ಸಣ್ಣಕ್ಕಿಬೆಟ್ಟು ಗೀತಕ್ಕನಿಗೆ ಗೃಹಲಕ್ಷ್ಮೀ ಎಸ್‌ಎಂಎಸ್‌ ಬಂದದ್ದೇ ಗೊತ್ತಿರಲಿಲ್ಲ !

By Kannadaprabha News  |  First Published Jul 21, 2023, 1:18 PM IST

 ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಾಕಷ್ಟುಪ್ರಚಾರ ನೀಡಲಾಗುತ್ತಿದ್ದರೂ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮೊಬೈಲ್‌ ಎಸ್‌ಎಂಎಸ್‌ ಓದಲು ಬಾರದೆ, ನೋಡಲು ಗೊತ್ತಾಗದೆ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಕಂಡು ಬರುತ್ತಿದೆ.


ಉಡುಪಿ (ಜು.21) :  ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಾಕಷ್ಟುಪ್ರಚಾರ ನೀಡಲಾಗುತ್ತಿದ್ದರೂ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮೊಬೈಲ್‌ ಎಸ್‌ಎಂಎಸ್‌ ಓದಲು ಬಾರದೆ, ನೋಡಲು ಗೊತ್ತಾಗದೆ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಕಂಡು ಬರುತ್ತಿದೆ.

ಇಲ್ಲಿನ ಪರ್ಕಳ ಸಮೀಪದ ಸಣ್ಣಕ್ಕಿಬೆಟ್ಟು ಎಂಬಲ್ಲಿನ ನಿವಾಸಿ ಗೀತಾ ನಾಯಕ್‌ ಎಂಬವರಿಗೆ ಸಮಾಜ ಸೇವಕರ ಸಹಾಯದಿಂದ ಗೃಹಲಕ್ಷ್ಮೇ ಯೋಜನೆಯ ಮಂಜೂರಾತಿ ಸಿಕ್ಕಿದೆ. ಅರ್ಜಿ ಸಲ್ಲಿಸಲು ಅವರ ಮೊಬೈಲ್‌ಗೆ ಮಧ್ಯಾಹ್ನ 3ರಿಂದ 4 ಗಂಟೆಯೊಳಗೆ ಕೊಡಿಬೆಟ್ಟು ಗ್ರಾಪಂಗೆ ಬರುವಂತೆ ಎಸ್‌ಎಂಎಸ್‌ ಬಂದಿತ್ತು. ಆದರೆ ಅವರಿಗೆ ಎಸ್‌ಎಂಎಸ್‌ ಬಂದಿರುವುದು ಗೊತ್ತೇ ಇರಲಿಲ್ಲ.

Tap to resize

Latest Videos

undefined

ಗೃಹ ಲಕ್ಷ್ಮೀ ಯೋಜನೆ ಜಾರಿ ಬೆನ್ನಲ್ಲೇ ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನರು

ಅವರು ಪರ್ಕಳದ ಹೊಟೇಲಿಗೆ ಹೋಗಿದ್ದಾಗ ಅಲ್ಲಿದ್ದ ಸಮಾಜಸೇವಕ ಗಣೇಶ್‌ ರಾಜ್‌ ಸರಳೆಬೆಟ್ಟು ಎಂಬವರು ಕುತೂಹಲಕ್ಕೆ ಅವರಲ್ಲಿ ಮೊಬೈಲ್‌ಗೆ ಗೃಹಲಕ್ಷ್ಮೇ ಯೋಜನೆಯ ಎಸ್‌ಎಂಎಸ್‌ ಬಂದಿದೆಯಾ ಎಂದು ಕೇಳಿದರು. ಗೀತಾ ಅವರಿಗೆ ಈ ಬಗ್ಗೆ ಮಾಹಿತಿಯೂ ಇರಲಿಲ್ಲ, ಮೊಬೈಲ್‌ ಎಸ್‌ಎಂಎಸ್‌ ನೋಡುವುದೂ ಗೊತ್ತಿರಲಿಲ್ಲ. ಕೊನೆಗೆ ಗಣೇಶ್‌ ರಾಜ್‌ ಅವರೇ ಗೀತಾ ಅವರ ಮೊಬೈಲ್‌ನಲ್ಲಿ ನೋಡಿದಾಗ ಅವರಿಗೆ ಯೋಜನೆ ಜಾರಿಯಾದ ಮೊದಲ ದಿನ ಗುರುವಾರವೇ ಅರ್ಜಿ ಸಲ್ಲಿಸಲು ಎಸ್‌ಎಂಎಸ್‌ ಬಂದಿತ್ತು.

ಮೊದಲ ಯತ್ನದಲ್ಲಿಯೇ ಯಶಸ್ವಿ: ನಂತರ ಗೀತಾ ಅವರು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಕೊಡಿಬೆಟ್ಟು ಗ್ರಾಮ ಪಂಚಾಯಿತಿಗೆ ಹೋಗಿ ಅರ್ಜಿ ಸಲ್ಲಿಸಿದರು. ವಿಶೇಷ ಎಂದರೇ ಈ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಂಜೆ 4 ಗಂಟೆವರೆಗೆ ಮೊದಲ ದಿನ ಸ್ವೀಕೃತವಾದ ಮೊದಲ ಅರ್ಜಿ ಇದಾಗಿತ್ತು, ತಾಂತ್ರಿಕ ಸಮಸ್ಯೆ ಇಲ್ಲದೆ ಮೊದಲ ಯತ್ನದಲ್ಲಿಯೇ ಅವರ ಅರ್ಜಿ ಸ್ವೀಕೃತವಾಗಿದೆ.

ವಿದ್ಯುತ್‌ ಮತ್ತು ನೀರಿನ ಸಂಪರ್ಕ ಇಲ್ಲದ, ಕುಡಿಯುವುದಕ್ಕೂ ದೂರದಲ್ಲಿರುವ ಬೇರೆ ಮನೆಯವರ ಬಾವಿಯಿಂದ ನೀರು ಹೊತ್ತು ತರಬೇಕಾದ, ಸ್ವಂತ ಹಕ್ಕುಪತ್ರ ಇಲ್ಲದ ತಂದೆಯ ಕುಮ್ಕಿ ಜಮೀನಿನಲ್ಲಿ ತಗಡುಶೀಟಿನ ಮನೆಯಲ್ಲಿ, ನಿರುದ್ಯೋಗಿ ಪತಿ ಮತ್ತು ಮಗನೊಂದಿಗೆ ವಾಸಿಸುತ್ತಿರುವ ಬಡ ಮಹಿಳೆ ಗೀತಾ ನಾಯಕ್‌ ಅವರು ಈ ಯೋಜನೆಯ ಮಂಜೂರಾತಿ ಪತ್ರ ಪಡೆದು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

 

ಗೃಹಲಕ್ಷ್ಮೀಗೂ ಬಿಡಲಿಲ್ಲ ಟೆಕ್ನಿಕಲ್‌ ಪ್ರಾಬ್ಲಂ, ನೋಂದಣಿಗೆ ಪರದಾಡಿದ ಮಹಿಳೆಯರು!

ಎಸ್‌ಎಂಎಸ್ ಬಗ್ಗೆ ಜಾಗೃತಿ ಬೇಕು

ಈ ಎಸ್‌ಎಂಎಸ್‌ ಬಗ್ಗೆ ಜಾಗೃತಿ ಬೇಕು: ಗೀತಾ ನಾಯಕ್‌ ಅವರಂತೆ ಮೊಬೈಲಿಗೆ ಎಸ್‌ಎಂಎಸ್‌ ಬಂದಿರುವುದು ಗೊತ್ತೇ ಇಲ್ಲದೆ ಸಾಕಷ್ಟುಮಂದಿ ಮಹಿಳೆಯರು ಅರ್ಜಿ ಸಲ್ಲಿಸಲು ಹೋಗದೇ ಇರುವ, ಸರ್ಕಾರದ ಈ ಉಪಯುಕ್ತ ಯೋಜನೆಯ ಲಾಭದಿಂದ ವಂಚಿತರಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಮಹಿಳೆಯರು ತಮ್ಮ ಮೊಬೈಲ್‌ನಲ್ಲಿ ಎಸ್‌ಎಂಎಸ್‌ ಬಂದಿರುವುದನ್ನು ಗಮನಿಸಿ ಸಕಾಲದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕು ಎಂದು ಸಮಾಜಸೇವಕ ಗಣೇಶ್‌ ರಾಜ್‌ ಸಲಹೆ ಮಾಡಿದ್ದಾರೆ.

click me!