ಇನ್ನೂ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪ ಸಿಎಂ| ರಾಜ್ಯದ ಚಾಣಕ್ಯ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ| ವಿಜಯನಗರ ಭವಿಷ್ಯ ಬರೆಯುವ ಏಕೈಕ ವ್ಯಕ್ತಿ ಬಿಎಸ್‌ವೈ|
ಹೊಸಪೇಟೆ(ನ.27): ಬೃಹತ್ ನೀರಾವರಿ ಯೋಜನೆ ಜಾರಿಗೆ ತರುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡ ಮಹನೀಯರು ನಮ್ಮ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದ್ದಾರೆ.
ಪಾಪಿನಾಯಕನ ಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಕ್ಷೇತ್ರದ ಪಾಪಿನಾಯಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಒದಗಿಸುವ ಬೃಹತ್ ನೀರಾವರಿ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ನಮ್ಮೆಲ್ಲ ಶಾಸಕರಿಗೆ ಈ ಮುಂಚೆ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಿದ್ದಾರೆ ಎಂದರು.
ಈ ಯೋಜನೆ ಜಾರಿಗೆ ತರುವುದು ಅಷ್ಟು ಸುಲಭವಾಗಿರಲಿಲ್ಲ; ಇಡೀ ದೇಶ ಕೋವಿಡ್‌ನಿಂದ ನಲುಗಾಡುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿಯೂ ಮುಖ್ಯಮಂತ್ರಿಗಳು ಕೊಟ್ಟ ಭರವಸೆಯನ್ನು ಈಡೇರಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆಯ ವಿಭಜನೆಗೆ ಹೆಚ್ಚಿದ ವಿರೋಧ
ಸರ್ಕಾರ ಮತ್ತು ಈ ಭಾಗದ ಜನರ ನಡುವೆ ನಾನು ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆಯೇ ಹೊರತು; ಇದರ ಶ್ರೇಯಸ್ಸು ಸಂಪೂರ್ಣ ಜನರಿಗೆ ಮತ್ತು ಮುಖ್ಯಮಂತ್ರಿ ಅವರಿಗೆ ಸಲ್ಲುತ್ತದೆ ಎಂದರು.
60 ಕಿ.ಮೀ ಪೈಪ್‌ಲೈನ್ ಮುಖಾಂತರ ನಿಂಬಾಪುರದಿಂದ ನೀರನ್ನು ತಂದು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಹೇಳಿದ ಅವರು, ಎಷ್ಟೇ ಸಂಕಷ್ಟದ ಸಂದರ್ಭದಲ್ಲಿಯೂ ರಾಜ್ಯವನ್ನು ಮುಖ್ಯಮಂತ್ರಿಗಳು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಎರಡೂವರೆ ವರ್ಷ ಸರ್ಕಾರ ನಡೆಸ್ತಾರೆ:
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನೂ ಎರಡೂವರೆ ವರ್ಷ ಸರ್ಕಾರ ನಡೆಸುತ್ತಾರೆ. ಮುಂದೆಯೂ ಮಾರ್ಗದರ್ಶಕರಾಗಿ ಅವರ ಮಾರ್ಗದರ್ಶನದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಸಿಂಗ್ ಹೇಳಿದರು.
ರಾಜ್ಯದ ಚಾಣಕ್ಯ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಬಣ್ಣಿಸಿದ ಅವರು ವಿಜಯನಗರ ಭವಿಷ್ಯ ಬರೆಯುವ ಏಕೈಕ ವ್ಯಕ್ತಿ ಎಂದರು.