
ಬೆಂಗಳೂರು (ಜ.30): ಸುಮಾರು 56 ವರ್ಷಗಳಿಂದ ಬಡಮಕ್ಕಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ತೃಪ್ತಿಯಿದ್ದು, ಪಾಲಕರ ಹಾಗೂ ಶಿಕ್ಷಕರ ಸಹಕಾರ, ಪ್ರೋತ್ಸಾಹದಿಂದ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಪ್ರಾಂಶುಪಾಲ ಜೆ.ಎಸ್.ನಾಗರಾಜ ಹೇಳಿದರು. ವಿಜಯನಗರದ ಮಾಗಡಿ ರಸ್ತೆಯಲ್ಲಿರುವ ಕಾಸಿಯಾ ಭವನದಲ್ಲಿ ನಡೆದ ಶ್ರೀ ಶಿಕ್ಷಣ ಸಮಿತಿ (ಟ್ರಸ್ಟ್)ನ ಮಾಗಡಿ ರಸ್ತೆಯ ವಿದ್ಯಾರಣ್ಯ ನಗರದ ಶ್ರೀ ಮಂಜುನಾಥ ವಿದ್ಯಾಲಯದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ನರ್ಸರಿ ಪ್ರೈಮರಿ ಹಾಗೂ ಪ್ರೌಢಶಾಲೆಯ ಕಲೋತ್ಸವ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
5 ದಶಕಗಳಿಂದ ಸತತ ಪ್ರಯತ್ನದಿಂದ ಪೂರ್ವ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ಸುಮಾರು 1200ಕ್ಕೂ ಹೆಚ್ಚು ಬಡಮಕ್ಕಳು ಮತ್ತು ಆರ್ಥಿಕವಾಗಿ ಹಿಂದುಳಿದ ಕನ್ನಡ ಮಾಧ್ಯಮ ಮಕ್ಕಳಿಗೆ ಶುಲ್ಕವಿಲ್ಲದೇ ಉಚಿತ ಶಿಕ್ಷಣ ಹಾಗೂ ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನುರಿತ ಹಾಗೂ ಉತ್ತಮ ಶಿಕ್ಷಕರಿಂದ ನೀಡಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಯಾದ ಎಸ್.ನಾಗಣ್ಣ ಮಾತನಾಡಿ, ನಮ್ಮ ಎಲ್ಲ ತಾಯಂದಿಯರು ಭಾರತೀಯ ಸಂಸ್ಕೃತಿ ಉಳಿಸಬೇಕು. ಶಾಲೆಗಳು ಶಾಲೆಗಳಾಗಿ ಉಳಿಯಬೇಕೇ ಹೊರತು ಉದ್ಯಮ ಕ್ಷೇತ್ರವಾಗಿ ಮಾಡಬಾರದು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗೆ ಪ್ರತ್ಯೇಕವಾಗಿ 56 ಸಾವಿರ ಕೋಟಿ ಮೀಸಲು: ಸಚಿವ ಸತೀಶ್ ಜಾರಕಿಹೊಳಿ
ಪೋಷಕರು ಮಕ್ಕಳನ್ನು ಉತ್ತಮ ಶಾಲೆಗಳಿಗೆ ಕಳುಹಿಸುವುದಕ್ಕೆ ಬಯಸುತ್ತಿದ್ದು, ಶಾಲೆಯಿಂದ ಮನೆಗೆ ಬರುವ ಮಕ್ಕಳು ಮಮ್ಮಿ, ಡ್ಯಾಡಿ ಎನ್ನಬೇಕು. ಮಕ್ಕಳು ಇಂಗ್ಲಿಷ್ ಪಾಠಗಳನ್ನು ಕಲಿಯಬೇಕು, ಹೇಳಬೇಕು ಎಂದು ನಿರೀಕ್ಷಿಸುತ್ತಾರೆ. ಮಕ್ಕಳನ್ನು ಅಂತಹ ಉತ್ಪಾದನೆಯ ಯಂತ್ರವನ್ನಾಗಿ ಮಾಡಲಾಗಿದೆ. ಸ್ವಲ್ಪ ಜ್ಞಾನವಿರುವವರು ವಿದೇಶಕ್ಕೆ ಹೋದರೇ ಅಲ್ಲಿ ಹೋಗಿರುವವರನ್ನು ಕರೆದುಕೊಂಡು ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ದೇಶಕ್ಕೆ ಬಂದರೇ ದುಡಿಯುವುದು ಕಷ್ಟ, ಬದುಕುವುದು ಕಷ್ಟ ಎಂದು ನಾನಾ ರೀತಿ ಗೊಂದಲಗಳು ಕಂಡು ಬರುತ್ತಿದೆ. ಮಕ್ಕಳು ಪೋಷಕರಿಗೆ ಹಣ ಕಳಿಸಿದರೂ ಮಕ್ಕಳ ಪ್ರೀತಿ ನೋಡಬೇಕು,
ಅವರ ಜತೆಗೆ ಸರಿಯಾಗಿ ಮಾತನಾಡಬೇಕು ಎಂಬ ಅಭಿಲಾಷೆ ಎಲ್ಲ ಪೋಷಕರಿಗೆ ಇರುತ್ತದೆ. ಆದರೆ, ಶಿಕ್ಷಣ ಉದ್ಯಮವಾಗಿ ಬೆಳೆಯುತ್ತಿದೆ. ಸಂಪಾದನೆ, ಹಣಕ್ಕೆ ಪ್ರಾಮುಖ್ಯತೆಗೆ ಸಿಗುತ್ತಿದೆ. ಮಾನವೀಯತೆ ಮರೆಯುತ್ತಿದ್ದನ್ನು ನೋಡುತ್ತಿದ್ದೇವೆ. ಮನುಷ್ಯತ್ವ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಎಂ.ಜಿ.ರಾಜಗೋಪಾಲ ಮಾತನಾಡಿ, ಮಕ್ಕಳಿಗೆ ಶಾಲೆ ಎಂಬುವುದು ಓದುವುದು ಬರೆಯುವುದು ಅಷ್ಟೆ ಅಲ್ಲ, ವ್ಯಕ್ತಿತ್ವ ಬೆಳೆಸುವುದಕ್ಕೂ ಕಾರಣ. ಬೇರೆ ಬೇರೆ ರಾಜ್ಯದವರು ನಮ್ಮ ರಾಜ್ಯದ ಮಕ್ಕಳ ಅನ್ನವನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಮೋಹನ್ ಬಿ.ಕುಲಕರ್ಣಿ ಮಾತನಾಡಿ, ಮಕ್ಕಳಿಗೆ ಪಾಠ-ಪುಸ್ತಕ ಹೇಳಿಕೊಡುವುದು ಅಷ್ಟೆ ಅಲ್ಲ ಅದರ ಜತೆಗೆ ಬೇರೆ ಬೇರೆ ಕ್ರೀಡೆ, ನೃತ್ಯ ಸೇರಿದಂತೆ ಮಕ್ಕಳ ಆಸಕ್ತಿವಿರುವ ಕ್ಷೇತ್ರಗಳನ್ನು ಪರಿಚಯ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕೆ.ಮಂಜುನಾಥ, ಎಂ.ಪ್ರಕಾಶ, ಮಹೇಂದ್ರ ಮನೋತಜೀ, ಎಚ್.ಸಿ.ನಂದೀಶ, ಎಂ.ಬಿ.ಸತ್ಯನಾರಾಯಣಶೆಟ್ಟಿ, ಮುಖ್ಯೋಪಾಧ್ಯಯ ಎನ್.ರಘು ಹಾಗೂ ಮುಖ್ಯೋಪಾಧ್ಯಪಕಿ ಕೆ.ವರಲಕ್ಷ್ಮೀ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಪಾಲಕರು ಉಪಸ್ಥಿತಿತರಿದ್ದರು.
ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ಕೈ ಬಿಟ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ: ಸಂಸದ ಗೋವಿಂದ ಕಾರಜೋಳ
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ನಿಧಿ ಯೋಜನೆಯಡಿ 2024-25ನೇ ಸಾಲಿಗೆ ಕನ್ನಡ ಮಾಧ್ಯಮಕ್ಕೆ ಹೊಸದಾಗಿ ಸೇರುವ 5ನೇ ತರಗತಿ ವಿದ್ಯಾರ್ಥಿಗಳಿಗೆ ದಾಖಲಾತಿ ಮಾಡಿದ ಕೂಡಲೇ ₹10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಬೇಕು.
-ಡಾ.ಜೆ.ಎಸ್.ನಾಗರಾಜು, ಪ್ರಾಂಶುಪಾಲರು ಶ್ರೀ ಮಂಜುನಾಥ ವಿದ್ಯಾಲಯ.