ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೂ ವಿರೋಧ ಇಲ್ಲ| ರಾಜಕೀಯ ಲಾಭಕ್ಕಾಗಿ ನಿಗಮ ಮಾಡಿದ್ದಕ್ಕಷ್ಟೇ ವಿರೋಧಿಸುತ್ತೇವೆ| ಲೋಕಸಭೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ| ಅಭ್ಯರ್ಥಿ ಆಯ್ಕೆ ಸಂಬಂಧ ಮತ್ತೊಂದು ಸಭೆ ನಡೆಸಲಾಗುವುದು| ಅಂತಿಮವಾಗಿ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಕೆಪಿಸಿಸಿಗೆ ಶಿಫಾರಸು ಮಾಡಲಾಗುವುದು: ಜಾರಕಿಹೊಳಿ|
ಬೆಳಗಾವಿ(ನ.27): ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಮ್ಮ ವಿರೋಧ ಇಲ್ಲ. ಈ ಪ್ರಾಧಿಕಾರ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿರುವ ಡಿಸೆಂಬರ್ 5ರ ಕರ್ನಾಟಕ ಬಂದ್ ಕರೆಗೆ ಕಾಂಗ್ರೆಸ್ ಪಕ್ಷದ ಬೆಂಬಲ ಇಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ನಿಗಮ ಮಾಡಿದ್ದಕ್ಕಷ್ಟೇ ನಾವು ವಿರೋಧಿಸುತ್ತೇವೆ. ಬಜೆಟ್‌ನಲ್ಲಿ ನಿಗಮ ಸ್ಥಾಪನೆ ಘೋಷಣೆ ಮಾಡಬೇಕಿತ್ತು. ಈಗ ಉಪಚುನಾವಣೆ ಸಂದರ್ಭದಲ್ಲಿ ಮಾಡಿರುವುದೇಕೆ ಎಂದು ಪ್ರಶ್ನಿಸಿದರು. ಬಜೆಟ್‌ನಲ್ಲಿ ಇದ್ದರೆ ಸ್ಪಷ್ಟವಾಗಿ ಇರುತ್ತದೆ. ಬೇರೆ ಯೋಜನೆಗಳಿಗೆ ಕೊಡಲು ಹಣವಿಲ್ಲ. ನಿಗಮಗಳಿಗೆ ಹಣ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಸಿಎಂ ವಾರ್ನಿಂಗ್‌ಗೆ ಡೋಂಟ್ ಕೇರ್, ಸರ್ಕಾರಕ್ಕೆ ಸವಾಲ್ ಹಾಕಿದ ವಾಟಾಳ್ ನಾಗರಾಜ್
ಬೆಳಗಾವಿ ವಿಭಜನೆಗೆ ಆಗ್ರಹ
ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಪತ್ಯೇಕವಾಗಿ ಚಿಕ್ಕೋಡಿ, ಗೋಕಾಕ್ ಅನ್ನು ಹೊಸ ಜಿಲ್ಲೆಗಳಾಗಿ ಘೋಷಣೆ ಮಾಡಬೇಕು. ಬೆಳಗಾವಿ, ಚಿಕ್ಕೋಡಿ, ಗೋಕಾಕ್ ಮೂರು ಜಿಲ್ಲೆಗಳಾಗುವುದರಲ್ಲಿ ತಪ್ಪೇನಿದೆ? ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರ ಹೊಂದಿರುವ ದೊಡ್ಡ ಜಿಲ್ಲೆಯಾಗಿದೆ. ಈ ಹಿಂದೆ ಧಾರವಾಡ ಜಿಲ್ಲೆ ವಿಭಜನೆ ಮಾಡಿದ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು ಎಂದು ಆಗ್ರಹಿಸಿದರು.
ಲೋಕಸಭೆಗೆ ಸ್ಪರ್ಧಿಸುವ ಆಸಕ್ತಿ ಇಲ್ಲ
ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಲು ವೈಯಕ್ತಿಕವಾಗಿ ಆಸಕ್ತಿ ಇಲ್ಲ. ರಾಜ್ಯದಲ್ಲಿ ಇನ್ನೂ ಬೇರೆ ಬೇರೆ ಕೆಲಸ ಇದ್ದು, ಸ್ಥಳೀಯ ರಾಜಕಾರಣದಲ್ಲಿಯೇ ಹೆಚ್ಚು ಆಸಕ್ತಿಯಿದೆ ಎಂದ ಹೇಳಿದರು.
ಅನಿಲ ಲಾಡ್ ಬೆಳಗಾವಿ ಲೋಕಸಭೆಗೆ ಟಿಕೆಟ್ ಕೇಳಿಲ್ಲ. ವೈಯಕ್ತಿವಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಯಾರೂ ಮುಂದೆ ಬಂದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಎಲ್ಲರೂ ಹೇಳಿದ್ದಾರೆ. ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ಟಿಕೆಟ್ ಕೇಳಿದ ಬಗ್ಗೆ ನನಗೆ ಗೊತ್ತಿಲ್ಲ. ಅಭ್ಯರ್ಥಿ ಆಯ್ಕೆ ಸಂಬಂಧ ಮತ್ತೊಂದು ಸಭೆ ನಡೆಸಲಾಗುವುದು. ಅಂತಿಮವಾಗಿ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಕೆಪಿಸಿಸಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.