ಹಾಸನ: ಉತ್ತರಾಖಂಡ್‌ ಹೆಲಿಕಾಪ್ಟರ್‌ ದುರಂತದಲ್ಲಿ ಎದೆಯೆತ್ತರ ಬೆಳೆದ ಮಗ ಪ್ರತಾಪ್ ಗೌಡ ಸಾವಿನ 6 ದಿನಕ್ಕೆ ತಂದೆ ಕೂಡ ಸಾವು

Published : Nov 06, 2026, 02:11 PM IST
Pratap Gowda Father Death

ಸಾರಾಂಶ

ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪಗೌಡ ಅವರ ತಂದೆ ನಿಂಗರಾಜು ಅವರು ಮಗನ ಅಗಲಿಕೆಯ ನೋವು ತಾಳಲಾರದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ ಆರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವುದು ಬಾಚಿಹಳ್ಳಿ ಗ್ರಾಮದಲ್ಲಿ ತೀವ್ರ ಶೋಕ ಮೂಡಿಸಿದೆ.

ಹಾಸನ (ನ.6): ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ಮನಕಲುಕುವ ದುರಂತ ಸಂಭವಿಸಿದೆ. ಅಕ್ಟೋಬರ್‌ 30 ರಂದು ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅಕಾಲಿಕ ಮರಣ ಹೊಂದಿದ್ದ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಪ್ರತಾಪಗೌಡ (ಪ್ರತಾಪ್ ಬಾಚಿಹಳ್ಳಿ) ಅವರ ತಂದೆ ನಿಂಗರಾಜು ಗುರುವಾರ ನಿಧನರಾಗಿದ್ದಾರೆ. 6 ದಿನಗಳ ಹಿಂದೆಯಷ್ಟೇ ಎದೆಯೆತ್ತರ ಬೆಳೆದ ಮಗನನ್ನು ಕಳೆದುಕೊಂಡು ತೀವ್ರ ದುಃಖದಲ್ಲಿದ್ದ ನಿಂಗರಾಜು ಅವರು, ಮಗನ ಅಗಲಿಕೆಯ ನೋವನ್ನು ಭರಿಸಲಾಗದೆ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಒಂದೇ ಕುಟುಂಬದಲ್ಲಿ 6 ದಿನದ ಅವಧಿಯಲ್ಲಿ ಸಂಭವಿಸಿದ ದುರಂತಗಳು ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕದ ಛಾಯೆಯನ್ನು ಮೂಡಿಸಿದೆ. ಬೆನ್ನುಬೆನ್ನಿಗೆ ಇಬ್ಬರು ಪ್ರಮುಖ ಸದಸ್ಯರನ್ನು ಕಳೆದುಕೊಂಡ ಆ ಕುಟುಂಬದ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಇಡೀ ಗ್ರಾಮಸ್ಥರು ಹಾಗೂ ಬಂಧು-ಮಿತ್ರರು ಕಣ್ಣೀರಿನಲ್ಲಿ ಮುಳುಗಿದ್ದಾರೆ.

ಹಾಸನ ಜಿಲ್ಲೆಯ ಹೆತ್ತೂರು ಹೋಬಳಿಯ ಬಾಚಿಹಳ್ಳಿ ಗ್ರಾಮದವರಾದ ಪ್ರತಾಪಗೌಡ ಅವರು ಐಟಿಐ (ITI) ಶಿಕ್ಷಣ ಪಡೆದಿದ್ದರು. ತಮ್ಮ ಕಠಿಣ ಪರಿಶ್ರಮದಿಂದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ (Construction) ಸಂಸ್ಥೆಯನ್ನು ಸ್ಥಾಪಿಸಿ, ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

ಕೋಟಿ ಕೋಟಿ ಗಳಿಸಿದರೂ ಹುಟ್ಟೂರನ್ನು ಮರೆಯದ ದಾನಿ

ತಮ್ಮ ಉದ್ಯಮದಲ್ಲಿ ಸಂಪಾದಿಸಿದ ಹಣದಲ್ಲಿ ಸಕಲೇಶಪುರ ಹಾಗೂ ನೆರೆಯ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಭಾಗಗಳಲ್ಲಿ ಅಪಾರ ಪ್ರಮಾಣದ ಧನಸಹಾಯ ಮತ್ತು ಸಮಾಜಮುಖಿ ಕಾರ್ಯಗಳನ್ನು ನಡೆಸಿ ಪ್ರತಾಪ್ ಜನಪ್ರಿಯರಾಗಿದ್ದರು: ತಮ್ಮ ಹುಟ್ಟೂರಾದ ಬಾಚಿಹಳ್ಳಿಯಲ್ಲಿ ತಮ್ಮ ಸ್ವಂತ ವೆಚ್ಚದ ₹26 ಲಕ್ಷ ರೂಪಾಯಿಗಳನ್ನು ವ್ಯಯಿಸಿ ಭವ್ಯ ದೇವಸ್ಥಾನ ನಿರ್ಮಾಣ ಮಾಡಿಸಿಕೊಟ್ಟಿದ್ದರು.

ಹೆತ್ತೂರು ಸಮೀಪದ ಹಳ್ಳಿಯೂರಿನಲ್ಲಿ ಬೆಂಕಿ ಅವಘಡಕ್ಕೀಡಾಗಿ ಸಂಪೂರ್ಣ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಬಡ ಮಹಿಳೆಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ₹4.2 ಲಕ್ಷ ವೆಚ್ಚದಲ್ಲಿ ನೂತನ ಮನೆ ಕಟ್ಟಿಸಿಕೊಡುವ ಮೂಲಕ ಸಮಾಜ ಸೇವಕರಾಗಿ ಹೆಸರುವಾಸಿಯಾಗಿದ್ದರು. ಉದಾರ ಮನಸ್ಸಿನ ಮಗ ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದು ಇಡೀ ತಾಲೂಕಿಗೆ ಪೆಟ್ಟು ನೀಡಿದ್ದರೆ, ಇದೀಗ ಆ ದುಃಖದಲ್ಲೇ ತಂದೆ ನಿಂಗರಾಜು ಅವರು ನಿಧನರಾಗಿರುವುದು ದೈವದ ಕ್ರೂರ ಆಟಕ್ಕೆ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ಸಾಯಲು ಹೋದ ಮಹಿಳೆಯನ್ನು ಬದುಕಿಸಿದ ಮೊಸಳೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಿತು ವಿಚಿತ್ರ ಘಟನೆ
ಉತ್ತರ ಕನ್ನಡ: ಕಡ್ಡಿ ಗೀರಿ ಬಾವಿಗೆ ಎಸೆದರೆ ಹೊತ್ತಿಕೊಳ್ಳುತ್ತೆ ಬೆಂಕಿ, ಸ್ಥಳೀಯರು ಕಂಗಾಲು!