ಕಲಬುರಗಿ: ಸಾವಳಗಿ ಗ್ರಾಪಂ ಮಹಿಳಾ ಸದಸ್ಯೆ ಅಪಹರಣ ಯತ್ನ?

By Kannadaprabha News  |  First Published Aug 4, 2023, 9:30 PM IST

ಈ ಬಾರಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರಬಲ ಆಕಾಂಕ್ಷಿ, ಕಾಂಗ್ರೆಸ್‌ ಬೆಂಬಲಿತ ರಮೇಶ ಎಂಬುವವರು ತಮ್ಮ ಜೊತೆಗಾರರೊಂದಿಗೆ ಬಂದು ತಮ್ಮ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಿ ಬಿಜೆಪಿಯ ಸದಸ್ಯೆ ನಾಗಮ್ಮ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.


ಕಲಬುರಗಿ(ಆ.04): ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ಎರಡನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಿಂದಗಿ (ಬಿ) ಊರಿನ ಸದಸ್ಯೆ ಮತ ಚಲಾವಣೆ ಮಾಡದಂತೆ ಮಾಡಲು ಆ ಮಹಿಳಾ ಸದಸ್ಯೆಯನ್ನೇ ಸಿನಿಮೀಯ ರೀತಿಯಲ್ಲಿ ಅಪಹರಿಸುವ ಯತ್ನ ಕಲಬುರಗಿ ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಸಿಂದಗಿ (ಬಿ) ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.
ಬುಧವಾರ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ, ಸದರಿ ಘಟನೆ ಕುರಿತಂತೆ ಕಲಬುರಗಿ ಸಬ್‌ ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿ ದೂರುಗಳು ದಾಖಲಾಗಿವೆ.

ಇಂದು ಸಾವಳಗಿ ಗ್ರಾಮ ಪಂಚಾಯ್ತಿ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ದಿನಾಂಕ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ಸದರಿ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದು ಕೊನೆಗೆ ಸಿನಿಮೀಯ ಶೈಲಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯೆಯ ಅಪಹರಣದವರೆಗೂ ತಲುಪಿವೆ ಎನ್ನಲಾಗುತ್ತಿದೆ.

Latest Videos

undefined

ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ ಅವಹೇಳನ, ಆರಗ ಜ್ಞಾನೇಂದ್ರ ವಿರುದ್ಧ ಎಫ್‌ಐಆರ್‌

ಈ ಬಾರಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಪ್ರಬಲ ಆಕಾಂಕ್ಷಿ, ಕಾಂಗ್ರೆಸ್‌ ಬೆಂಬಲಿತ ರಮೇಶ ಎಂಬುವವರು ತಮ್ಮ ಜೊತೆಗಾರರೊಂದಿಗೆ ಬಂದು ತಮ್ಮ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಆರೋಪಿಸಿ ಬಿಜೆಪಿಯ ಸದಸ್ಯೆ ನಾಗಮ್ಮ ದೂರು ದಾಖಲಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಬಿಜೆಪಿಗೆ ಸೇರಿದ ಸಿಂದಗಿ ಗ್ರಾಪಂನ 5ನೇ ವಾರ್ಡ್‌ ಸದಸ್ಯೆ ನಾಗಮ್ಮ ತುಕ್ಕಣ್ಣವರ ಕಲಬುರಗಿ ಉಪನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಈ ಘಟನೆ ಸಂಬಂಧ ದೂರು ದಾಖಲಿಸಿದ್ದಾರೆ.

ಸಿಂದಗಿ ಗ್ರಾ.ಪಂ.ನಲ್ಲಿ ಒಟ್ಟು 20 ಸದಸ್ಯರ ಬಲವಿದ್ದು, ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲಿತ ತಲಾ 10 ಸದಸ್ಯರು ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಆ.4ರಂದು ಚುನಾವಣೆ ನಡೆಯಲಿದೆ.

ಬುಧವಾರ ಸಂಜೆ ನಾಗಮ್ಮ ಅವರು ಗದ್ದೆಯಿಂದ ವಾಪಸಾಗುತ್ತಿದ್ದಾಗ, ಆಕೆಯ ಬಳಿ ಬಂದ 5 ಮಂದಿ ತಾವು ಪೊಲೀಸರು ಇರೋದಾಗಿ ಹೇಳುತ್ತ ತಮ್ಮನ್ನು ಹಿಂಬಾಲಿಸುವಂತೆ ಹೇಳಿದ್ದಾರೆ. ಆದರೆ ಅವರು ಪೊಲೀಸ್‌ ಸಿಬ್ಬಂದಿಯಲ್ಲ ಎಂದು ನಾಗಮ್ಮ ಅವರನ್ನು ಹಿಂಬಾಲಿಸಲು ನಿರಾಕರಿಸಿದ್ದಾರೆ. 5 ಜನರಲ್ಲಿ ಒಬ್ಬರು ನಾಗಮ್ಮರನ್ನು ಎಳೆಯಲು ಪ್ರಯತ್ನಿಸಿದ್ದಾರೆ.

ಈ ವೇಳೆ ನಾಗಮ್ಮ ಅವರ ಪುತ್ರ ಮಲ್ಲಿಕಾರ್ಜುನ್‌ ದೂರದಿಂದಲೇ ತಮ್ಮ ತಾಯಿಯನ್ನು ಗುಂಪೊಂದು ಸುತ್ತುಗಟ್ಟಿನಿಂತು ವಾಗ್ವಾದಕ್ಕೆ ಮುಂದಾಗಿರೋದನ್ನ ನೋಡಿ ತಕ್ಷಣ ದಾವಿಸಿದ್ದಾನೆ. ತಾಯಿಯನ್ನೇ ಅಪಹರಿಸಲು ಯತ್ನಿಸುತ್ತಿರುವುದನ್ನು ನೋಡಿ ಮಗ ರಕ್ಷಿಸಲು ಪ್ರಯತ್ನಿಸಿದ್ದಾನೆ. ಆದರೆ ಅಪಹರಣಕಾರರು ತಮ್ಮನ್ನು ಹಿಂಬಾಲಿಸದಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪಂಚಾಯ್ತಿ ಸದಸ್ಯೆ ನಾಗಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಗ ಮಲ್ಲಿಕಾರ್ಜುನ ಮಾತು ಕೇಳದೆ ಹೋದಾಗ ಅಪಹರಣಕಾರರು ತಮ್ಮ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯಿಂದಾಗಿ ತಮ್ಮ ಎಡಗೈಯ ಉಂಗುರ ಬೆರಳಿಗೆ ಗಾಯವಾಗಿದೆ. ಅಷ್ಟರಲ್ಲಿ ಈ ಘಟನೆಯನ್ನು ಕಂಡ ಕೆಲವು ಗ್ರಾಮಸ್ಥರು ತಮ್ಮ ರಕ್ಷಣೆಗೆ ರಕ್ಷಣೆಗೆ ಮುಂದಾದರು. ಇದನ್ನು ಕಂಡ ಗ್ಯಾಂಗ್‌ ಪರಾರಿಯಾಗಿದೆ ಎಂದು ನಾಗಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನಾಗಮ್ಮ ಅವರು ರಮೇಶ ಕಡಗಂಚಿ, ಮಲ್ಲಿಕಾರ್ಜುನ ಕಡಗಂಚಿ, ಈರಣ್ಣ ಡಬಕಿ, ಮಲ್ಲಿ ಹಡಪದ, ಆಕಾಶ ರಾಣೇಶ ಪೀರ್‌, ರಾಜು, ಶಾಮ್‌, ಅಸ್ಲಂ ಪಟೇಲ್‌, ಉಸ್ಮಾನ್‌ ಮುಜಾವರ್‌ ಸೇರಿದಂತೆ 10 ಜನರನ್ನು ಆರೋಪಿಗಳೆಂದು ಹೆಸರಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನೆಯ ಹಿಂದೆ ಕಾಂಗ್ರೆಸ್‌ ಪಕ್ಷದ ಎಲ್ಲಾ 10 ಗ್ರಾಮ ಪಂಚಾಯ್ತಿ ಸದಸ್ಯರ ಕೈವಾಡವಿದೆ ಎಂದು ದೂರಿನಲ್ಲಿ ನಾಗಮ್ಮ ತಿಳಿಸಿದ್ದಾರೆ.

ತಪ್ಪು ತಿಳಿದು ಕಟ್ಟಿ ಹಾಕಿ ಥಳಿಸಿದರು: ಶಿವರಾಜ

ಸಾವಳಗಿ ಗ್ರಾಮ ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ನಡೆದಂತಹ ಅಪಹರಣ ಪ್ರಕರಣದಲ್ಲಿ ತಪ್ಪು ತಿಳುವಳಿಕೆಯಿಂದಾಗಿ ತಮ್ಮನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ. ಈ ಥಳಿತದ ಪ್ರಕರಣಕ್ಕೆ ಕಾರಣರಾಗಿರುವ ನಾಗಮ್ಮ, ರಾಜು, ಜಗದೇವ ಪಾರ್ವತಿ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ಮನವಿ ಮಾಡಿ ಕಲಬುರಗಿಯ ಕಾಕಡೆ ಚೌಕ್‌ ನಿವಾಸಿ, ಇದ್ದಿಲು ವರ್ತಕ ಶಿವರಾಜ ತೋಟದ ಉಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲಬುರಗಿ: ಜೈಲಿನಲ್ಲಿದ್ದ ಪತಿಗೆ ಗಾಂಜಾ ಸರಬರಾಜಿಗೆ ಯತ್ನಿಸಿದ ಪತ್ನಿ..!

ತಾವು ಇದ್ದಿಲು ವ್ಯಾಪಾರ ಮಾಡಿಕೊಂಡಿರೋದಾಗಿ ಹೇಳಿರುವ ಶಿವರಾಜ್‌ ಸಾವಳಗಿ ಚುನಾವಣೆ ವಿಚಾರವಾಗಿ ಮಲ್ಲಿಕಾರ್ಜುನ ಕಡಗಂಚಿ ತಮ್ಮ ಗಮನ ಸೆಳೆದು ರಮೇಶ ಬಳಿ 10 ಜನ ಸದಸ್ಯರಿದ್ದಾರೆ. ಸಿಂದಗಿ ಗ್ರಾಮದಲ್ಲಿರುವ ಪಂಚಾಯ್ತಿ ಸದಸ್ಯೆ ಉಳಿದಂತೆ ನಾಗಮ್ಮ ಕೊಂಡೆದ ಇವರನ್ನು ಭೇಟಿಯಾಗಿ ಬರೋದಿದೆ ಎಂದು ಹೇಳಿ ಆಹ್ವಾನಿಸಿದ್ದಾಗ ನಾನು ಹಾಗೂ ಇನ್ನೂ ಐವರು ಅವರೊಂದಿಗೆ ಹೋಗಿದ್ದೇವೆ. ಹೊಲದ ಬಳಿ ಮಾತನಾಡುತ್ತ ನಿಂತಾಗಲೇ ನಾಗಮ್ಮ ಮಕ್ಕಳಾದ ರಾಜು ಜಗದೇವ, ಪಾವರ್ತಿ ಸೇರಿದಂತೆ ಹಲವರು ಓಡೋಡಿ ಬಂದು ಹಲ್ಲೆಗೆ ಮುಂದಾಗಿದ್ದಾರೆ.

ಆಗ ತಮ್ಮ ಜೊತೆ ಬಂದವರು ಓಡಿ ಹೋಗಿದ್ದಾರೆ, ತಾವೊಬ್ಬರೇ ಅವರ ಕೈಗೆ ಸಿಕ್ಕಾಗ ಕುರುಪಿಯಿಂದ ಕಿವಿಗೆ ಗಾಯಮಾಡಿದ್ದಾರೆ. ಜೊತೆಗೆ ಹಿಗ್ಗಾಮುಗ್ಗಾ ತಮ್ಮನ್ನು ಥಳಿಸಿದ್ದಾರೆ. ಮತ ಬೆಂಬಲ ಕೇಳಲು ಹೋದ ತಮ್ಮನ್ನು ಅಪಹರಣಕಾರರು ಎಂದು ತಪ್ಪು ತಿಳಿದು ಹಲ್ಲೆ ಮಾಡಿರುವ ಪಂಚಾಯ್ತಿ ಸದಸ್ಯೆ ನಾಗಮ್ಮ, ಅವರ ಪುತ್ರ ಮಲ್ಲಿಕಾಜುನ ಸೇರಿದಂತೆ ಇನ್ನಿತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವರಾಜ ತೋಟದ್‌ ದೂರಿನಲ್ಲಿ ಆಗ್ರಹಿಸಿದ್ದಾರೆ. ಸಾವಳಗಿ ಪಂಚಾಯ್ತಿ ಚುನಾವಣೆಯ ಈ ಪ್ರಕರಣದಲ್ಲಿ ಸಬ್‌ ಅರ್ಬನ್‌ ಠಾಣೆಯ ಪಿಎಸ್‌ಐ ಕವಿತಾ ಚವ್ಹಾಣ್‌ ಉಭಯ ಗುಂಪಿನವರು ನೀಡಿರುವ ದೂರು, ಪ್ರತಿ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

click me!