ಹಾವೇರಿ: ನಾಲ್ಕು ತಿಂಗಳಾದರೂ ಕಾಯಿ ಬಿಡದ ಮೆಣಿಸಿನ ಗಿಡ, ಸಂಕಷ್ಟದಲ್ಲಿ ರೈತ

By Kannadaprabha NewsFirst Published Jun 4, 2020, 8:26 AM IST
Highlights

ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮೆಣಸಿನಕಾಯಿ ಬೆಳೆ ವೀಕ್ಷಣೆ| ಒಂದೂ ಗಿಡವು ಹಸಿ ಮೆಣಸಿನಕಾಯಿ ಬಿಟ್ಟಿಲ್ಲ| ಈಗಾಗಲೇ ಬೆಳೆದಿರುವ ಗಿಡಗಳಲ್ಲಿ ಮೆಣಸಿಕಾಯಿ ಬಿಟ್ಟು ಕಟಾವು ಮಾಡಿ ಮಾರಾಟ ಮಾಡಬೇಕಿತ್ತು| ಆದರೆ, ಇಷ್ಟು ದಿನ ಕಳೆದರೂ ಒಂದೂ ಕಾಯಿ ಬಿಟ್ಟಿಲ್ಲ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ದುಡಿತಕ್ಕೆ ತಕ್ಕ ಪ್ರತಿಫಲ ಇಲ್ಲದೇ ಹಾನಿ ಉಂಟಾಗಿದೆ|

ಹಾವೇರಿ(ಜೂ.04): ಕಳಪೆ ಬೀಜ ವಿತರಣೆ ಹಿನ್ನೆಲೆಯಲ್ಲಿ ಹಸಿಮೆಣಸಿನಕಾಯಿ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿರುವ ತಾಲೂಕಿನ ಅಕ್ಕೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಸಂದರ್ಭದಲ್ಲಿ ರೈತರು ಮಾತನಾಡಿ, ಕಳೆದ ನಾಲ್ಕು ತಿಂಗಳ ಹಿಂದೆ ಮೆಣಸಿನ ಸಸಿ ನಾಟಿ ಮಾಡಿದ್ದು, ಸುಡು ಬಿಸಿಲು ಲೆಕ್ಕಿಸದೇ ಹಗಲು, ರಾತ್ರಿ ಎನ್ನದೇ ನೀರಾವರಿ ಮಾಡಿರುವ ಪರಿಣಾಮ ಈಗ ಸಸಿ ಹುಲುಸಾಗಿ ಬೆಳೆದು ಹೂ ಬಿಟ್ಟಿದೆ. ಆದರೆ, ಒಂದೂ ಗಿಡವು ಹಸಿ ಮೆಣಸಿನಕಾಯಿ ಬಿಟ್ಟಿಲ್ಲ. ಈಗಾಗಲೇ ಬೆಳೆದಿರುವ ಗಿಡಗಳಲ್ಲಿ ಮೆಣಸಿಕಾಯಿ ಬಿಟ್ಟು ಕಟಾವು ಮಾಡಿ ಮಾರಾಟ ಮಾಡಬೇಕಿತ್ತು. ಆದರೆ, ಇಷ್ಟು ದಿನ ಕಳೆದರೂ ಒಂದೂ ಕಾಯಿ ಬಿಟ್ಟಿಲ್ಲ, ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ದುಡಿತಕ್ಕೆ ತಕ್ಕ ಪ್ರತಿಫಲ ಇಲ್ಲದೇ ಹಾನಿ ಅನುಭವಿಸುವಂತಾಗಿದೆ ಎಂದು ದೂರಿದರು.

ಲಾಕ್‌ಡೌನ್‌ ಸಡಿಲ: ಎರಡು ತಿಂಗಳ ಬಳಿಕ ಬ್ಯಾಡಗಿ APMC ವಹಿವಾಟು ಆರಂಭ

ಪ್ರತಿ ಎಕರೆಗೆ ಸುಮಾರು 25 ಸಾವಿರ ಖರ್ಚು ಮಾಡಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೇವೆ. ಆದರೆ ಕಳಪೆ ಬೀಜ ವಿತರಣೆಯಿಂದಾಗಿ ಮೆಣಸಿನಕಾಯಿ ಸಸಿ ಫಸಲು ನೀಡದೇ ಇರುವುದು ಆತಂತಕ್ಕೀಡು ಮಾಡಿದ್ದು ಸಾಲಸೂಲ ಮಾಡಿ ಬೆಳೆ ಬೆಳೆದಿರುವ ರೈತರು ಮಾಡಿದ ಸಾಲ ತಿರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಳಪೆ ಬೀಜ ವಿತರಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ಉಪನಿರ್ದೇಶಕ ಬಸವರಾಜ ಬರೇಗಾರ ಮೆಣಸಿನಕಾಯಿ ಬೆಳೆ ವೀಕ್ಷಿಸಿ ಮಾತನಾಡಿ, ಅಕ್ಕೂರು ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳೆದಿರುವ ಮೆಣಸಿನಾಯಿ ಬೆಳೆ ಫಲಸು ನೀಡದ ಬಗ್ಗೆ ಬೀಜ ವಿತರಿಸಿದ ಕಂಪನಿಯವರ ಗಮನಕ್ಕೆ ತರಲಾಗುವುದು. ಅಲ್ಲದೇ ಕಂಪನಿಯವರಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವ ಭರವಸೆಯನ್ನು ರೈತರಿಗೆ ನೀಡಿದರು. ತಕ್ಷಣವೇ ಮೆಣಸಿನಕಾಯಿ ಬೆಳೆ ಬೆಳೆದಿರುವ ರೈತರು ಬೀಜ ಖರೀದಿಸಿ ಕಂಪನಿಯ ರಿಸಿಫ್ಟ್‌, ಆಧಾರ್‌ ಕಾರ್ಡ್‌ ಹಾಗೂ ಹೊಲದ ಉತಾರವನ್ನು ತೋಟಗಾರಿಕೆ ಇಲಾಖೆಗೆ ತಂದು ಕೊಡುವಂತೆ ತಿಳಿಸಿದರು.

ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯದಿಂದ ಆಗಮಿಸಿದ್ದ ವಿಜ್ಞಾನಿಗಳು ಜಮೀನಿನ ಮಣ್ಣಿನ ಮಾದರಿ ಹಾಗೂ ಮೆಣಸಿಕಾಯಿ ಗಿಡವನ್ನು ಪರೀಕ್ಷೆಗೆ ತೆಗೆದುಕೊಂಡು ಹೋದರು. ಈ ವೇಳೆ ರೈತರಾದ ಯಂಕನಗೌಡ ಮರಿಗೌಡ್ರ, ಹನುಮಂತಗೌಡ ಪಾಟೀಲ, ಪರಸನಗೌಡ ಮರಿಗೌಡ್ರ, ವೀರಭದ್ರಗೌಡ ಪಾಟೀಲ, ಸುಭಾಸ ಹೊಸಮನಿ ಇದ್ದರು.
 

click me!