ಬ್ಯಾಂಕ್‌ನ ಕೆಲಸ ಕಾರ್ಯಗಳ ನಿಮಿತ್ತ ಬರುವ ಪಿಂಚಣಿದಾರರು, ವಯೋವೃದ್ಧರು, ಮಹಿಳೆಯರು ಸೇರಿದಂತೆ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬ್ಯಾಂಕ್‌ನ ಹೊರಗಡೆ ಶಾಮಿಯಾನ ಹಾಕಿಸುವ ಮೂಲಕ ನೆರಳಿನ ವ್ಯವಸ್ಥೆ, ಆಸನದ ವ್ಯವಸ್ಥೆ, ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ
ಸಿದ್ಧಲಿಂಗಸ್ವಾಮಿ ವೈ.ಎಂ.
ಬಳ್ಳಾರಿ(ಮೇ.06): ಬಿರುಬಿಸಿಲನಾಡು ಬಳ್ಳಾರಿಯಲ್ಲಿ ಈಗ ಕೆಂಡದಂತಹ ಬಿಸಿಲು. ಬಿಸಿಲಿನ ಧಗೆ ಒಂದೆಡೆಯಾದರೆ ಕೊರೋನಾ ವೈರಸ್‌ನಿಂದ ಪಾರಾಗಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ನಗರದ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ಶಾಖೆಯು ಅನುಕೂಲ ಕಲ್ಪಿಸಿದೆ.
undefined
ಹೌದು, ದಿನೇ ದಿನೇ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಸಾಗಿರುವ ಕೊರೋನಾ ವೈರಾಣು ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಪಾಡುವ ಜತೆಗೆ ಬ್ಯಾಂಕ್‌ಗೆ ಬರುವ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ಇತರ ಬ್ಯಾಂಕ್‌ಗಳಿಗೂ ಮಾದರಿಯಾಗಿದೆ.
ಹೆಚ್ಚುತ್ತಿರುವ ಕೊರೋನಾ ಕೇಸ್: 'ಆಂಧ್ರದಿಂದ ಜನರು ನುಸುಳದಂತೆ ತೀವ್ರ ನಿಗಾವಹಿಸಿ'
ಪ್ರತಿನಿತ್ಯವೂ ನಾನಾ ಕಡೆಗಳಿಂದ ಬ್ಯಾಂಕ್‌ನ ಕೆಲಸ ಕಾರ್ಯಗಳ ನಿಮಿತ್ತ ಬರುವ ಪಿಂಚಣಿದಾರರು, ವಯೋವೃದ್ಧರು, ಮಹಿಳೆಯರು ಸೇರಿದಂತೆ ಗ್ರಾಹಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಬ್ಯಾಂಕ್‌ನ ಹೊರಗಡೆ ಶಾಮಿಯಾನ ಹಾಕಿಸುವ ಮೂಲಕ ನೆರಳಿನ ವ್ಯವಸ್ಥೆ, ಆಸನದ ವ್ಯವಸ್ಥೆ, ದಾಹ ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಸ್ಯಾನಿಟೈಸರ್ ಸಹ ಒದಗಿಸಲಾಗುತ್ತಿದೆ. ಈಗಾಗಲೇ ಕಳೆದ ಒಂದು ತಿಂಗಳಿನಿಂದ ಬ್ಯಾಂಕ್‌ನ ವತಿಯಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ಕೆಲದಿನಗಳ ಕಾಲ ಗ್ರಾಹಕರಿಗಾಗಿ ಈ ಸೌಲಭ್ಯವನ್ನು ಮುಂದುವರಿಯಲಿದೆ.
ಭದ್ರತಾ ಸಿಬ್ಬಂದಿಯಿಂದ ಮಾರ್ಗದರ್ಶನ
ಬ್ಯಾಂಕ್‌ನ ಹೊರಗಡೆ ಕೊರೋನಾ ನಿಮಿತ್ತ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಗ್ರಾಹಕರಿಗೆ ಮಾರ್ಗದರ್ಶನ ಒದಗಿಸಲಾಗುತ್ತಿದೆ. ಜತೆಗ ವಯೋವೃದ್ಧರು, ಮಹಿಳೆಯರು, ಪಿಂಚಣಿದಾರರು ತಾವು ಸಂಪರ್ಕಿಸಬೇಕಾದ ಬ್ಯಾಂಕಿನ ವಿವಿಧ ವಿಭಾಗಗಳಿಗೆ ತೆರಳಲು ಭದ್ರತಾ ಸಿಬ್ಬಂದಿ ನೆರವಾಗುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಲಿ
ಬೇಸಿಗೆ ಹಾಗೂ ಕೊರೋನಾ ರೋಗವು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗಾದರೂ ಗ್ರಾಹಕರ ಹಿತದೃಷ್ಟಿಯಿಂದ ಕನಿಷ್ಠ ನೆರಳಿನ ವ್ಯವಸ್ಥೆ ಸೇರಿದಂತೆ ಇತರ ಅನುಕೂಲಗಳನ್ನು ಕಲ್ಪಿಸಲು ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಮುಂದಾಗಬೇಕಾಗಿದೆ. ಇದರಿಂದ ನೂಕುನುಗ್ಗಲು ಪರಿಸ್ಥಿತಿ ನಿರ್ಮಾಣವಾಗದಂತೆ ತಡೆಗಟ್ಟಬಹುದಾಗಿದೆ.
ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತೆ ದೃಷ್ಟಿಯಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕ್ ವತಿಯಿಂದ ಕಳೆದ ಒಂದು ತಿಂಗಳಿನಿಂದ ಬ್ಯಾಂಕ್‌ನ ಹೊರಗಡೆ ಗ್ರಾಹಕರಿಗಾಗಿ ನೆರಳು, ಆಸನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಳ್ಳಾರಿ ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯಶಾಖೆಯ ಎಜಿಎಂ ರಘುನಂದನ್ ಅವರು ತಿಳಿಸಿದ್ದಾರೆ.
ಸುಡುಬಿಸಿಲಿನ ಧಗೆಯ ಜತೆಗೆ ಕೊರೋನಾದಂತಹ ಮಹಾಮಾರಿ ಇರುವ ಇಂತಹ ಸಮಯದಲ್ಲಿ ನಮ್ಮಂತಹ ವಯಸ್ಸಾದವರಿಗೆ ಬ್ಯಾಂಕ್ ಕೈಗೊಂಡಿರುವ ಈ ಕ್ರಮದಿಂದ ಅನುಕೂಲವಾಗಿದೆ ಎಂದು ಬಳ್ಳಾರಿ ನಗರದ ಹಿರಿಯ ಗ್ರಾಹಕ ಶಿವಕುಮಾರ್ ಅವರು ಹೇಳಿದ್ದಾರೆ.