ಬೆಳಗಾವಿ ಜಿಲ್ಲೆಯನ್ನೂ ವಿಭಜನೆ ಮಾಡಿ: ಸತೀಶ ಜಾರಕಿಹೊಳಿ

By Kannadaprabha News  |  First Published Nov 27, 2020, 12:23 PM IST

ಅಭಿವೃದ್ಧಿ ದೃಷ್ಠಿಯಿಂದ ಜಿಲ್ಲೆ ವಿಭಜನೆ ಮಾಡಿ| ಧಾರವಾಡ ಜಿಲ್ಲೆ ಮಾಡಿದ ಮಾದರಿಯಲ್ಲೇ ವಿಭಜನೆ ಮಾಡಿ|ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ, ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು| ಬೆಳಗಾವಿ, ಚಿಕ್ಕೋಡಿ, ಗೋಕಾಕ ಮೂರು ಜಿಲ್ಲೆಗಳಾಗುವುದರಲ್ಲಿ ತಪ್ಪೇನಿದೆ?| 


ಬೆಳಗಾವಿ(ನ.27): ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಚಿಕ್ಕೋಡಿ, ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಬೆಳಗಾವಿ, ಚಿಕ್ಕೋಡಿ, ಗೋಕಾಕ ಮೂರು ಜಿಲ್ಲೆಗಳಾಗುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರ ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಈ ಹಿಂದೆ ಧಾರವಾಡ ಜಿಲ್ಲೆ ವಿಭಜನೆ ಮಾಡಿದ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಬಿಜೆಪಿಯವರೂ ಹಿಂದೆ ವಿಪಕ್ಷದಲ್ಲಿದ್ದಾಗ ಇದರ ಬಗ್ಗೆ ಚರ್ಚೆ ಮಾಡಿರಲಿಲ್ವಾ? ಈ ಹಿಂದೆಯೂ ನಾನು ಸಹ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಅಭಿವೃದ್ಧಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಡಿ.5ರ ಕರ್ನಾಟಕ ಬಂದ್‌ಗೆ ಕಾಂಗ್ರೆಸ್‌ ಬೆಂಬಲ ಇಲ್ಲ: ಜಾರಕಿಹೊಳಿ

ಸ್ಪರ್ಧೆಗೆ ಆಸಕ್ತಿ ಇಲ್ಲ:

ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ಆಸಕ್ತಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ರಾಜ್ಯದಲ್ಲಿ ಇನ್ನೂ ಬೇರೆ ಬೇರೆ ಕೆಲಸ ಇದ್ದು, ಸ್ಥಳೀಯ ರಾಜಕಾರಣದಲ್ಲಿಯೇ ಹೆಚ್ಚು ಆಸಕ್ತಿಯಿದೆ ಎಂದ ಅವರು, ಅನಿಲ್‌ ಲಾಡ್‌ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಆಸಕ್ತಿ ತೋರಿಸಬೇಕಲ್ವ. ಅನಿಲ ಲಾಡ್‌ ಬೆಳಗಾವಿ ಲೋಕಸಭೆಗೆ ಟಿಕೆಟ್‌ ಕೇಳಿಲ್ಲ. ವೈಯಕ್ತಿವಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಯಾರೂ ಮುಂದೆ ಬಂದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಎಲ್ಲರೂ ಹೇಳಿದ್ದಾರೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಲೋಕಸಭಾ ಟಿಕೆಟ್‌ ಕೇಳಿದ ಬಗ್ಗೆ ನನಗೆ ಗೊತ್ತಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮತ್ತೊಂದು ಸಭೆ ನಡೆಸಲಾಗುವುದು. ಅಂತಿಮವಾಗಿ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಕೆಪಿಸಿಸಿಗೆ ಶಿಫಾರಸು ಮಾಡಲಾಗುವುದು. ಡಿಸೆಂಬರ್‌ ಮೊದಲ ವಾರದಲ್ಲಿ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಪಕ್ಷದಲ್ಲೇನೂ ಅಭ್ಯರ್ಥಿಗಳ ಕೊರತೆ ಇಲ್ಲ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಚುನಾವಣಾ ಪೂರ್ವ ತಯಾರಿ ಮಾಡಲಾಗುತ್ತಿದೆ. ಯಾವಾಗಬೇಕಾದರೂ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು. ಮಸ್ಕಿ ವಿಧಾನಸಭೆ ಉಪಚುನಾವಣೆಗೆ ತುರವಿಹಾಳ ಸಮರ್ಥ ಅಭ್ಯರ್ಥಿಯಾಗಿದ್ದು, ಅವರಿಗೆ ಟಿಕೆಟ್‌ ನೀಡಲಾಗುವುದು. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ. ಲಿಂಗಾಯತರು ಬಹುಸಂಖ್ಯಾತರಿದ್ದಾರೆ. ಎಸ್‌ಸಿ, ಎಸ್‌ಟಿ , ಕುರುಬ ಸಮುದಾಯದವರು ಇದ್ದಾರೆ. ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ನಮಗೆ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
 

click me!