2 ಸಾವಿರ ಕ್ಯೂಬಿಕ್ ಮೀಟರ್ ಮರಳಿನ ಬೇಡಿಕೆ| ಸಿಸಿ ರಸ್ತೆ, ಸಕಾರ್ರಿ ಕಟ್ಟಡ ಕಾಮಗಾರಿಗೂ ಮರಳಿಗೆ ಬರ| ಹಳ್ಳಿಗಳಲ್ಲಿ ಮನೆ ಕಟ್ಟಿಕೊಳ್ಳಲು ಬಡವರು ಮರಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ| ಸರ್ಕಾರಿ ಕಟ್ಟಡ, ಸಿಸಿ ರಸ್ತೆ ಸೇರಿದಂತೆ ಯಾವ ಕಾಮಗಾರಿಗಳಿಗೂ ಮರಳು ಸಿಗುತ್ತಿಲ್ಲ| ಜನರಿಗೆ ಹಾಗೂ ಅಭಿವೃದ್ಧಿ ಹಿನ್ನೆಡೆ|
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ(ಮೇ.21): ಸ್ಟಾಕ್‌ಯಾರ್ಡ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಸಂಗ್ರಹವಾಗಿದ್ದರೂ ತಾಲೂಕಿನ ಸರ್ಕಾರಿ ಕಾಮಗಾರಿ ಹಾಗೂ ಖಾಸಗಿ ಜನ ಮನೆ ನಿರ್ಮಾಣಕ್ಕೆ ಮರಳು ಮಾತ್ರ ಸಿಗುತ್ತಿಲ್ಲ! ಇಷ್ಟು ದಿನ ಕೊರೋನಾ ನೆಪ ಹೇಳುತ್ತಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮರಳು ಸಾಗಾಟ ಹಾಗೂ ಮಾರಾಟಕ್ಕೆ ಪರವಾನಗಿ ನೀಡುತ್ತಿಲ್ಲವೆಂಬ ದೂರುಗಳು ಕೇಳಿ ಬರುತ್ತಿದ್ದವು. ಆದರೆ ಈಗ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಅಂತರ್ ಜಿಲ್ಲೆ ಹೊರತುಪಡಿಸಿ ಜಿಲ್ಲೆಯೊಳಗೆ ಮರಳು ಮಾರಾಟ ಮತ್ತು ಸಾಗಾಟಕ್ಕೆ ಪರವಾನಗಿ ನೀಡುತ್ತಿದ್ದಾರೆ.
ಮರಳು ಬ್ಲಾಕ್‌ಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು, ಸರ್ಕಾರಕ್ಕೆ ರಾಜಧನ ಪಾವತಿ ಮಾಡಿ ಮರಳಿನ ಪರವಾನಗಿ ಪಡೆದುಕೊಳ್ಳುತ್ತಿಲ್ಲ. ಸದ್ಯ ಸರ್ಕಾರ ಜಿಲ್ಲೆಯೊಳಗೆ ಮರಳು ಮಾರಾಟ ಮಾತ್ರ ಪರವಾನಗಿ ನೀಡಿದೆ. ಇದರಿಂದ ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡಲು ಅಸಾಧ್ಯ. ಅಂತರ್ ಜಿಲ್ಲೆ ಪರವಾನಗಿ ನೀಡಿದರೇ? ರಾಜಧನ ಪಾವತಿ ಮಾಡಿ ಪರವಾನಗಿ ಪಡೆಯಬಹುದು ಎಂಬ ಲೆಕ್ಕಾಚಾರ ಗುತ್ತಿಗೆದಾರರಿದ್ದಾರೆ.
ಕ್ರೂರಿ ಕೊರೋನಾ ಅಟ್ಟಹಾಸಕ್ಕೆ ಮೂರು ಹೆಣ್ಣು ಮಕ್ಕಳು ಅನಾಥ..!
ಹಳ್ಳಿಗಳಲ್ಲಿ ಮನೆ ಕಟ್ಟಿಕೊಳ್ಳಲು ಬಡವರು ಮರಳಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಸರ್ಕಾರಿ ಕಟ್ಟಡ, ಸಿಸಿ ರಸ್ತೆ ಸೇರಿದಂತೆ ಯಾವ ಕಾಮಗಾರಿಗಳಿಗೂ ಮರಳು ಸಿಗುತ್ತಿಲ್ಲ. ಇದರಿಂದ ಜನರಿಗೆ ಹಾಗೂ ಅಭಿವೃದ್ಧಿ ಹಿನ್ನೆಡೆಯಾಗುತ್ತಿದೆ.
ಸರ್ಕಾರಿ ಅಧಿಕಾರಿಗಳು ಹೊಸ ಮರಳು ನೀತಿ ಜಾರಿ ಮಾಡಿದ್ದೇವೆ, ಸಾಮಾನ್ಯ ಜನರಿಗೂ ಗ್ರಾಮ ಪಂಚಾಯಿತಿ ಮೂಲಕ ಮರಳು ಸಿಗುವಂತೆ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಆದರೆ ಮನೆ ಕಟ್ಟಲು ಬೊಗಸೆ ಮರಳು ಸಿಗುತ್ತಿಲ್ಲ. ಅತ್ತ ಮರಳಿನ ಸ್ಟಾಕ್‌ಯಾರ್ಡ್‌ಗೆ ಹೋಗಿ ಮರಳು ಮಾರಾಟಕ್ಕೆ ಕೇಳಿದರೆ, ಪಾಸ್ ಇಲ್ಲ ಎಂಬ ನೆಪ ಹೇಳುತ್ತಾರೆ. ಎಲ್ಲರಿಗೂ ಮರಳು ಸಿಗುವಂತಹ ವ್ಯವಸ್ಥೆ ಮಾಡಲಿ ಎಂದು ಮಾಗಳ ಗ್ರಾಮದ ಪ್ರವೀಣ್ ಎಂಬುವರು ಹೇಳಿದ್ದಾರೆ.
ಹೂವಿನಹಡಗಲಿಯ ಮರಳಿನ ಸ್ಟಾಕ್‌ಯಾರ್ಡ್‌ಗಳಲ್ಲಿ ಮರಳು ಸಂಗ್ರಹವಿದೆ. ಗುತ್ತಿಗೆದಾರರು ರಾಜಧನ ತುಂಬಿಲ್ಲ. ನಾಳೆಯೇ ಪಾವತಿ ಮಾಡಲಿ ಜಿಲ್ಲೆಯೊಳಗೆ ಮರಳು ಮಾರಾಟ ಮತ್ತು ಸಾಗಾಟಕ್ಕೆ ಅವಕಾಶ ನೀಡುತ್ತೇವೆ. ನಾವು ಪಾಸ್ ಕೊಡುತ್ತಿಲ್ಲವೆಂದು ಹೇಳುತ್ತಿರುವುದು ಶುದ್ಧ ಸುಳ್ಳು. ಆನ್‌ಲೈನ್‌ನಲ್ಲೇ ಹಣ ಪಾವತಿ ಮಾಡಿ ಪರವಾನಗಿ ಪಡೆಯುವಂತಹ ವ್ಯವಸ್ಥೆ ಮಾಡಿದ್ದೇವೆ ಎಂದು ಹೊಸಪೇಟೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಮಹಾವೀರ ಅವರು ತಿಳಿಸಿದ್ದಾರೆ.