ನೀಲಿ, ಗುಲಾಬಿ ಮೆಟ್ರೋ ನಿಲ್ದಾಣದಲ್ಲಿ ಸ್ಕ್ರೀನ್‌ಡೋರ್‌: ಅಲ್‌ಸ್ಟೋಮ್‌ ಇಂಡಿಯಾ ಕಂಪನಿಗೆ ಗುತ್ತಿಗೆ!

By Kannadaprabha NewsFirst Published Jun 13, 2024, 12:56 PM IST
Highlights

ಸುಮಾರು ₹802 ಕೋಟಿ ಗುತ್ತಿಗೆ ಕಾಮಗಾರಿ ಇದಾಗಿದ್ದು, ಐದು ವರ್ಷ ನಿರ್ವಹಣೆ ಹಾಗೂ ಸಿಬ್ಬಂದಿಗೆ ತರಬೇತಿಯನ್ನು ಒಳಗೊಂಡಿದೆ ಎಂದು ಅಲ್‌ಸ್ಟೋಮ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು (ಜೂ.13): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋ ‘ನೀಲಿ’ ಮಾರ್ಗ ಹಾಗೂ ನಾಗವಾರದಿಂದ ಕಾಳೇನ ಅಗ್ರಹಾರ ಸಂಪರ್ಕಿಸುವ ‘ಗುಲಾಬಿ’ ಮಾರ್ಗಕ್ಕಾಗಿ ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌ ) ಸಿಗ್ನಲಿಂಗ್‌ ಸಿಸ್ಟಂ ಹಾಗೂ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (ಪಿಎಸ್‌ಸಿ) ಅಳವಡಿಸುವ ಹೊಣೆಯನ್ನು ಅಲ್‌ಸ್ಟೋಮ್‌ ಇಂಡಿಯಾ ಕಂಪನಿ ಹೊತ್ತಿದೆ. ಒಟ್ಟಾರೆ ಸುಮಾರು ₹802 ಕೋಟಿ ಗುತ್ತಿಗೆ ಕಾಮಗಾರಿ ಇದಾಗಿದ್ದು, ಐದು ವರ್ಷ ನಿರ್ವಹಣೆ ಹಾಗೂ ಸಿಬ್ಬಂದಿಗೆ ತರಬೇತಿಯನ್ನು ಒಳಗೊಂಡಿದೆ ಎಂದು ಅಲ್‌ಸ್ಟೋಮ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಗುತ್ತಿಗೆ ಪ್ರಕಾರ ಪ್ರಕಾರ ನೀಲಿ ಮಾರ್ಗದಲ್ಲಿ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರ (2ಎ), ಕೆ.ಆರ್‌.ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (2ಬಿ) ಹಾಗೂ ಗುಲಾಬಿ ಮಾರ್ಗದ ನಾಗವಾರದಿಂದ ಕಾಳೇನ ಅಗ್ರಹಾರದವರೆಗಿನ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸುವ ಕಾಮಗಾರಿ ಇದಾಗಿದೆ. ವಿಶೇಷವಾಗಿ ಪ್ರಯಾಣಿಕರ ಸುರಕ್ಷತೆ ಗಮನದಲ್ಲಿ ಇಟ್ಟುಕೊಂಡು ಗುಲಾಬಿ ಮಾರ್ಗದ ಸುರಂಗ ನಿಲ್ದಾಣಗಳಲ್ಲಿ ಪೂರ್ಣ ಎತ್ತರದ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಅಳವಡಿಕೆ ಮಾಡಲಾಗುತ್ತಿದೆ. ಏರ್‌ಪೋರ್ಟ್‌ ಸಿಟಿ ಸ್ಟೇಷನ್‌ನಲ್ಲಿ ಅರ್ಧ ಎತ್ತರದ ಪಿಎಸ್‌ಡಿ ಅಳವಡಿಸಲಾಗುತ್ತಿದೆ.

Latest Videos

ಮೆಟ್ರೋ ರೈಲಿನಲ್ಲಿ ಇನ್ನೊಂದು ಪ್ರತ್ಯೇಕ ಬೋಗಿಗೆ ಮಹಿಳಾ ಪ್ರಯಾಣಿಕರ ಬೇಡಿಕೆ!

ನೀಲಿ ಮಾರ್ಗಕ್ಕಾಗಿ ಬೈಯಪ್ಪನಹಳ್ಳಿಯಲ್ಲಿ ನಿರ್ಮಾಣ ಆಗಲಿರುವ ಆಪರೇಷನ್‌ ಕಂಟ್ರೋಲ್‌ ಸೆಂಟರ್‌ ಹಾಗೂ ಪೀಣ್ಯದಲ್ಲಿ ಬ್ಯಾಕಪ್‌ ಕಂಟ್ರೋಲ್‌ ಸೆಂಟರ್‌ ನಿರ್ಮಾಣ ಆಗಲಿದ್ದು, ಇಲ್ಲಿಂದ ರೈಲುಗಳ ಸಂಚಾರ ನಿಯಂತ್ರಣ ಆಗಲಿದೆ. ಬಿಇಎಂಎಲ್‌ ನಿರ್ಮಿಸಿಕೊಡಲಿರುವ 53 ರೈಲುಗಳ ಓಡಾಟವನ್ನು ಈ ಸೆಂಟರ್‌ಗಳು ನಿರ್ವಹಿಸಲಿವೆ. ಈ ನಡುವೆ ಆತ್ಮಹತ್ಯೆ ಯತ್ನ ಪ್ರಕರಣಗಳು ಘಟಿಸಿದ ಹಿನ್ನೆಲೆಯಲ್ಲಿ ಪ್ರಸ್ತುತದ ವಾಣಿಜ್ಯ ಸಂಚಾರ ಸೇವೆ ಒದಗಿಸುತ್ತಿರುವ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲೂ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ ಅಳವಡಿಕೆಗೆ ಒತ್ತಾಯ ಹೆಚ್ಚಾಗಿದೆ.

click me!