ಸಂಡೂರಿನ ಮಹಿಳೆಗೆ ಕೊರೋನಾ ಸೋಂಕು ದೃಢ: ಆತಂಕದಲ್ಲಿ ಗಣಿ ಊರಿನ ಜನತೆ| ಪುಣ್ಯತಿಥಿಗೆ ಬಂದ ನೂರಾರು ಜನರು ಬಿರಿಯಾನಿ ತಿಂದು ಹೋಗಿದ್ದರು| ಸೋಂಕಿತ ಮಹಿಳೆ ತಮ್ಮ ದಿನಸಿ ಅಂಗಡಿಯಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದರು| ಈ ವರೆಗೆ ಮಹಿಳೆಗೆ ಸೋಂಕು ಹರಿಡಿದ್ದು ಎಲ್ಲಿ? ಯಾವಾಗ ಎಂಬುದು ಗೊತ್ತಾಗಿಲ್ಲ|
ಬಳ್ಳಾರಿ(ಮೇ.09): ಜಿಲ್ಲೆಯ ಸಂಡೂರಿನ ತಾಲೂಕಿನ ಕೃಷ್ಣನಗರದ ಮಹಿಳೆಗೆ ಕೊರೋನಾ ವೈರಸ್ ಸೋಂಕು ತಗಲಿರುವುದು ಗುರುವಾರ ಸಂಜೆ ದೃಢಪಟ್ಟಿರುವ ಬೆನ್ನಲ್ಲೇ ಈ ಮಹಿಳೆಯಿಂದ ಸಂಪರ್ಕಿತರಿಗೆ ಸೋಂಕು ಹಬ್ಬಿರಬಹುದು ಎಂಬ ಆತಂಕ ಸ್ಥಳೀಯರಲ್ಲಿ ಶುರುವಾಗಿದೆ.
ಸೋಂಕಿತ ಮಹಿಳೆ ಗಂಡನ ಮನೆ ಹೊಸಪೇಟೆ. ಗಂಡ ತೀರಿದ ಬಳಿಕ ಕಳೆದ ಹತ್ತಾರು ವರ್ಷಗಳಿಂದ ತವರು ಮನೆಯಾದ ಸಂಡೂರಿನಲ್ಲಿಯೇ ನೆಲೆಸಿದ್ದಾಳೆ. ಈಕೆಯ ತಂದೆ ನಡೆಸುತಿದ್ದ ಕಿರಾಣಿ ಅಂಗಡಿಯೇ ಜೀವನಾಧಾರವಾಗಿಟ್ಟುಕೊಂಡು ತಾಯಿ, ಸಹೋದರ ಹಾಗೂ ಓರ್ವ ಪುತ್ರನೊಂದಿಗೆ ಇದ್ದರು. ಕಳೆದ ಸುಮಾರು 45 ದಿನಗಳ ಹಿಂದೆಯಷ್ಟೇ ಈಕೆಯ ತಂದೆ ಮೃತಪಟ್ಟಿದ್ದರು.
ಕೂಡ್ಲಿಗಿಯಲ್ಲಿ ಓಡಾಡಿದ್ದ ದಾವಣಗೆರೆ ಕೊರೋನಾ ಸೋಂಕಿತ..!
ಈ ಸಂಬಂಧ ಏ. 24ರಂದು ಪುಣ್ಯತಿಥಿ ನಡೆಯಿತು. ಕಾರ್ಯಕ್ರಮಕ್ಕೆ ಅನೇಕ ಬಂಧು-ಬಳಗದವರು ಆಗಮಿಸಿದ್ದರು. ಗ್ರಾಮದ ಅನೇಕರು ಆಗಮಿಸಿ ಬಿರಿಯಾನಿ ಊಟ ಮಾಡಿದ್ದರು. ಸೋಂಕಿತ ಮಹಿಳೆ ತಮ್ಮ ದಿನಸಿ ಅಂಗಡಿಯಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದರು. ಈ ವರೆಗೆ ಮಹಿಳೆಗೆ ಸೋಂಕು ಹರಿಡಿದ್ದು ಎಲ್ಲಿ? ಯಾವಾಗ ಎಂಬುದು ಗೊತ್ತಾಗಿಲ್ಲ. ಪುಣ್ಯತಿಥಿಗೆ ಬಂದವರಲ್ಲಿಯೇ ಓರ್ವರಿಗೆ ಸೋಂಕು ಇರಬಹುದೇ? ನಿತ್ಯ ವ್ಯಾಪಾರ ಮಾಡುವಾಗ ಯಾರಿಗಾದರೂ ಸೋಂಕು ಇದ್ದು, ಇವರಿಗೆ ಹರಡಿರಬಹುದೇ? ಎಂಬಿತ್ಯಾದಿ ಗುಮಾನಿಗಳು ಇವೆ. ಪೊಲೀಸ್ ಹಾಗೂ ವೈದ್ಯರ ತಂಡ ಪರಿಶೀಲನೆ ಆರಂಭಿಸಿದೆ.
ಸಂಡೂರು ಪಟ್ಟಣದಲ್ಲಿ ಮಹಿಳೆಗೆ ಸೋಂಕು ತಗುಲಿರುವುದರಿಂದ ಮಹಿಳೆ ವಾಸದ ನಿರ್ದಿಷ್ಟ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಮನೆಮನೆ ಆರೋಗ್ಯ ಸಮೀಕ್ಷೆ ಆರಂಭಿಸಲಾಗಿದೆ. ಇದಕ್ಕಾಗಿ 25 ತಂಡಗಳನ್ನು ರಚನೆ ಮಾಡಲಾಗಿದೆ. ಸೋಂಕು ಹರಡದಂತೆ ಕ್ರಮ ವಹಿಸುವ ಸಂಬಂಧ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಡಿಎಚ್‌ಒ ಡಾ. ಜನಾರ್ದನ ರೆಡ್ಡಿ, ತಹಸೀಲ್ದಾರ್ ರಶ್ಮಿ, ಟಿಎಚ್‌ಒ ಡಾ. ಗೋಪಾಲರಾವ್ ಅವರು ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಸಭೆ ನಡೆಸಿದರಲ್ಲದೆ, ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಸೋಂಕಿತ ಮಹಿಳೆಯನ್ನು ಜಿಲ್ಲಾ ಕೊರೋನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕಿತಳ ಮಗ ಸೇರಿ 6 ಜನ ಸಂಬಂಧಿಕರನ್ನು ಹೊಸಪೇಟೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.