ಸತೀಶ್ ಜಾರಕಿಹೊಳಿ ಬಳಿಕ ನೆಕ್ಟ್ ಇಡಿ ದಾಳಿಗೆ ಟಾರ್ಗೆಟ್ ಯಾರು? ಎಚ್ಚರಿಕೆ ಕೊಟ್ಟಿದ್ದು ಯಾರಿಗೆ ಸಿಎಂ ಡಿಕೆಶಿ!

Published : Sep 09, 2026, 12:11 PM IST
DK Shivakumar Satish Jarkiholi

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ಬಳಿಕ ಮುಂದಿನ ಟಾರ್ಗೆಟ್ ಆರು ಎಂಬುದು ಕೂಡ ನಮಗೆ ತಿಳಿದಿದೆ. ಈ ಬಗ್ಗೆ ಈಗಾಗಲೇ ನಾನು ಎಚ್ಚರಿಕೆಯನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಮೇಲೆ, ನಮ್ಮ ಇತರ ಸಚಿವರು, ಶಾಸಕರ ಮೇಲೂ ಇಡಿ-ಸಿಬಿಐ ದಾಳಿಗಳು ಆಗಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು (ಸೆ.09): ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಪಿಎಸ್‌ಸಿ ವಿಚಾರ ಮುಂದಿಟ್ಟು ಟಾರ್ಗೆಟ್ ಮಾಡುತ್ತಿದ್ದಾರೆ. ಮುಂದೆ ನನ್ನ ಮೇಲೆ, ನಮ್ಮ ಇತರ ಸಚಿವರು, ಶಾಸಕರ ಮೇಲೂ ಇಡಿ-ಸಿಬಿಐ ದಾಳಿಗಳು ಆಗಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆಯನ್ನು ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ಮನೆಗಳ ಮೇಲಿನ ಇಡಿ ದಾಳಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಾಳೆ ನಮ್ಮ ಸರ್ಕಾರ ಯಶಸ್ವಿ 100 ದಿನಗಳನ್ನು ಪೂರೈಸುತ್ತಿದ್ದು, ಆ ಸಂಭ್ರಮವನ್ನು ಹಳ್ಳಹಿಡಿಸಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು (ಡೈವರ್ಟ್ ಮಾಡಲು) ಬಿಜೆಪಿ ಈ ಕೃತ್ಯವೆಸಗಿದೆ. ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಈ ಹಿಂದೆಯೂ ದಾಳಿ ಮಾಡಲು ಯತ್ನಿಸಲಾಗಿತ್ತು, ಇದು ನನಗೇನು ಹೊಸ ವಿಚಾರವಲ್ಲ. ಸತೀಶ್ ಅವರು ವೃತ್ತಿಯಲ್ಲಿ ಉದ್ಯಮಿ, ಕಾನೂನಿನ ಚೌಕಟ್ಟಿನಲ್ಲೇ ಎಲ್ಲ ವ್ಯವಹಾರವನ್ನೂ ಮಾಡುತ್ತಿದ್ದಾರೆ. ಇದಕ್ಕೆ ಅವರು ಸೂಕ್ತ ಕಾನೂನು ಉತ್ತರವನ್ನೂ ನೀಡಲಿದ್ದಾರೆ. ಅವರ ಜೊತೆ ನಾವೆಲ್ಲರೂ 100% ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮುಂದೆ ನನ್ನ ಮೇಲೂ ದಾಳಿ ಆಗಬಹುದು:

ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಡಿಕೆಶಿ, 'ಬಿಜೆಪಿಯವರಿಗೆ ತಲೆಯಲ್ಲಿ ಏನೂ ಇಲ್ಲ, ಕೇವಲ ಸುಳ್ಳು ಕಥೆ ಕಟ್ಟುವುದು ಅವರ ಕೆಲಸ. ಮಾಜಿ ಸಚಿವ ನಾಗೇಂದ್ರ ಅವರ ಪ್ರಕರಣದಲ್ಲಿ ನಾವೇ ತನಿಖೆ ಮಾಡಿಸಿದ್ದೆವು, ಸಿದ್ದರಾಮಯ್ಯನವರು ಸದನದಲ್ಲೇ ಹೇಳಿದ್ದರು, ಆದರೂ ಅವರ ವಿರುದ್ಧ ತನಿಖಾ ಸಂಸ್ಥೆ ಛೂ ಬಿಟ್ಟರು. ಇತ್ತ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಪಿಎಸ್‌ಸಿ ವಿಚಾರ ಮುಂದಿಟ್ಟು ಟಾರ್ಗೆಟ್ ಮಾಡುತ್ತಿದ್ದಾರೆ. ಮುಂದೆ ನನ್ನ ಮೇಲೆ, ನಮ್ಮ ಇತರ ಸಚಿವರು, ಶಾಸಕರ ಮೇಲೂ ಇಡಿ-ಸಿಬಿಐ ದಾಳಿಗಳು ಆಗಬಹುದು. ಈ ಬಗ್ಗೆ ನಾನು ಪಕ್ಷದ ನಾಯಕರಿಗೆ ಮೊದಲೇ ಎಚ್ಚರಿಕೆ ನೀಡಿದ್ದೇನೆ' ಎಂದರು.

ದಲಿತರು, ಹಿಂದುಳಿದ ನಾಯಕರನ್ನು ಮುಗಿಸುವ ಹುನ್ನಾರ:

ನಮ್ಮ ಪಕ್ಷದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗ ಮತ್ತು ದಲಿತ ನಾಯಕರು ಗೆದ್ದು ಬಂದಿರುವುದು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಪರಿಶಿಷ್ಟ ಸಮುದಾಯದ ಪ್ರಮುಖ ನಾಯಕರನ್ನು ರಾಜಕೀಯವಾಗಿ ಮುಗಿಸಲು ಇಂತಹ ಷಡ್ಯಂತ್ರ ನಡೆಸುತ್ತಿದ್ದಾರೆ. ಬಿಜೆಪಿಯ ಒಬ್ಬ ನಾಯಕನ ಮೇಲೆಯೂ ಇಂತಹ ದಾಳಿಗಳು ನಡೆಯುವುದಿಲ್ಲವೇಕೆ? ಪೌರ ಕಾರ್ಮಿಕರ ಮಗನನ್ನು ಮುಜರಾಯಿ ಸಚಿವರನ್ನಾಗಿ ಮಾಡಿದ ಪಕ್ಷ ನಮ್ಮದು. ರೈತರಲ್ಲಿ, ಕಾರ್ಮಿಕರಲ್ಲಿ ಯಾವ ಜಾತಿ-ಧರ್ಮವಿದೆ? ಕೇವಲ ರಾಜಕೀಯ ಹಗೆತನಕ್ಕಾಗಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಜನ ಗಮನಿಸುತ್ತಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

PREV
Read more Articles on
click me!

Recommended Stories

Bengaluru: ತಡರಾತ್ರಿವರೆಗೂ ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಿದ್ದ ಹೆಂಡತಿ; ಕೋಪದಿಂದ ನೀಚ ಕೆಲಸ ಮಾಡಿದ ಗಂಡ
ಶಿರಸಿ, ಸಿದ್ದಾಪುರ ಸರ್ಕಾರಿ ಜಾಗದಲ್ಲಿನ ಮನೆ ನಂಬರ್ ರದ್ದು: ಸಿಎಂ ಜತೆ ಚರ್ಚೆ ಮಾಡ್ತೀನೆಂದ ಶಾಸಕ ಭೀಮಣ್ಣ ನಾಯ್ಕ