ಚಿತ್ರದುರ್ಗ ಜಿಲ್ಲೆಯ ಚಳ್ಳಕೇರಿಯಿಂದ ನಡೆದು ಬಂತು ರಾಜಸ್ಥಾನಿ ಕುಟುಂಬ| ಒಂದೇ ಕುಟುಂಬದ 15 ಜನರಿಗೆ ಕೊರೋನಾ ಸಂಕಷ್ಟ| ಚಳ್ಳಕೇರಿಯಲ್ಲಿ ಪಾನಿಪುರಿ, ಐಸ್‌ಕ್ರೀಂ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಗಳು| ಲಾಕ್‌ಡೌನ್ ಶುರುವಾದ ಬಳಿಕ ವ್ಯಾಪಾರವಿಲ್ಲದೆ ಕೈಯಲ್ಲಿದ್ದ ಹಣವೂ ಖಾಲಿ|
ಬಳ್ಳಾರಿ(ಮೇ.06): ಲಾಕ್‌ಡೌನ್ ಬಳಿಕ ಕಂಗಾಲಾದ ರಾಜಸ್ಥಾನ ಮೂಲದ ಒಂದೇ ಕುಟುಂಬದ 15 ಜನರು ಮರಳಿ ಊರಿಗೆ ತೆರಳಲು ಚಿತ್ರದುರ್ಗ ಜಿಲ್ಲೆ ಚಳ್ಳಕೇರಿಯಿಂದ ಪುಟ್ಟಪುಟ್ಟ ಮಕ್ಕಳನ್ನು ಹೊತ್ತು ಸುಮಾರು 50ಕ್ಕೂ ಹೆಚ್ಚು ಕಿ.ಮೀ. ನಡೆದುಕೊಂಡು ಬಂದಿದ್ದು, ತಮ್ಮ ಊರಿಗೆ ಕಳಿಸಿಕೊಡುವಂತೆ ಅಂಗಲಾಚಿದ ಘಟನೆ ನಗರ ಹೊರ ವಲಯದ ಹಲಕುಂದಿ ಚೆಕ್‌ಪೋಸ್ಟ್ ಬಳಿ ಮಂಗಳವಾರ ನಡೆದಿದೆ.
ಚಳ್ಳಕೇರಿಯಲ್ಲಿ ಪಾನಿಪುರಿ, ಐಸ್‌ಕ್ರೀಂ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಅನೇಕ ವರ್ಷಗಳಿಂದ ಚಳ್ಳಕೇರಿಯಲ್ಲಿಯೇ ವಾಸವಾಗಿದ್ದರು. ಲಾಕ್‌ಡೌನ್ ಶುರುವಾದ ಬಳಿಕ ವ್ಯಾಪಾರವಿಲ್ಲದೆ ಕೈಯಲ್ಲಿದ್ದ ಹಣವೂ ಖಾಲಿಯಾಯಿತು. ಹಣವಿಲ್ಲದೆ ಒದ್ದಾಡುವುದಕ್ಕಿಂತ ಊರಿಗೆ ಹೋಗಿಬಿಡುವ ನಿರ್ಧಾರ ಕೈಗೊಂಡ ಇವರು ಚೆಳ್ಳಕೇರಿಯಿಂದ ಸುಮಾರು 50 ಕಿಮೀನಷ್ಟು ನಡೆದುಕೊಂಡು ಬಂದಿದ್ದಾರೆ.
ಜೋಳದ ರಾಶಿಗುಡ್ಡದಲ್ಲಿ ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಹೊಸಪೇಟೆ ಜನತೆ
ನಮ್ಮದು ರಾಜಸ್ಥಾನದ ಚಿತ್ತೋಡ್ ಜಿಲ್ಲೆ. ಚಳ್ಳಕೇರಿಯಲ್ಲಿಯೇ ವಾಸವಾಗಿದ್ದೆವು. ಎರಡು ದಿನಗಳ ಹಿಂದೆಯೇ ಊರು ಬಿಟ್ಟೆವು. ದಾರಿ ಮಧ್ಯದಲ್ಲಿ ಸಿಕ್ಕ ಆಟೋ, ಲಾರಿ ಹತ್ತಿಕೊಂಡು ಬಂದೆವು. ಸುಮಾರು 50 ಕಿ.ಮೀ. ನಡೆದೆವು. ಊಟ, ಉಪಾಹಾರಕ್ಕೆ ತೊಂದರೆಯಾಗಲಿಲ್ಲ. ದಾರಿ ಮಧ್ಯದಲ್ಲಿ ಅನೇಕರು ಊಟ ಕೊಟ್ಟರು. ನಾವು ಊರಿಗೆ ಹೋಗಬೇಕು. ಹೇಗಾದರೂ ಮಾಡಿ ಕಳಿಸಿಕೊಡಿ ಎಂದು ಮಾಧ್ಯಮಗಳ ಮುಂದೆ ಅಂಗಲಾಚಿದರು. ಸ್ಥಳೀಯ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸ್ ಅಧಿಕಾರಿಗಳು ಮಾತನಾಡಿ, ಇವರಿಗೆ ಊರಿಗೆ ಕಳಿಸುವ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಊಟ, ಉಪಾಹಾರ ವ್ಯವಸ್ಥೆ ಸಹ ಕಲ್ಪಿಸಲಾಗುತ್ತಿದೆ ಎಂದರು.