧರಾಗಿರದೆ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ಆಗುವ ನಷ್ಟವನ್ನು ಸರಿದೂಗಿಸಲು ಟಿಎಪಿಸಿಎಂಎಸ್ ಗೆ ಕೊಡಬೇಕಾಗಿದ್ದ ಲಾಭಂಶ ಮತ್ತು ಸಹಾಯಧನದ ಮೊತ್ತ 1,57,52,266 ಕೋಟಿ ರು.ಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.