ಮಳೆ ಜೊತೆಗೆ ಮಡಿಕೇರಿ ನಗರಸಭೆ ಎಡವಟ್ಟಿನಿಂದ ಕುಸಿಯುತ್ತಿರುವ ಸಾಯಿ ಕ್ರೀಡಾಂಗಣ ಜಂಕ್ಷನ್ ರಸ್ತೆ!

By Govindaraj S  |  First Published Jul 22, 2024, 7:48 PM IST

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆ ಕಳೆದ ಎರಡು ದಿನಗಳಿಂದ ಬಹುತೇಕ ತಗ್ಗಿದೆ. ಮಳೆ ತಗ್ಗಿದರೂ ಮಳೆಯಿಂದ ಆಗುತ್ತಿರುವ ಅವಾಂತರಗಳು ಮಾತ್ರ ತಪ್ಪಿಲ್ಲ. ಇದೀಗ ಮಳೆಯಿಂದಾಗುವ ಅವಘಡಗಳ ಜೊತೆಗೆ ಮಡಿಕೇರಿ ನಗರಸಭೆಯೂ ಸೇರಿ ಜನರಿಗೆ ದೊಡ್ಡ ಸಂಕಷ್ಟವನ್ನೇ ತಂದಿಟ್ಟಿದೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜು.22): ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆ ಕಳೆದ ಎರಡು ದಿನಗಳಿಂದ ಬಹುತೇಕ ತಗ್ಗಿದೆ. ಮಳೆ ತಗ್ಗಿದರೂ ಮಳೆಯಿಂದ ಆಗುತ್ತಿರುವ ಅವಾಂತರಗಳು ಮಾತ್ರ ತಪ್ಪಿಲ್ಲ. ಇದೀಗ ಮಳೆಯಿಂದಾಗುವ ಅವಘಡಗಳ ಜೊತೆಗೆ ಮಡಿಕೇರಿ ನಗರಸಭೆಯೂ ಸೇರಿ ಜನರಿಗೆ ದೊಡ್ಡ ಸಂಕಷ್ಟವನ್ನೇ ತಂದಿಟ್ಟಿದೆ. ಹೌದು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತೀಹೆಚ್ಚು ಮಳೆ ಸುರಿಯುತ್ತಿದೆ. ಈ ಮಳೆಯ ನಡುವೆಯೇ ರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಲು ಹೋಗಿ ನಗರಸಭೆ ಮಹಾಎಡವಟ್ಟು ಮಾಡಿದೆ. ಇದೀಗ ರಸ್ತೆ ಕಾಮಗಾರಿಯೂ ಇಲ್ಲ, ಇರುವ ರಸ್ತೆಯ ಸಂಚಾರವೂ ಇಲ್ಲ ಎನ್ನುವಂತೆ ಆಗಿದೆ. 

Tap to resize

Latest Videos

ಬೀಸಿಗೆಯಲ್ಲಿ ಸುಮ್ಮನಿದ್ದ ನಗರಸಭೆ ಮೊದಲೇ ಕುಸಿಯುತ್ತಿದ್ದ ಮಡಿಕೇರಿ ನಗರದ ಸಾಯಿ ಕ್ರೀಡಾಂಗಣದ ಬಳಿಯ ತಿರುವಿನಲ್ಲಿ ತಡೆಗೋಡೆ ನಿರ್ಮಿಸಲು ಹೋಗಿ ಇದೀಗ ಇಡೀ ರಸ್ತೆಯೇ ಕುಸಿದುಹೋಗುವ ಹಂತಕ್ಕೆ ತಲುಪಿದೆ. ತಡೆಗೋಡೆ ನಿರ್ಮಿಸುವುದಕ್ಕಾಗಿ ಭಾರೀ ಪ್ರಮಾಣದ ಹೊಂಡವನ್ನು ಮಾಡಿದ್ದರಿಂದ ಇದ್ದ ರಸ್ತೆಯೂ ಬಿರುಕುಬಿಟ್ಟು ಅದು ಹಂತ ಹಂತವಾಗಿ ಕುಸಿದು ಹೋಗುತ್ತಿದೆ. ಒಂದಿಷ್ಟು ಕುಸಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಮಗಾರಿ ಜವಾಬ್ದಾರಿ ಹೊತ್ತಿರುವ ನಿರ್ಮಿತಿಕೇಂದ್ರವೂ ಸದ್ಯ ಕುಸಿಯುತ್ತಿದ್ದ ಜಾಗದ ಮಣ್ಣಿಗೆ ಟಾರ್ಪಲ್ ಹೊದಿಸಿದೆ. ಆದರೆ ಒಮ್ಮೆ ಟಾರ್ಪಲ್ ಸಮೇತವಾಗಿ ಕುಸಿದು ಬಿದ್ದಿದೆ. 

ಜೈಲಿನಲ್ಲಿ ದರ್ಶನ್ ಹಾಗೂ ವಿನೋದ್ ರಾಜ್ ಭೇಟಿ: ಬಾಚಿ ಅಪ್ಪಿಕೊಂಡು ಪರಸ್ಪರ ಕಣ್ಣೀರಿಟ್ಟರು!

ಹೀಗಾಗಿ ಕೆಲಸವನ್ನು ಸ್ಥಗಿತಗೊಳಿಸಿರುವ ನಿರ್ಮಿತಿ ಕೇಂದ್ರವು ರಸ್ತೆ ನೆನೆದು ಕುಸಿಯದಂತೆ ಟಾರ್ಪಲ್ ಹೊದಿಸಿದೆ. ಜೊತೆಗೆ ಸಣ್ಣ ವಾಹನ ಓಡಾಡಿದರೂ ರಸ್ತೆ ಕುಸಿದು ಹೋಗಬಹುದೆಂಬ ಆತಂಕದಿಂದ ಇಡೀ ರಸ್ತೆಗೆ ಬ್ಯಾರಿಕೆಡ್ ಹಾಕಿ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಇದರಿಂದಾಗಿ ಮಡಿಕೇರಿ ಅರ್ಧಭಾಗದ ಜನರು ಓಡಾಡುವುದಕ್ಕೆ ಸಂಕಷ್ಟ ಎದುರಾಗಿದೆ. ಜೊತೆಗೆ ಇದೇ ರಸ್ತೆಯಲ್ಲೇ ಓಡಾಡಬೇಕಾಗಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಐಟಿಐ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಇದೀಗ ಓಡಾಡುವುದಕ್ಕೂ ತೀವ್ರ ತೊಂದರೆ ಅನುಭವಿಸುವಂತೆ ಆಗಿದೆ. 

ಜೊತೆಗೆ ಮೀನುಗಾರಿಕೆ ಇಲಾಖೆ ಕಚೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ನ್ಯಾಯಾಲಯ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲವೂ ಈ ಭಾಗದಲ್ಲೇ ಇದ್ದು ಈ ಕಚೇರಿಗಳಿಗೆ ಓಡಾಡಬೇಕಾದರೆ ಸುತ್ತಿಬಳಸಿ ಓಡಾಡಬೇಕಾಗಿದೆ. ವಾಹನಗಳು ಇರುವವರೇನೋ ಹೇಗೆ ಐದು ನಿಮಿಷ ಸುತ್ತಿಬಳಸಿ ಹೋದರೂ ನಡೆದುಕೊಂಡು ಹೋಗುವವರ ಪರಿಸ್ಥಿತಿ ಅಂತು ಹೇಳತೀರದಂತೆ ಆಗಿದೆ. ಇನ್ನು ನಿಸರ್ಗ ಬಡಾವಣೆಗೆ ಹೋಗಲು ಕೇವಲ ನಾಲ್ಕೈದು ಮೀಟರ್ ಸಾಗಿದ್ದರೆ ಸಾಕಾಗಿತ್ತು. 

ನಮ್ಮ ಕಲಾವಿದನ ಮಗ ದರ್ಶನ್‌ನ ಬಿಟ್ಟುಕೊಡಬೇಡ ಅಂದಿದ್ರು ನನ್ನಮ್ಮ: ನಟ ವಿನೋದ್‌ ರಾಜ್

ಆದರೆ ಈಗ ನಗರಸಭೆ ಎಡವಟ್ಟಿನಿಂದ ರಸ್ತೆ ಕುಸಿಯುತ್ತಿರುವುದಕ್ಕೆ ಬಂದ್ ಆಗಿ ಅರ್ಧ ಕಿಲೋಮೀಟರ್ ಸುತ್ತಿ ಬಳಸಿ ಬರಬೇಕಾದ ದುಃಸ್ಥಿತಿ ಎದುರಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಾಳಿಬೀಡು ಗ್ರಾಮಕ್ಕೆ ಹೋಗುವ ಪ್ರಮುಖ ರಸ್ತೆ ಇದಾಗಿತ್ತು. ರಸ್ತೆ ಕುಸಿದಿರುವುದರಿಂದ ಆ ಗ್ರಾಮಕ್ಕೂ ಹೋಗುವುದಕ್ಕೂ ಜನರು ತೀವ್ರ ಸಮಸ್ಯೆ ಎದುರಿಸುವಂತೆ ಆಗಿದೆ. ಈ ಕುರಿತು ಮಾತನಾಡಿರುವ ನಗರಸಭೆ ಸದಸ್ಯ ಅರುಣ್ ಕುಮಾರ್ ರಸ್ತೆ ಕುಸಿಯುತ್ತಿದ್ದ ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ ನಿರ್ಮಿಸುತ್ತಿದ್ದದ್ದು ಒಳ್ಳೆಯ ಕೆಲಸ. ಆದರೆ ಮಳೆಗಾಲದಲ್ಲಿ ಎಲ್ಲೆಡೆ ಬರೆ, ಭೂಕುಸಿತ ಆಗುವ ದುಃಸ್ಥಿತಿ ಇದೆ. ಇಷ್ಟೆಲ್ಲಾ ಆಗುವ ಸ್ಥಿತಿ ಇದ್ದರೂ ಕಾಮಗಾರಿ ಆರಂಭಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

click me!