ಜೀನ್ಸ್ ಪ್ಯಾಂಟ್ ತೊಟ್ಟು ಜಿಪಂ ಕಚೇರಿಗೆ ಬಂದ ಪಿಡಿಓಗೆ ನೋಟಿಸ್!| ವ್ಯಾಪಕ ಚರ್ಚೆಗೊಳಗಾಗಿರುವ ಹಾಸನ ಜಿಪಂ ಸಿಇಒ ಕ್ರಮ
ಹಾಸನ[ಡಿ.23]: ವಿದ್ಯಾರ್ಥಿಗಳು ಸಮವಸ್ತ್ರಕ್ಕೆ ಬದಲಾಗಿ ಜೀನ್ಸ್ ತೊಟ್ಟು ಶಾಲೆ ಕಾಲೇಜುಗಳಿಗೆ ಆಗಮಿಸಿದರೆ ಶಿಸ್ತ್ರಕ್ರಮಕ್ಕೊಳಗಾಗುವುದು ಗೊತ್ತು. ಆದರೆ ಸರ್ಕಾರಿ ಅಧಿಕಾರಿಯೊಬ್ಬರು ಜೀನ್ಸ್ ಪ್ಯಾಂಟ್ ತೊಟ್ಟು ಕಚೇರಿ ಪ್ರವೇಶಿಸಿದ್ದಕ್ಕೆ ಉನ್ನತ ಅಧಿಕಾರಿಯಿಂದ ನೋಟಿಸ್ ಜಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಆಲೂರು ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ರುದ್ರೇಗೌಡ ಅವರು ವಸ್ತ್ರಸಂಹಿತೆ ಉಲ್ಲಂಘನೆ ಮಾಡಿದ್ದು ಶಿಸ್ತುಕ್ರಮ ಜರುಗಿಸಲು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಐಒ) ನೋಟಿಸ್ ಜಾರಿ ಮಾಡಿದ್ದಾರೆ.
undefined
ಡಿ.20 ರಂದು ಪಿಡಿಓ ರುದ್ರೇಗೌಡರು ಜೀನ್ಸ್ ಪ್ಯಾಂಟ್ ಮತ್ತು ಅದರ ಮೇಲೆ ಫಾರ್ಮಲ್ ಶರ್ಟ್ ಧರಿಸಿಕೊಂಡು ಜಿಲ್ಲಾ ಪಂಚಾಯ್ತಿ ಕಚೇರಿಗೆ ಕೆಲಸದ ನಿಮಿತ್ತ ಬಂದಿದ್ದರು. ಇದನ್ನು ಕಂಡ ಸಿಇಓ, ಸರ್ಕಾರಿ ನೌಕರರಿಗೆ ಶೋಭೆ ತರುವಂತಹ ಸಭ್ಯ ವಸ್ತ್ರ ಧರಿಸದೇ ಜೀನ್ಸ್ ಪ್ಯಾಂಟ್ ತೊಟ್ಟು ಜಿಲ್ಲಾ ಪಂಚಾಯ್ತಿ ಕಚೇರಿಗೆ ಬಂದು ವಸ್ತ್ರ ಸಂಹಿತೆ ಉಲ್ಲಂಘನೆ ಮಾಡಿದ್ದೀರಿ. ಈ ನೋಟೀಸ್ ತಲುಪಿದ 3 ದಿನಗಳಲ್ಲಿ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ಸೇವಾ ನಿಯಮವಳಿ (ಸಿಸಿಎ) 1957 ರನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಕಳುಹಿಸಿದ್ದಾರೆ.
ಈ ವಿಚಾರ ವ್ಯಾಪಕ ಚರ್ಚೆಗೊಳಗಾಗಿದ್ದು ಟೀ ಶಟ್ ರ್ ಜೊತೆಗೆ ಜೀನ್ಸ್ ಪ್ಯಾಂಟ್ ಧರಿಸಿದ್ದರೇ ಸರ್ಕಾರಿ ನೌಕರರ ವಸ್ತ್ರ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಆದರೆ ಪಿಡಿಓ ರುದ್ರೇಗೌಡರು, ಜೀನ್ಸ್ ಪ್ಯಾಂಟ್ ಮತ್ತು ಮೂಮೂಲಿ ಷರಟ್ ಧರಿಸಿದ್ದರು. ಇದು ಸರ್ಕಾರಿ ನೌಕರರ ವಸ್ತ್ರ ಸಂಹಿತೆ ಉಲ್ಲಂಘನೆ ಆಗುವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.