
ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ನಿಕಟವರ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ ಮತ್ತು ವಿಚಾರಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಠಾತ್ ಬೆಳವಣಿಗೆಯ ಕುರಿತು ಗೋಕಾಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ (ಎಮ್‌ಎಲ್‌ಸಿ) ಲಖನ್ ಜಾರಕಿಹೊಳಿ ಅವರು ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಈ ಇಡಿ ದಾಳಿಯನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ನಾಯಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಎಂದು ಆರೋಪಿಸುತ್ತಿರುವುದಕ್ಕೆ ಲಖನ್ ಜಾರಕಿಹೊಳಿ ನೇರವಾಗಿ ತಿರುಗೇಟು ನೀಡಿದ್ದಾರೆ. ಈ ದಾಳಿಯ ಹಿಂದೆ ಯಾವುದೇ ರೀತಿಯ ರಾಜಕೀಯ ಷಡ್ಯಂತ್ರ ಅಥವಾ ದುರುದ್ದೇಶವಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರು ವಿವಿಧ ಉದ್ಯಮಗಳಲ್ಲಿ ಸಕ್ರಿಯರಾಗಿದ್ದು, ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಿದ್ದಾರೆ. ಉದ್ಯಮ ನಡೆಸುವವರ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದು ಮತ್ತು ಪರಿಶೀಲನೆ ಮಾಡುವುದು ಒಂದು ಸಹಜ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿದೇಶದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೂಡಿಕೆ ಮಾಡಿರುವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಲಖನ್, "ವಿದೇಶಿ ಹೂಡಿಕೆಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ತಮ್ಮ ಉದ್ಯಮ ಹಾಗೂ ಹೂಡಿಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ಭದ್ರವಾಗಿವೆ. ಇಡಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ಆರೋಪಗಳಿಗೆ ಸಚಿವರೇ ಸೂಕ್ತ ದಾಖಲೆಗಳ ಸಹಿತ ಕಾನೂನಾತ್ಮಕವಾಗಿ ಸ್ಪಷ್ಟನೆ ನೀಡಲಿದ್ದಾರೆ," ಎಂದು ಸೋದರನ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೊಂದೆಡೆ ಬೆಳಗಾವಿಯಲ್ಲಿ ಇಡಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮಂಜುನಾಥ್ ಅವರ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬೆಳಗಾವಿಯ ಟಿವಿ ಸೆಂಟರ್ ಪ್ರದೇಶದಲ್ಲಿರುವ ಮಂಜುನಾಥ್ ಅವರ ಮನೆಗೆ ಗೋವಾದಿಂದ ವಿಶೇಷ ಇಡಿ ಅಧಿಕಾರಿಯೊಬ್ಬರು ಆಗಮಿಸಿದ್ದಾರೆ.
ಲ್ಯಾಪ್‌ಟಾಪ್ ಮತ್ತು ಪ್ರಮುಖ ಕಡತಗಳೊಂದಿಗೆ ಆಗಮಿಸಿರುವ ಅಧಿಕಾರಿಗಳು, ಪ್ರಸ್ತುತ ಮನೆಯಲ್ಲೇ ಇರುವ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಆರ್ಥಿಕ ವಹಿವಾಟುಗಳು, ಉದ್ಯಮದ ಹೂಡಿಕೆಗಳು ಹಾಗೂ ಸಚಿವರ ಉದ್ಯಮದೊಂದಿಗಿನ ಸಂಪರ್ಕದ ಕುರಿತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.
ಜೋರಾದ ಆರೋಪ ಮತ್ತು ಪ್ರತ್ಯಾರೋಪ!
ಇಡಿ ದಾಳಿಯ ಸುತ್ತ ರಾಜಕೀಯ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದರೂ, ಜಾರಕಿಹೊಳಿ ಕುಟುಂಬವು ಇದನ್ನು ಕೇವಲ ಒಂದು 'ಉದ್ಯಮಕ್ಕೆ ಸಂಬಂಧಿಸಿದ ಸಾಮಾನ್ಯ ಕಾನೂನಾತ್ಮಕ ಪ್ರಕ್ರಿಯೆ' ಎಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎನ್ನಲಾಗಿದೆ. ಆದರೆ ಇಡಿ ಅಧಿಕಾರಿಗಳ ಮುಂದಿನ ನಡಾವಳಿ ಮತ್ತು ಸಚಿವರಿಂದ ಬರುವ ಅಧಿಕೃತ ಸ್ಪಷ್ಟನೆ ಈಗ ಕೂತುಹಲ ಸೃಷ್ಟಿಸಿದೆ.