ಮಂಡ್ಯಕ್ಕೆ ಎಚ್‌ಡಿಕೆ ಅಭಯ ಸಿಗುವುದೇ?

By Kannadaprabha NewsFirst Published Jun 13, 2024, 12:31 PM IST
Highlights

ನನ್ನ ಕೊನೆಯ ಉಸಿರಿರುವವರೆಗೂ ಜಿಲ್ಲೆಯ ಜನರ ಋಣ ತೀರಿಸಲು ಬದ್ಧ ಎಂದು ಪದೇ ಪದೇ ಹೇಳುತ್ತಿದ್ದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಂತಹದೊಂದು ಸುವರ್ಣಾವಕಾಶ ಈಗ ದೊರಕಿದೆ.

ಮಂಡ್ಯ ಮಂಜುನಾಥ

 ಮಂಡ್ಯ :  ನನ್ನ ಕೊನೆಯ ಉಸಿರಿರುವವರೆಗೂ ಜಿಲ್ಲೆಯ ಜನರ ಋಣ ತೀರಿಸಲು ಬದ್ಧ ಎಂದು ಪದೇ ಪದೇ ಹೇಳುತ್ತಿದ್ದ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಂತಹದೊಂದು ಸುವರ್ಣಾವಕಾಶ ಈಗ ದೊರಕಿದೆ.

Latest Videos

ಮಂಡ್ಯ ಜಿಲ್ಲೆಯ ಜನರಿಂದ ರಾಜಕೀಯ ಶಕ್ತಿ ಪಡೆದುಕೊಂಡು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ. 2 ದಶಕಗಳಿಂದ ನಷ್ಟದ ಸುಳಿಯಲ್ಲಿರುವ ಮೈಷುಗರ್ ಕಾರ್ಖಾನೆ ಆಧುನೀಕರಣ ಮತ್ತು ಜಿಲ್ಲೆಯಲ್ಲಿ ನೂತನ ಉದ್ಯಮ, ಕೈಗಾರಿಕೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲುವುದಕ್ಕೆ ಪೂರಕ ಅವಕಾಶಗಳಿವೆ. ಕೇಂದ್ರ ಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ನೀಡುವ ಕೊಡುಗೆ ಬಗ್ಗೆ ಜಿಲ್ಲೆಯ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

125 ಕೋಟಿ ರು. ತೆರಿಗೆ ಹೊರೆ: 

ಮೈಷುಗರ್ ಕಾರ್ಖಾನೆ ಆಧುನೀಕರಣವನ್ನೇ ಕಾಣದೆ ನಷ್ಟದ ಕೂಪದೊಳಗೆ ಸಿಲುಕಿದೆ. ರೋಗಗ್ರಸ್ಥ ಹಣೆಪಟ್ಟಿಯನ್ನು ಕಳಚಿದ್ದರೂ ಸುಧಾರಣೆಯನ್ನು ಕಾಣದೆ ನರಳಾಡುತ್ತಿದೆ. ಕಾರ್ಖಾನೆ ಮೇಲೆ ಸುಮಾರು 125 ಕೋಟಿ ರು. ತೆರಿಗೆ ಹೊರೆ ಇದೆ. ಕಾರ್ಖಾನೆಯನ್ನು ಒನ್ ಟೈಮ್ ಸೆಟ್ಲ್‌ಮೆಂಟ್ (ಒಟಿಎಸ್) ವ್ಯಾಪ್ತಿಗೊಳಪಡಿಸಿರುವುದರಿಂದ ಯಾವುದೇ ಬ್ಯಾಂಕುಗಳು ಕಾರ್ಖಾನೆಗೆ ದೀರ್ಘಾವಧಿ ಸಾಲವನ್ನು ನೀಡುತ್ತಿಲ್ಲ. ಕಾರ್ಖಾನೆ ಆರ್ಥಿಕ ಪ್ರಗತಿಯತ್ತ ಮುನ್ನಡೆಯುವ ಬಗ್ಗೆ ಐದು ವರ್ಷದ ಕಾರ್ಯಯೋಜನೆಯನ್ನು ಮುಂದಿಟ್ಟರೆ ಅದನ್ನು ಆಧರಿಸಿ ಬ್ಯಾಂಕುಗಳು ಸಾಲ ನೀಡುವ ಸಾಧ್ಯತೆಗಳಿವೆ. ಜೊತೆಗೆ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿದ್ದು, ರೈತ ಪರ ಕಾಳಜಿ ಇರುವ ನಾಯಕರಾಗಿರುವುದರಿಂದ ರೈತರಿಗೆ ಸಂಬಂಧಿಸಿದ ಉದ್ಯಮವಾಗಿರುವ ಮೈಷುಗರ್ ಕಾರ್ಖಾನೆ ಮೇಲಿರುವ ತೆರಿಗೆಯನ್ನು ಮನ್ನಾ ಮಾಡುವುದಕ್ಕೆ ಆಸಕ್ತಿ ತೋರುವ ತುರ್ತು ಅಗತ್ಯವಿದೆ ಎನ್ನುವುದು ರೈತ ಸಮುದಾಯದ ಆಶಯವಾಗಿದೆ.

 ಮೈಷುಗರ್‌ಗೆ ಕೇಂದ್ರದ ಅನುದಾನ?: 

ಮೈಷುಗರ್ ಕಾರ್ಖಾನೆಗೆ ಸಕ್ಕರೆ ಅಭಿವೃದ್ಧಿ ನಿಧಿಯಿಂದ ಅನುದಾನ ಕೊಡಿಸಬಹುದು. ಕೈಗಾರಿಕಾ ತಜ್ಞರ ತಂಡವೊಂದನ್ನು ಮಂಡ್ಯಕ್ಕೆ ಕಳುಹಿಸಿ ಮೈಷುಗರ್ ಕಾರ್ಖಾನೆಯನ್ನು ಆಧುನೀಕರಣಗೊಳಿಸುವ, ಅಭಿವೃದ್ಧಿಯತ್ತ ಮುನ್ನಡೆಸುವ ಕುರಿತಂತೆ ವರದಿಯೊಂದನ್ನು ಪಡೆದುಕೊಂಡು ಅದಕ್ಕೆ ಪೂರಕ ಕಾರ್ಯಯೋಜನೆಯನ್ನು ರೂಪಿಸುವುದಕ್ಕೂ ಅವಕಾಶಗಳಿವೆ.

ಎಥೆನಾಲ್ ಘಟಕವನ್ನು ಸ್ಥಾಪಿಸುವುದರೊಂದಿಗೆ ಕಾರ್ಖಾನೆಗೆ ಆರ್ಥಿಕ ಶಕ್ತಿ ತುಂಬುವುದು. ೨೦ ವರ್ಷದಷ್ಟು ಹಳೆಯದಾಗಿರುವ ಸಹ ವಿದ್ಯುತ್ ಘಟಕವನ್ನು ಇಂದಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಪರಿವರ್ತಿಸುವುದರಿಂದ ಮೈಷುಗರ್ ಕಾರ್ಖಾನೆಗೆ ನವನಾವಿನ್ಯ ರೂಪು ನೀಡುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಇಚ್ಛಾಶಕ್ತಿ ಮತ್ತು ಬದ್ಧತೆ ಪ್ರದರ್ಶಿಸಬೇಕಿದೆ.

ಎಥೆನಾಲ್ ಘಟಕ ಸ್ಥಾಪನೆ, ವಿದ್ಯುತ್ ಘಟಕದ ನವೀಕರಣದೊಂದಿಗೆ ಮೈಷುಗರ್ ಆಧುನೀಕರಣಗೊಳಿಸುವುದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುವುದಲ್ಲದೆ ಅದಕ್ಕೆ ಪೂರಕವಾದ ಸಣ್ಣ ಸಣ್ಣ ಉದ್ಯಮಗಳ ಬೆಳವಣಿಗೆಗೂ ಸಹಕಾರಿಯಾಗಲಿದೆ ಎನ್ನುವುದು ಜನರ ಭಾವನೆಯಾಗಿದೆ. ಜಿಲ್ಲೆಯ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಎಚ್.ಡಿ. ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಕಾರ್ಯೋನ್ಮುಖರಾಗಬೇಕಿದೆ.

 ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ: 

ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾಗಿದ್ದರೂ ಕೈಗಾರಿಕೆಗಳ ಬೆಳವಣಿಗೆಗಳಿಗೂ ಭರಪೂರ ಅವಕಾಶಗಳಿವೆ. ಕೆ.ಆರ್.ಪೇಟೆ, ಮಳವಳ್ಳಿ, ನಾಗಮಂಗಲ, ಮಂಡ್ಯ ತಾಲೂಕುಗಳಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ವಾತಾವರಣವಿದೆ. ನೀರಿನ ವ್ಯವಸ್ಥೆಯೂ ಇರುವುದರಿಂದ ಹೊಸ ಹೊಸ ಉದ್ಯಮ, ಕೈಗಾರಿಕೆಗಳನ್ನು ಮಂಡ್ಯ ಜಿಲ್ಲೆಗೆ ಕೊಡುಗೆಯಾಗಿ ನೀಡಬಹುದು. ಬೃಹತ್ ಕೈಗಾರಿಕೆ ಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಉದ್ಯಮ, ಕೈಗಾರಿಕೆಗಳ ಸ್ಥಾಪನೆಗೆ ಬೆಂಬಲವಾಗಿ ನಿಲ್ಲುವುದಕ್ಕೆ ಹೆಚ್ಚಿನ ಆಸಕ್ತಿ ವಹಿಸಬೇಕು ಎನ್ನುವುದು ಜನರ ಒತ್ತಾಸೆಯಾಗಿದೆ.

 ದಳಪತಿಗಳ ನಿರ್ಲಕ್ಷ್ಯವೆಂಬ ಆರೋಪ 

ಅಭಿವೃದ್ಧಿಯಲ್ಲಿ ಮಂಡ್ಯಕ್ಕೆ ಸರಿದೂಗುತ್ತಿದ್ದ ಹಾಸನ, ತುಮಕೂರು, ಚಾಮರಾಜನಗರ ಶರವೇಗದಲ್ಲಿ ಬೆಳವಣಿಗೆ ಕಂಡಂತೆ ಇದುವರೆಗೂ ಮಂಡ್ಯ ಕಾಣುವುದಕ್ಕೆ ಸಾಧ್ಯವಾಗಿಲ್ಲ. ಇದಕ್ಕೆ ದಳಪತಿಗಳ ದಿವ್ಯನಿರ್ಲಕ್ಷ್ಯ ಕಾರಣವೆಂಬ ಪ್ರಭಲ ಆರೋಪವಿದೆ. ಈ ಕಳಂಕದಿಂದ ಹೊರಬರುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಎನ್‌ಡಿಎ ಸರ್ಕಾರದಲ್ಲಿ ಉತ್ತಮ ಅವಕಾಶ ದೊರಕಿದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಭಿವೃದ್ಧಿಯಲ್ಲಿ ಮಂಡ್ಯಕ್ಕೆ ಶಾಶ್ವತವೆನಿಸುವ ಕೊಡುಗೆಗಳನ್ನು ನೀಡಬೇಕಿದೆ. ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಲಿದ್ದಾರೆ, ಜಿಲ್ಲೆಯ ಪ್ರಗತಿಯ ಚಿತ್ರಣ ಬದಲಿಸಲಿದ್ದಾರೆ ಎಂಬ ಕಾರಣಕ್ಕೆ 2.84ಲಕ್ಷ ಮತಗಳ ಅಂತದಿಂದ ಅಭೂತಪೂರ್ವ ಗೆಲುವನ್ನು ತಂದುಕೊಟ್ಟಿದ್ದಾರೆ. ಜಿಲ್ಲೆಯ ಜನರ ಆಶಯಗಳಿಗೆ ಅನುಗುಣವಾಗಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಮಂತ್ರಿಯಾಗಿ ಕಾರ್ಯನಿರ್ವಹಿಸುವರೇ ಎಂಬುದನ್ನು ಕಾದುನೋಡಬೇಕಿದೆ.

 ಬೃಹತ್ ಕೈಗಾರಿಕೆ ಖಾತೆ ಜಿಲ್ಲೆ ಅಭಿವೃದ್ಧಿಗೆ ಸಹಕಾರಿ 

2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅಭಿವೃದ್ಧಿಗೆ ಕಾಂಗ್ರೆಸ್‌ನವರು ಸಹಕಾರ ನೀಡಲಿಲ್ಲ. ಅಭಿವೃದ್ಧಿಗೆ ಅಡ್ಡಗಾಲಾದರು. ನಾನು ಜಿಲ್ಲೆಗೆ ಘೋಷಿಸಿದ್ದ 8 ಸಾವಿರ ಕೋಟಿ ರು. ಅನುದಾನದ ಕೆಲಸ ಆರಂಭವಾಗುವಷ್ಟರಲ್ಲಿ ಸರ್ಕಾರ ಉರುಳಿಸಿದರು. ಬಿಜೆಪಿ ಸರ್ಕಾರದ ಮೇಲೆ ಪ್ರಭಾವ ಬೀರಿ ಅನುದಾನ ತಡೆದರು ಎಂದೆಲ್ಲಾ ಕಾಂಗ್ರೆಸ್ಸಿಗರ ಮೇಲೆ ಆರೋಪಿಸಿದ್ದರು.

ಈಗ ಅಂತಹ ಯಾವುದೇ ಉಸಿರುಗಟ್ಟಿಸುವ ವಾತಾವರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಇಲ್ಲ. ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿ ಜೆಡಿಎಸ್ ಮಿತ್ರಪಕ್ಷ ಬಿಜೆಪಿಗೆ ಬೆಂಬಲ ಘೋಷಿಸಿದೆ. ಕೇಂದ್ರ ಮಂತ್ರಿಯಾಗಿ ತಮಗೆ ಸಿಕ್ಕಿರುವ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಮೂಲಕವೇ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಬಹುದು. ಉದ್ಯೋಗ ಸೃಷ್ಟಿಸುವುದರೊಂದಿಗೆ ಕೃಷಿ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಬಹುದಾಗಿದೆ. ಮಂಡ್ಯ ಜಿಲ್ಲೆಯ ಜನರು 2 ದಶಕಗಳಿಂದ ಜೆಡಿಎಸ್‌ನ್ನು ಜಿಲ್ಲೆಯೊಳಗೆ ಪೋಷಿಸಿಕೊಂಡು ಬರುತ್ತಿದ್ದಾರೆ. ಅವರ ಋಣಭಾರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಲಾದರೂ ದೃಢ ಮನಸ್ಸು ಮಾಡುವರೇ ಎನ್ನುವ ಕುತೂಹಲ ಮೂಡಿಸಿದೆ.

ಕೃಷಿ ಖಾತೆ ನಿರೀಕ್ಷೆಯಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ದೊರಕಿರುವುದು ತಮ್ಮನ್ನು ಲೋಕಸಭೆಗೆ ಆಯ್ಕೆ ಮಾಡಿದ ಜನರ ಬದುಕನ್ನು ರಕ್ಷಣೆ ಮಾಡುವುದಕ್ಕೆ ಸಹಕಾರಿಯಾಗುವ ಖಾತೆಯೇ ಸಿಕ್ಕಿದೆ. ಆ ಖಾತೆಯ ಮೂಲಕ ಜಿಲ್ಲೆಯ ಅಭಿವೃದ್ಧಿಯಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದೆಂಬ ದೂರದೃಷ್ಟಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿರಬೇಕಿದೆ. ಕೈಗಾರಿಕಾ ವಲಯದ ತಜ್ಞರೆಲ್ಲರ ಅಭಿಪ್ರಾಯ ಪಡೆದು ರಾಜ್ಯ ಮತ್ತು ಮಂಡ್ಯಕ್ಕೆ ಶಾಶ್ವತ ಕೊಡುಗೆಗಳನ್ನು ನೀಡುವುದಕ್ಕೆ ಸಂಕಲ್ಪ ಮಾಡಬೇಕಿದೆ.

ಮೈಷುಗರ್ ಆಧುನಿಕವಾಗಿ ಅಭಿವೃದ್ಧಿಪಡಿಸಲು ಒಳ್ಳೆಯ ಅವಕಾಶ. ಕುಮಾರಸ್ವಾಮಿ ಅವರು ರೈತಪರವಾಗಿರುವುದರಿಂದ ಎಥೆನಾಲ್ ಘಟಕ ಆರಂಭಕ್ಕೆ ಮೊದಲ ಬಜೆಟ್‌ನಲ್ಲೇ ಆದ್ಯತೆ ನೀಡಬೇಕು. ಉಪ ಉತ್ಪನ್ನ ಘಟಕಗಳ ಸ್ಥಾಪನೆಗೆ ನೆರವಾಗಲಿ.

- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ

ಹೊಸ ಕಾರ್ಖಾನೆ ಆರಂಭಿಸಲು2018 ರಲ್ಲೇ ಕುಮಾರಸ್ವಾಮಿ ಮನಸ್ಸು ಮಾಡಿದ್ದರು. ಎನ್‌ಡಿಎ ಸರ್ಕಾರದಲ್ಲಿ ಕೈಗಾರಿಕೆ ಖಾತೆ ಸಿಕ್ಕಿರುವುದು ಅವರಿಗೆ ಶಕ್ತಿ ತುಂಬಿದೆ. ಕಾರ್ಖಾನೆಯನ್ನು ವೈಜ್ಞಾನಿಕವಾಗಿ ಪ್ರಗತಿಪಥದಲ್ಲಿ ಮುನ್ನಡೆಸುವರೆಂಬ ವಿಶ್ವಾಸವಿದೆ.

- ಸಾತನೂರು ವೇಣುಗೋಪಾಲ್, ಅಧ್ಯಕ್ಷರು, ಕಬ್ಬು ಬೆಳೆಗಾರರ ಒಕ್ಕೂಟ

ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ನಾಡಿಮಿಡಿತ ಗೊತ್ತಿದೆ. ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿರುವ ಮಂಡ್ಯ ಜಿಲ್ಲೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುವ ನಿರೀಕ್ಷೆ ಇದೆ. ರೈತಪರ ನಾಯಕರಾಗಿರುವ ಅವರು ಮೈಷುಗರ್ ಆರ್ಥಿಕ ಶಕ್ತಿ ತುಂಬಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡುವರು.

- ಸುನಂದಾ ಜಯರಾಂ, ರೈತ ನಾಯಕಿ

click me!