ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮೇ ನೋಂದಣಿ ಪ್ರಾರಂಭವಾಗಿದ್ದು, ಮೊದಲ ದಿನವೇ ಬಾಲಗ್ರಹ ಹಿಡಿದಿತ್ತು. ಮಧ್ಯಾಹ್ನದ ಆನಂತರ ಶುರುವಾಯಿತಾದರೂ ನಿಧಾನಗತಿಯ ನೋಂದಣಿಗೆ ಜನರು ರೋಸಿಹೋಗುವಂತೆ ಆಯಿತು.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಜು.21) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹಲಕ್ಷ್ಮೇ ನೋಂದಣಿ ಪ್ರಾರಂಭವಾಗಿದ್ದು, ಮೊದಲ ದಿನವೇ ಬಾಲಗ್ರಹ ಹಿಡಿದಿತ್ತು. ಮಧ್ಯಾಹ್ನದ ಆನಂತರ ಶುರುವಾಯಿತಾದರೂ ನಿಧಾನಗತಿಯ ನೋಂದಣಿಗೆ ಜನರು ರೋಸಿಹೋಗುವಂತೆ ಆಯಿತು.
undefined
ಜಿಲ್ಲೆಯ 191 ಗ್ರಾಮ ಒನ್ ಕೇಂದ್ರಗಳಲ್ಲಿ, 153 ಬಾಪೂಜಿ ಕೇಂದ್ರಗಳಲ್ಲಿ, 12 ಕರ್ನಾಟಕ ಒನ್ ಕೇಂದ್ರದಲ್ಲಿ ಹಾಗೂ 17 ನಗರ ಸ್ಥಳೀಯ ಆಡಳಿತ ಕೇಂದ್ರಗಳಲ್ಲಿ ಗುರುವಾರ ಗೃಹಲಕ್ಷ್ಮಿ ನೋಂದಣಿ ಪ್ರಾರಂಭವಾಗಿದೆ.
ಬೆಳಗ್ಗೆ ಸುಮಾರು ಹತ್ತು ಗಂಟೆಯ ವೇಳೆಗೆ ಕೆಲವರು ಬಂದು, ನೋಂದಣಿ ಕೇಂದ್ರ ಮುಂದೆ ನಿಂತಿದ್ದರು. ಆದರೆ, ಅವರಲ್ಲಿ ಬಹುತೇಕ ಮೊಬೈಲ್‌ನಲ್ಲಿ ರಿಜಿಸ್ಟರ್ ಮಾಡಿಕೊಳ್ಳದೆ ಇರುವವರು ಆಗಿದ್ದರು. ಅವರು ನೇರವಾಗಿ ಬಂದಿದ್ದರಿಂದ ಅವರಿಗೆ ಅವಕಾಶ ಇರಲಿಲ್ಲ. ಮೊಬೈಲ್‌ನಲ್ಲಿ ರಿಜಿಸ್ಟಾರ್ ಆಗಿದ್ದವರು ನೋಂದಣಿ ಮಾಡಿಸಿಕೊಳ್ಳಲು ಮುಂದಾದಾಗ ಗ್ರಾಮ ಒನ್‌ನಲ್ಲಿ ವೆಬ್‌ಸೈಟ್ ತೆರೆದುಕೊಳ್ಳಲೇ ಇಲ್ಲ. ಕೆಲಹೊತ್ತು ಪಾಸ್‌ವರ್ಡ್ ಸಮಸ್ಯೆಯಾಯಿತು. ಮಧ್ಯಾಹ್ನ 12 ಗಂಟೆಯ ವೇಳೆಗೆ ಒಂದೊಂದೆ ಕೇಂದ್ರದಲ್ಲಿ ನೋಂದಣಿ ಪ್ರಾರಂಭವಾಯಿತು.
ಯಾರಾರ ನನ್ ಆಧಾರ ಕಾರ್ಡ್ ತಿದ್ದಿಸಿ ಕೊಡ್ರಿ; ತಿದ್ದುಪಡಿಗೆ ವೃದ್ಧೆ ಪರದಾಟ!
ಮೊದಲ ದಿನವಾಗಿದ್ದರಿಂದ ಅಷ್ಟಾಗಿ ಜನರು ನೋಂದಣಿ ಮಾಡಿಸಲು ಆಗಮಿಸಿರಲಿಲ್ಲ. ಮನೆ ಮನೆ ಬರುತ್ತಾರೆ ಎಂದು ಹೇಳಿರುವುದರಿಂದ ಬಹುತೇಕ ಮನೆಗೆ ಬರುವವರ ದಾರಿಯನೇ ಕಾಯುತ್ತಾ ಇರುವುದು ಕಂಡು ಬಂದಿತು.
ಇನ್ನು ಕೆಲವರು ತಮ್ಮ ಮೊಬೈಲ್ ಮೂಲಕ ನೋಂದಣಿ ಮಾಡಿಸಲು ಆಗಮಿಸಿದ್ದರು. ಆದರೂ ಕರ್ನಾಟಕ ಒನ್‌ನಲ್ಲಿನ ಸಿಬ್ಬಂದಿ ಅವರಿಗೆ ತಮ್ಮ ಮೊಬೈಲ್‌ನಲ್ಲಿರುವ ಆ್ಯಪ್ ಮೂಲಕ ನೋಂದಣಿ ಮಾಡಿಸಿ, ಕಳುಹಿಸಿದರು.
ನಿಧಾನಗತಿಗೆ ಸುಸ್ತು:
ವೆಬ್‌ಸೈಟ್ ನಿಧಾನಗತಿಗೆ ಸಿಬ್ಬಂದಿಗೆ ಸುಸ್ತಾಗಿದ್ದಾರೆ. ಜಿಲ್ಲೆಯ ಅಷ್ಟೂಕೇಂದ್ರಗಳಲ್ಲಿ ಆಗಿರುವ ಬಹುದೊಡ್ಡ ಸಮಸ್ಯೆ ಎಂದರೆ ವೆಬ್‌ಸೈಟ್ ನಿಧಾನವಾಗಿರುವುದು. ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿಯೇ ಇರುವ ಕರ್ನಾಟ ಒನ್ ಕೇಂದ್ರದಲ್ಲಿಯೇ ವೆಬ್‌ಸೈಟ್ ನಿಧಾನವಾಗಿದ್ದರಿಂದ 15-20 ಮಾತ್ರ ನೋಂದಣಿ ಮಾಡಲು ಸಾಧ್ಯವಾಗಿದೆ.
ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ಬಾಪೂಜಿಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ತಲಾ ನಾಲ್ಕು ಮಾತ್ರ ನೋಂದಣಿಯಾಗಿವೆ. ಹೀಗಾಗಿ, ಸಂಜೆಯಾದರೂ ಒನ್ ಕೇಂದ್ರಗಳ ಬಳಿ ಜನರು ಕಾಯುತ್ತಾ ಕುಳಿತಿರುವುದು ಕಂಡು ಬಂದಿತು.
ಮ್ಯಾಪಿಂಗ್ ಸಮಸ್ಯೆ:
ಮೇಸೆಜ್ ಮೂಲಕ ನೋಂದಣಿ ಮಾಡಿಸಿಕೊಂಡವರಿಗೆ ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರಕ್ಕೆ ಬರದೆ ಪಕ್ಕದ ಊರಿನ ಕೇಂದ್ರಕ್ಕೆ ಮ್ಯಾಪಿಂಗ್ ಬಂದಿದೆ. ಇದು ಸಹ ದೊಡ್ಡ ಸಮಸ್ಯೆಯಾಗಿದ್ದರಿಂದ ಸಂಜೆಯಾದರೂ ಈ ಕುರಿತು ಸಮಸ್ಯೆಯನ್ನು ನೀಗಿಸುವ ಪ್ರಯತ್ನ ಕೈಗೂಡಿಲ್ಲ.
ಗೃಹಲಕ್ಷ್ಮಿಗೆ ಕೋಟೆ ನಾಡಲ್ಲಿ ಆರಂಭದಲ್ಲಿಯೇ ವಿಘ್ನ!
ಇಡೀ ಜಿಲ್ಲೆಯಲ್ಲಿ ಮೊದಲ ದಿನ ಗೃಹಲಕ್ಷ್ಮಿ ಯೋಜನೆ ಬಾಲಗ್ರಹ ಹಿಡಿದಿತ್ತು ಎನ್ನುವುದು ಮಾತ್ರ ದಿಟ.
ಬಂದಿದ್ದೇ ಸ್ವಲ್ಪ:
ಇನ್ನು ಗೃಹಲಕ್ಷ್ಮಿ ನೋಂದಣಿಗೆ ಬಂದಿದ್ದೇ ಸ್ವಲ್ಪ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಗೃಹಲಕ್ಷ್ಮಿ ನೋಂದಣಿಗೆ ಪ್ರಾರಂಭವಾಗಿದ್ದರೂ ತಮಗೆ ಮೇಸೆಜ್ ಬಂದಿದ್ದರೂ ಗ್ರಾಮ ಒನ್‌ನತ್ತ ಅನೇಕರು ಬರಲೇ ಇಲ್ಲ. ಮೊಬೈಲ್‌ಗೆ ಬಂದ ಮಾಹಿತಿ ಅರ್ಥೈಸಿಕೊಳ್ಳಲು ಆಗದಂಥವರೂ ಇದ್ದಾರೆ. ಗೃಹಲಕ್ಷ್ಮಿ ನೋಂದಣಿಗೆ ಗಡಿಬಿಡಿ ಇರಲಿಲ್ಲವಾದರೂ ಬಂದವರಿಗೂ ನೋಂದಣಿ ಮಾಡಿಕೊಡುವುದಕ್ಕೆ ಸಿಬ್ಬಂದಿ ಹೆಣಗಾಡುತ್ತಿರುವುದು ಕಂಡು ಬಂದಿತು.
ಗೃಹಲಕ್ಷ್ಮೇ ನೋಂದಣಿ ಜಿಲ್ಲಾದ್ಯಂತ ಪ್ರಾರಂಭವಾಗಿದೆ. ಮೊದಲ ದಿನವಾಗಿದ್ದರಿಂದ ಪ್ರಾರಂಭದಲ್ಲಿ ಸಮಸ್ಯೆಯಾಗಿದ್ದು ನಿಜ. ಆನಂತರ ನಿಧಾನಕ್ಕೆ ನೋಂದಣಿ ಪ್ರಾರಂಭವಾಯಿತು. ಆದರೂ ಇನ್ನು ಕೆಲವೊಂದಿಷ್ಟುಸಮಸ್ಯೆಗಳು ಆಗಿದ್ದು, ಮಾಹಿತಿಯನ್ನು ಕೇಂದ್ರ ಕಚೇರಿಗೆ ತಿಳಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಇತ್ಯರ್ಥ ಮಾಡಲಾಗುತ್ತದೆ.
ಗಂಗಣ್ಣ ಪ್ರಭಾರಿ ಡಿಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ನೋಂದಣಿ ಮಾಡಿಸಲು ಬೆಳಗ್ಗೆಯೇ ಹೋಗಿದ್ದರೂ ಪಾಸ್‌ವರ್ಡ್ ಬಂದಿಲ್ಲ ಎಂದು ನೋಂದಣಿಯಾಗಲೇ ಇಲ್ಲ. ಆದರೆ, ಮಧ್ಯಾಹ್ನದ ನೋಂದಣಿಯಾಯಿತು.
ವಿಜಯ ಮುಂಡರಗಿಮಠ, ಬಿಸರಳ್ಳಿ