ಯಲಬುರ್ಗಾ ತಾಲೂಕಿನಲ್ಲಿಯೇ ಹೆಚ್ಚು ಸೈನಿಕರನ್ನು ನೀಡಿದ ಸಂಗನಹಾಲ| 11 ಸೈನಿಕರು ಸೇವೆಯಲ್ಲಿ, 30ಕ್ಕೂ ಹೆಚ್ಚು ನಿವೃತ್ತ ಸೈನಿಕರು ಗ್ರಾಮದಲ್ಲಿ|ಎಲ್ಲಿಯೇ ಸೇನಾ ಭರ್ತಿ ರಾರಯಲಿ ನಡೆದರೂ ಸಂಗನಹಾಲದ ಯುವಕರೇ ಹೆಚ್ಚು ಪಾಲ್ಗೊಳ್ಳುತ್ತಾರೆ| ಸೈನ್ಯಕ್ಕೆ ಸೇರುವ ಮಕ್ಕಳಿಗೆ ಬೆನ್ನುಲುಬಾಗಿ ನಿಂತಿರುವ ಪಾಲಕರು, ಸೈನ್ಯಕ್ಕೆ ಸೇರುವಂತೆ ಪ್ರೇರೆಪಿಸುತ್ತಿದ್ದಾರೆ|
ಶಿವಮೂರ್ತಿ ಇಟಗಿ
ಯಲಬುರ್ಗಾ(ಡಿ.23): ದೇಶ ಕಾಯುವ ಹೆಮ್ಮೆಯ ಪುತ್ರರನ್ನು ನೀಡಿದ ಈ ಊರಿನಲ್ಲಿ ನಿತ್ಯ ಉಗ್ರರೊಂದಿಗಿನ ಯುದ್ಧದ ರೋಚಕಗಳೇ ಊರಿನ ಕಟ್ಟೆಗಳಲ್ಲಿ ಚರ್ಚೆಯಾಗುತ್ತವೆ. ಯಾವ ಓಣಿಗೆ ಕಾಲಿಟ್ಟರು ಧೀರರಿಗೆ ಜನ್ಮ ನೀಡಿದ ಹೆತ್ತವರ ದರ್ಶನ. ಯುವಕರು ಸೈನ್ಯ ಸೇರಲು ಇಲ್ಲಿನ ನಿವೃತ್ತ ಸೈನಿಕರೇ ಸ್ಫೂರ್ತಿ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕಿನ ಸಂಗನಹಾಲ ಹೆಮ್ಮೆಯ ಪುತ್ರರರಿಗೆ ಜನ್ಮ ನೀಡಿದ ಭೂಮಿ. ಸೇನೆಯಲ್ಲಿ 11 ಸೈನಿಕರು ಸೇವೆ ಸಲ್ಲಿಸುತ್ತಿದ್ದರೆ, 30ಕ್ಕೂ ಅಧಿಕ ಹೆಚ್ಚು ಸೈನಿಕರು ನಿವೃತ್ತಿ ಪಡೆದು ಯುವಕರಿಗೆ ಸೈನ್ಯ ಸೇರಲು ಸ್ಫೂರ್ತಿಯಾಗಿ ನಿಂತಿದ್ದಾರೆ. ಈ ಊರಿನಲ್ಲಿ ಸೇನೆಗೆ ಆಯ್ಕೆ ಬಯಸಿ ಹೆಚ್ಚಿನ ಸಂಖ್ಯೆಯ ಯುವಕರು ಸೇನಾ ಭರ್ತಿ ರಾರಯಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾಲೂಕಿನಲ್ಲಿಯೇ ಅತಿ ಹೆಚ್ಚು ಜನರು ಸೈನ್ಯಕ್ಕೆ ಸೇರಿದ್ದಾರೆ.
ನಿವೃತ್ತ ಯೋಧರೇ ಸ್ಫೂರ್ತಿ:
ಉಗ್ರರೊಂದಿಗೆ ಕಾದಾಡಿ ದೇಶವನ್ನು ರಕ್ಷಿಸಿದ, ಉಗ್ರರೊಂದಿಗೆ ಹೋರಾಡಿದ ರೋಚಕ ಸಂಗತಿಗಳ ನೆನಪಿನ ಬುತ್ತಿ ಹೊತ್ತುಕೊಂಡು ಸೈನ್ಯದಿಂದ ನಿವೃತ್ತ ಪಡೆದು ಗ್ರಾಮಕ್ಕೆ ಮರಳಿರುವ ಮಾಜಿ ಸೈನಿಕರು ಗ್ರಾಮದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಯುವಕರು ಸೈನ್ಯ ಸೇರಬೇಕು ಎಂಬ ಕನಸು ಹೊತ್ತುಕೊಂಡು ಇವರ ಬಳಿ ಬಂದರೆ, ರಾರಯಲಿಗೆ ಯಾವ ಸಿದ್ಧತೆ ಮಾಡಿಕೊಳ್ಳಬೇಕು, ಹೇಗೆ ಅಭ್ಯಾಸ ಮಾಡಬೇಕು ಎಂಬ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಹೀಗಾಗಿ ಎಲ್ಲಿಯೇ ಸೇನಾ ಭರ್ತಿ ರಾರಯಲಿ ನಡೆದರೂ ಸಂಗನಹಾಲದ ಯುವಕರೇ ಹೆಚ್ಚು ಪಾಲ್ಗೊಳ್ಳುತ್ತಾರೆ. ಸೈನ್ಯಕ್ಕೆ ಸೇರುವ ಮಕ್ಕಳಿಗೆ ಬೆನ್ನುಲುಬಾಗಿ ನಿಂತಿರುವ ಪಾಲಕರು, ಸೈನ್ಯಕ್ಕೆ ಸೇರುವಂತೆ ಪ್ರೇರೆಪಿಸುತ್ತಿದ್ದಾರೆ.
ಸಾಮಾಜಿಕ ಸೇವೆ:
ವೈಪರೀತ್ಯ ಹವಾಮಾನದಲ್ಲಿ ಕರ್ತವ್ಯ ನಿರ್ವಹಿಸಿ ರಜೆಗೆ ಗ್ರಾಮಕ್ಕೆ ಬರುವ ಸೈನಿಕರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮದಲ್ಲಿ ಸಂಚಲನ ಮೂಡಿಸುತ್ತಾರೆ. ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯ, ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಮೂಲಕ ಗ್ರಾಮದಲ್ಲಿ ಸೌಹಾರ್ದತೆ ಮೂಡಿಸಿ ಸಂಬಂಧಗಳನ್ನು ವೃದ್ಧಿಸುತ್ತಿದ್ದಾರೆ. ಸೈನಿಕರ ಕಾರ್ಯಕ್ಕೆ ಯುವಕರು, ಸಂಘ-ಸಂಸ್ಥೆಗಳು ಕೈಜೋಡಿಸುವ ಮೂಲಕ ಮಾದರಿಯಾಗಿ ನಿಂತಿದ್ದಾರೆ.
ರಾಜ್ಯದಲ್ಲಿ ಎಲ್ಲಿಯೇ ಸೇನಾ ಭರ್ತಿ ರಾರಯಲಿ ನಡೆದರೆ ಅಲ್ಲಿ ನಮ್ಮೂರಿನ ಯುವಕರು ಗುಂಪು ಇರುತ್ತದೆ. ದೇಶ ಸೇವೆ ಮಾಡಬೇಕೆನ್ನುವ ಛಲ, ಆತ್ಮವಿಶ್ವಾಸ ಹೊಂದಿದ್ದಾರೆ. ನಾವು ಕೂಡ ಸೈನೆಯಿಂದ ನಿವೃತ್ತರಾದರೂ ನಮ್ಮಲ್ಲಿ ಆ ಉತ್ಸಾಹ, ಧೈರ್ಯ, ಹುಮ್ಮಸು ಕಡಿಮೆಯಾಗಿಲ್ಲ. ನಮ್ಮ ಮಕ್ಕಳು ಸೇರಿದಂತೆ ಗ್ರಾಮದ ಯುವಕರು ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಎನ್ನುವ ಆಸೆ. ಪಾಲಕರು ಮಕ್ಕಳು ಸೈನ್ಯಕ್ಕೆ ಸೇರುವಂತೆ ಪ್ರೇರೆಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ನಿವೃತ್ತ ಯೋಧರಾದ ಶಿವಪುತ್ರಪ್ಪ ದೇವರ, ದೇವಪ್ಪ ದೊಡ್ಡಾಣಿ ಹಾಗೂ ಸಂಗಮೇಶ ಗಡಾದ ಅವರು ತಿಳಿಸಿದ್ದಾರೆ.
ಸಂಗನಹಾಲ ಗ್ರಾಮವನ್ನು ತಾಲೂಕಿನ ಬಹುತೇಕ ಜನತೆ ಯೋಧರ ಗ್ರಾಮವೆಂದು ಕರೆಯುವಾಗ ಖುಷಿಯಾಗುತ್ತದೆ. ಸೈನಿಕರನ್ನು ಪ್ರತಿಯೊಬ್ಬರು ಪ್ರೀತಿ, ವಿಶ್ವಾಸದಿಂದ ಗೌರವಿಸಬೇಕು. ದೇಶ ರಕ್ಷಣೆಗೆ ಜೀವದ ಹಂಗು ತೊರೆದು ಹೋರಾಡುವ ಸೈನಿಕರ ಆ ಪರಿಶ್ರಮ ಮರೆಯಲು ಸಾಧ್ಯವಿಲ್ಲ. ದೇಶದ ನಿಜವಾದ ಹೀರೋಗಳು ನಮ್ಮ ಸೈನಿಕರು ಎಂದು ಸಂಗನಹಾಲ ಗ್ರಾಮಸ್ಥರಾದ ಶೇಖರ ಗುರಾಣಿ, ಅಡಿವೆಪ್ಪ ಲಕ್ಕಲಕಟ್ಟಿ ಅವರು ಹೇಳಿದ್ದಾರೆ.