ಚಂದ್ರಯಾನ - 3ರ ಯಶಸ್ಸಿನಲ್ಲಿ ವಿಜಯಪುರ ಮೂಲದ ವಿಜ್ಞಾನಿಗಳ ಪಾಲು ಸಹ ಇದೆ. ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಚಂದ್ರಯಾನ -3 ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಯಶಸ್ಸಿನಲ್ಲಿ ಅವರು ಸಹ ಭಾಗಿಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದ್ದಾರೆ. ಇಂಡಿ ಪಟ್ಟಣದ ವಿಲಾಸ್ ರಾಠೋಡ್ ಹಾಗೂ ವಿಜಯಪುರ ನಗರದ ಚಾಂದಬಾವಡಿ ನಿವಾಸಿಗಳಾದ ಅಭಿಷೇಕ ದೇಶಪಾಂಡೆ ಚಂದ್ರಯಾನ -3 ಯೋಜನೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಜ್
ವಿಜಯಪುರ(ಆ.24): ಇಸ್ರೋ ವಿಜ್ಞಾನಿಗಳ ಸಾಧನೆ ಕಂಡು ಈಗ ವಿಶ್ವವೆ ಬೆಕ್ಕಸ ಬೆರಗಾಗಿದೆ. ಚಂದ್ರಯಾನ -3 ಯಶಸ್ವಿಗೊಳಿಸುವ ಮೂಲಕ ಭಾರತೀಯ ವಿಜ್ಞಾನಿಗಳು ದೇಶವನ್ನ ಮತ್ತಷ್ಟು ಎತ್ತರ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಅದ್ರಲ್ಲು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನ ಇಳಿಸುವ ಮೂಲಕ ಪ್ರಪಂಚವೇ ತಿರುಗಿ ನೋಡುವ ಕಾರ್ಯ ಮಾಡಿದ್ದಾರೆ. ಈ ಸಾಧನೆಯಲ್ಲಿ ವಿಜಯಪುರ ಜಿಲ್ಲೆಯ ವಿಜ್ಞಾನಿಗಳ ಪಾಲು ಸಹ ಇದೆ ಅನ್ನೋದು ಗಮನಾರ್ಹ ಸಂಗತಿ...!
ಚಂದ್ರಯಾನ -3 ರಲ್ಲಿ ಗುಮ್ಮಟನಗರಿ ವಿಜ್ಞಾನಿಗಳು..!
ಹೌದು, ಚಂದ್ರಯಾನ - 3ರ ಯಶಸ್ಸಿನಲ್ಲಿ ವಿಜಯಪುರ ಮೂಲದ ವಿಜ್ಞಾನಿಗಳ ಪಾಲು ಸಹ ಇದೆ. ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಚಂದ್ರಯಾನ -3 ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಯಶಸ್ಸಿನಲ್ಲಿ ಅವರು ಸಹ ಭಾಗಿಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿದ್ದಾರೆ. ಇಂಡಿ ಪಟ್ಟಣದ ವಿಲಾಸ್ ರಾಠೋಡ್ ಹಾಗೂ ವಿಜಯಪುರ ನಗರದ ಚಾಂದಬಾವಡಿ ನಿವಾಸಿಗಳಾದ ಅಭಿಷೇಕ ದೇಶಪಾಂಡೆ ಚಂದ್ರಯಾನ -3 ಯೋಜನೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
Chandrayaan 3: ಜಗತ್ತಿಗೆ ಸುದ್ದಿ ತಲುಪಿಸುವ ಮಾಧ್ಯಮದ ಮಂದಿ ಇಸ್ರೋದಲ್ಲಿ ಚಂದ್ರಯಾನ ಸಂಭ್ರಮಿಸಿದ್ದು ಹೀಗೆ!
ವಿಕ್ರಂ ಲ್ಯಾಂಡರ್ ಕಮ್ಯೂನಿಕೇಶನ್ ಜವಾಬ್ದಾರಿ..!
ಇಂಡಿ ಪಟ್ಟಣದ ವಿಲಾಸ ರಾಠೋಡ್ ಚಂದ್ರಯಾನ ೩ರ ವಿಕ್ರಂ ಲ್ಯಾಂಡರ್ ನ ಕಮ್ಯೂನಿಕೇಶನ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭೂಮಿಯಿಂದ ನೌಕೆ ವಿಕ್ರಂ ಲ್ಯಾಂಡರ್ ಹಾರಿದ ಬಳಿಕ ಅದ ಕನೆಕ್ಟಿವಿಟಿ, ಕಮ್ಯೂಕೇಶನ್ ನೋಡಿಕೊಂಡಿದ್ದು ಬೆಂಗಳೂರಿನ ಪಿಣ್ಯ ಸೆಂಟರ್ ನಿಂದ. ಇಲ್ಲಿಯೇ ವಿಲಾಸ್ ರಾಠೋಡ್ ಕಾರ್ಯನಿರ್ವಹಿಸಿದ್ದು, ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳ ತಲುಪುವ ವರೆಗು ಅದರ ಕಮ್ಯೂನಿಕೇಶನ್ ನೋಡಿಕೊಂಡಿದ್ದಾರೆ.
ಬಡತನದಲ್ಲಿಯೇ ಸಾಧನೆ ಮಾಡಿದ ವಿಜ್ಞಾನಿ ವಿಲಾಸ..!
ವಿಲಾಸ್ ರಾಠೋಡ ಮೂಲತಃ ಇಂಡಿ ಪಟ್ಟಣದವರು. ಆರಂಭದಲ್ಲಿ ಹೇಳಿಕೊಳ್ಳುವಂತ ಶ್ರೀಮಂತರಲ್ಲ, ಬಡತನದಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದಾರೆ. 5ನೇ ತರಗತಿ ವರೆಗು ಆಶ್ರಮದಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು ಅನ್ನೋದು ಗಮನಾರ್ಗ ಸಂಗತಿ. 6,7 ನೇ ತರಗತಿಯನ್ನ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಪುರೈಸಿದ್ದರು. 8ರಿಂದ 10 ತರಗತಿ ವರೆಗೆ ಇಂಡಿ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ.
ಗಳಗಳನೆ ಕಣ್ಣೀರು ಹಾಕಿದ್ದ ವಿಜ್ಞಾನಿ ವಿಲಾಸ್ ರಾಠೋಡ್..!
ಇಂದು ಚಂದ್ರಯಾನ 3ರ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ವಿಲಾಸ್ ರಾಠೋಡ್ ರಾಕೆಟ್ ಉಡಾವಣೆಯ ಬಳಿಕ ಇಂಡಿ ಪಟ್ಟಣದ ತಾವು ಕಲಿತ ಶಾಂತೇಶ್ವರ ಶಾಲೆಗೆ ಭೇಟಿ ಕೊಟ್ಟಿದ್ದರು. ಆಗ ಅಲ್ಲಿ ತಮ್ಮ ಹಳೆ ವಿದ್ಯಾರ್ಥಿಗೆ ಶಾಲೆಯವರು ಸನ್ಮಾನಿಸಿದ್ದರು. ಈ ವೇಳೆ ವಿಲಾಸ್ ರಾಠೋಡ್ ತಮ್ಮ ಶೈಕ್ಷಣಿಕ ಬದುಕಲ್ಲಿ ಉಂಟಾದ ಸಮಸ್ಯೆಗಳನ್ನ ನೆನೆದು ಕಣ್ಣೀರು ಹಾಕಿದ್ದರು. ತಾಯಿ ಹುಲ್ಲು ಕೊಯ್ದು ಅದನ್ನ ಮಾರಿ ಬಂದ ಹಣದಲ್ಲಿ ತಮಗೆ ವಿದ್ಯಾಭ್ಯಾಸ ಮಾಡಿಸಿದ್ದನ್ನ ನೆನೆದು ವಿಲಾಸ್ ಕಣ್ಣೀರಾಗಿದ್ದರು.
1993 ರಿಂದ ಇಸ್ರೋ ಜೊತೆಗೆ ನಂಟು..!
1991ರಲ್ಲಿ ಎಂ.ಟೆಕ್ ಮುಗಿಸಿದ ವಿಲಾಸ್ ರಾಠೋಡ್ ಬಿ.ಹೆಚ್.ಇ.ಎಲ್ ನಲ್ಲಿ ಟ್ರೇನಿಯಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಬಳಿಕ 1993ರಲ್ಲಿ ಇಸ್ರೋ ಸಂಸ್ಥೆಯ ISTRAC ವಿಜ್ಞಾನಿಯಾಗಿ ಸೇವೆ ಆರಂಭಿಸಿದ್ರು. ಕಳೆದ 30 ವರ್ಷಗಳಿಂದ ಇಸ್ರೋದಲ್ಲಿಯೇ ಕಾರ್ಯನಿರ್ವಹಿಸುತ್ತಿರೋದು ವಿಶೇಷ.
Chandrayaan 3: ಮುಂದಿನ ಮೂನ್ ಮಿಷನ್ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!
ಇಸ್ರೋದಲ್ಲಿ ಮತ್ತೋರ್ವ ಯುವ ವಿಜ್ಞಾನಿ ಅಭಿಷೇಕ..!
ಚಂದ್ರಯಾನ 3ರಲ್ಲಿ ವಿಜಯಪುರ ಜಿಲ್ಲೆಯ ಇನ್ನೋರ್ವ ಯುವ ವಿಜ್ಞಾನಿಯು ಪಾಲ್ಗೊಂಡಿದ್ದು ಹೆಮ್ಮೆಯ ವಿಚಾರವಾಗಿದೆ. ನಗರದ ಚಾಂದಬಾವಡಿ ನಿವಾಸಿ ಅಭಿಷೇಕ ದೇಶಪಾಂಡೆ 1995 ರಲ್ಲಿ ಜನಿಸಿದ್ರು. ಮಧ್ಯಮ ವರ್ಗದಲ್ಲಿ ಜನಿಸಿದರು ಬಲು ಇಷ್ಟಪಟ್ಟು ವಿದ್ಯಾಭ್ಯಾಸ ಮಾಡಿ, ನೆಚ್ಚಿನ ಇಸ್ರೋ ಸಂಸ್ಥೆಯನ್ನ ಸೇರಿದ್ದಾರೆ. ಚಂದ್ರಯಾನ-3 ಯೋಜನೆಯಲ್ಲಿ ಪಾಲ್ಗೊಂಡು ಇಸ್ರೋ ಸಂಸ್ಥೆಯ ಯಶಸ್ಸಿಗೆ ಶ್ರಮಿಸಿದ್ದಾರೆ. ಇಸ್ರೋ ಸಂಸ್ಥೆಯ A ಗ್ರುಪ್ ಹುದ್ದೆಯಲ್ಲಿದ್ದಾರೆ.
ವಿಜ್ಞಾನಿ ಅಭಿಷೇಕ ನಿವಾಸದಲ್ಲಿ ಸಂಭ್ರಮ..!
ಯುವ ವಿಜ್ಞಾನಿ ಅಭಿಷೇಕ ನಿವಾಸದಲ್ಲಿ ಸಂಭ್ರಮಾಚರಣೆ ನಡೆದಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಅಂಗಳ ತಲುಪುತ್ತಿದ್ದಂತೆ ಅಭಿಷೇಕ ಕುಟುಂಬಸ್ಥರು ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ. ಮನೆ ಎದುರು ಪಟಾಕಿ ಹೊಡೆದು ಇಸ್ರೋ ಸಾಧನೆಗೆ ಅಭಿನಂದಿಸಿದ್ದಾರೆ. ಇನ್ನು ತಮ್ಮದೆ ಮನೆಯ ಮಗ ಸ್ವತಃ ಚಂದ್ರಯಾನ 3ರಲ್ಲಿ ಪಾಲ್ಗೊಂಡಿದ್ದು ಸಹಜವಾಗಿಯೇ ಕುಟುಂಬಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.