
ಕೊಪ್ಪಳ(ಜೂ.04): ನಗರದ ಬಿ.ಟಿ. ಪಾಟೀಲ್ ನಗರದ ನಿವಾಸಿಗೆ ಕೊರೋನಾ ಪಾಸಿಟಿವ್ ವರದಿ ಬಂದು ಐದೇ ದಿನದಲ್ಲಿ ಮತ್ತೆ ನೆಗಟಿವ್ ಬಂದಿದ್ದು, ಪಿ. 3009 ವ್ಯಕ್ತಿಯನ್ನು ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.
ಮೇ 29ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇವರಿಗೆ ಕೋವಿಡ್ ಟೆಸ್ಟ್ ಆಗಿದೆ. ಅದರ ವರದಿಯೂ ಪಾಸಿಟಿವ್ ಬಂದಿತ್ತು. ಇದಾದ ಮೇಲೆ ಇವರಿಗೆ ಜೂ. 3ರಂದು ಮತ್ತೆ ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು, ಅದರಲ್ಲಿ ವರದಿ ನೆಗೆಟಿವ್ ಬಂದಿದೆ. ಕೇವಲ ಐದೇ ದಿನಗಳ ಅಂತರದಲ್ಲಿ ಪಾಸಿಟಿವ್ ನೆಗೆಟಿವ್ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆಗೆ ವಿಕ್ಟೋರಿಯಾ ಅಸ್ಪತ್ರೆಯೇ ಉತ್ತರಿಸಬೇಕಾಗಿದೆ.
BSY, ಮೋದಿ ಸರ್ಕಾರ ದಿವಾಳಿಯಾಗಿದೆ, ಸಂಬಳ ಕೊಡೋದಕ್ಕೂ ದುಡ್ಡಿಲ್ಲ: ಸಿದ್ದು
ಮೊದಲ ಟೆಸ್ಟ್‌ನಲ್ಲಿ ಏನಾದರೂ ವ್ಯತ್ಯಾಸವಾಯಿತೇ? ಅಥವಾ ನಿಜಕ್ಕೂ ಇವರು ಕೇವಲ ಐದೇ ದಿನದಲ್ಲಿ ರಿಕವರಿಯಾದರೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಎದ್ದು ನಿಲ್ಲುತ್ತವೆ. ವೈದ್ಯರು ನೀಡುವ ಮಾಹಿತಿಯ ಪ್ರಕಾರ ಕೇವಲ ಐದೇ ದಿನಗಳಲ್ಲಿ ನೆಗೆಟಿವ್ ಬರಲು ಸಾಧ್ಯವೇ ಇಲ್ಲ. ಟೆಸ್ಟ್‌ನಲ್ಲಿ ಏನಾದರೂ ವ್ಯತ್ಯಾಸವಾಯಿತೇ? ಎನ್ನುವುದನ್ನು ಒರೆಗೆ ಹಚ್ಚಿದಾಗಲೇ ಸತ್ಯ ಗೊತ್ತಾಗುತ್ತದೆ ಎನ್ನುತ್ತಾರೆ.
ಹಲವೆಡೆ ಸಂಪರ್ಕ
ಕೊಪ್ಪಳ ಜಿಲ್ಲೆ ಸೇರಿದಂತೆ ರಾಯಚೂರು ಮತ್ತು ಬೆಂಗಳೂರಿನ ಕೋರಮಂಗಲದಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದವರ ಯಾದಿಯೇ ಹನುಮಂತನ ಬಾಲದಂತೆ ಬೆಳೆಯುತ್ತದೆ. ಅದರಲ್ಲೂ ಕೊಪ್ಪಳ ನಗರದ ಬಿ.ಟಿ. ಪಾಟೀಲ ನಗರ ನಿವಾಸಿಯಾಗಿರುವುದರಿಂದ ಕೊಪ್ಪಳ ಜಿಲ್ಲಾಡಳಿತ ಭಾರಿ ಕಟ್ಟೆಚ್ಚರ ವಹಿಸುತ್ತಿದೆ. ಇವರ ನಿವಾಸದ 200 ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ಜೋನ್ ಮಾಡಿ, ಬಿಗಿಭದ್ರತೆ ವಹಿಸಲಾಗಿದೆ. ಈಗ ಪಿ. 3009 ಎರಡನೇ ವರದಿ ನೆಗೆಟಿವ್ ಎಂದು ಬಂದಿದ್ದು, ನಿರಾಳತೆಗೆ ಕಾರಣವಾಗಿದೆ ಎಂದೇ ಹೇಳಲಾಗುತ್ತದೆ.
ಆಸ್ಪತ್ರೆಯಿಂದ ಬಿಡುಗಡೆ
ಜೂ. 3ರಂದು ಪಿ. 3009 ವ್ಯಕ್ತಿಗೆ ಎರಡನೇ ಬಾರಿಗೆ ಕೋವಿಡ್ ಟೆಸ್ಟ್‌ನಲ್ಲಿ ನೆಗಟಿವ್ ಬಂದಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದ ಇವರನ್ನು ಸಂಜೆ ಬಿಡುಗಡೆ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ನೀಡಿದ ವರದಿಯ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಕೋವಿಡ್ ಟೆಸ್ಟ್ ಎರಡನೇ ವರದಿಯೂ ನೆಗೆಟಿವ್ ಬಂದಿದೆ. ಹೀಗಾಗಿ, ನಿಮ್ಮನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ನೀವು ನಿಮ್ಮ ಮನೆಯಲ್ಲಿಯೇ 14 ದಿನಗಳ ಕ್ವಾರಂಟೈನ್ ಆಗಬೇಕು ಮತ್ತು 28 ದಿನಗಳ ಕಾಲ ಎಲ್ಲಿಯೂ ಸುತ್ತಾಡದಂತೆ ಷರತ್ತು ವಿಧಿಸಿ, ಬಿಡುಗಡೆ ಮಾಡಲಾಗಿದೆ.