ಭಾರತೀಯರು ಭಾಗ್ಯವಂತರಾಗಿದ್ದು ನಮ್ಮತನ ಬಿಡಬಾರದು. ಯುವಕರಿಗೆ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯಾಗಿದ್ದು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಧಾರವಾಡ (ಜೂ.23): ಭಾರತೀಯರು ಭಾಗ್ಯವಂತರಾಗಿದ್ದು ನಮ್ಮತನ ಬಿಡಬಾರದು. ಯುವಕರಿಗೆ ಸಂಗೊಳ್ಳಿ ರಾಯಣ್ಣ ಸ್ಫೂರ್ತಿಯಾಗಿದ್ದು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ಬೆಂಗಳೂರಿನ ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬರೀ ಹೆಚ್ಚಿನ ಅಂಕ ಪಡೆದುಕೊಳ್ಳುವುದಷ್ಟೆ ಅಲ್ಲ. ಸಾಮಾನ್ಯ ಜ್ಞಾನ, ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು. ಅಂತಹ ಶಿಕ್ಷಣ ನೀಡಬೇಕು. ಮಕ್ಕಳು ಕಲಿಕಾ ಹಂತದಲ್ಲಿ ಸಂಸ್ಕೃತಿ, ಸಂಸ್ಕಾರದ ಗಣಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು. ಪ್ರಪಂಚಕ್ಕೆ ಏಕತೆ ಸಂದೇಶ ಸಾರಿದ ಭಾರತದ ಸಂಸ್ಕೃತಿ ಅರಿತು ನಡೆಯಬೇಕು. ಇಲ್ಲಿನ ಜ್ಞಾನ ಪಡೆದು, ವಿದೇಶಕ್ಕೆ ಹೋಗದೆ, ತಮ್ಮ ಜ್ಞಾನ ಭಾರತದಲ್ಲೇ ನೆಲೆಸಬೇಕು ಎಂದ ಅವರು, ಪ್ರತಿಭಾವಂತರಿಗೆ ಹಣ ಕೊಡುವುದು ಮುಖ್ಯವಲ್ಲ, ಪ್ರೋತ್ಸಾಹ ಅಗತ್ಯ. ಇದು ಅವರು ಭವಿಷ್ಯದಲ್ಲಿ ಉನ್ನತ ಹುದ್ದೆ ತಲುಪಲು ಸಹಾಯವಾಗಲಿದೆ ಎಂದರು.
ಮುಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬೆಳಗಾವಿಯಲ್ಲಿ ಮಾಡಬೇಕು. ₹ 5 ಸಾವಿರದಂತೆ ₹ 1 ಕೋಟಿ ಕ್ರೋಡೀಕರಣ ಮಾಡಿ ನೀಡುವ ಜತೆಗೆ ಇದಕ್ಕೆ ಬೇಕಾದ ಸಹಕಾರ ನೀಡುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕನಕಶ್ರೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬೆಳಗಾವಿ ಮಾತನಾಡಿ, ಬೆಂಗಳೂರಿಗೆ ಸೀಮಿತವಾಗಿ ಕೆಲಸ ಮಾಡುತ್ತಿದ್ದ ಟ್ರಸ್ಟ್ ಈಗ ರಾಜ್ಯಾದ್ಯಂತ ಕಾರ್ಯ ವ್ಯಾಪ್ತಿ ವಿಸ್ತರಿಸಿದೆ. ಗೃಹ ನಿರ್ಮಾಣ ಸಂಘ, ಬ್ಯಾಂಕ್ ಪ್ರಾರಂಭ ಸೇರಿ ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದರು.
ಶಿವಮೊಗ್ಗದಲ್ಲಿ 200ರ ಗಡಿದಾಟಿದ ಡೆಂಘೀ ಪ್ರಕರಣ: ಜೂನ್ ಬಳಿಕ ಇನ್ನೂ ಏರಿಕೆ ಸಾಧ್ಯತೆ
ಸಾನ್ನಿಧ್ಯವನ್ನು ಮನಸೂರು ರೇವಣಸಿದ್ಧೇಶ್ವರ ಮಠದ ಡಾ. ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಮಾತನಾಡಿದರು. ಉತ್ತರ ಕರ್ನಾಟಕ ಭಾಗದ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ 204 ವಿದ್ಯಾರ್ಥಿಗಳಿಗೆ ₹ 5 ಸಾವಿರ ನಗದು, ಪ್ರಮಾಣ ಪತ್ರ ಒಳಗೊಂಡ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ದೇವರಾಜ ಕಂಬಳಿ, ರಾಜೇಶ್ವರಿ ಸಾಲಗಟ್ಟಿ ಇನ್ನಿತರರು ಉಪಸ್ಥಿತರಿದ್ದರು.