2021ರಿಂದ ಹಿಡಿದಿದ್ದ ಗ್ರಹಣ ಬಿಡುಗಡೆ, ಪೀಣ್ಯ ಫ್ಲೈ ಓವರ್‌ನಲ್ಲಿ 6 ದಿನ ಎಲ್ಲ ವಾಹನಗಳಿಗೂ ಮುಕ್ತ ಸಂಚಾರ

Published : Jul 22, 2024, 05:52 PM IST
2021ರಿಂದ ಹಿಡಿದಿದ್ದ ಗ್ರಹಣ ಬಿಡುಗಡೆ, ಪೀಣ್ಯ ಫ್ಲೈ ಓವರ್‌ನಲ್ಲಿ 6 ದಿನ ಎಲ್ಲ ವಾಹನಗಳಿಗೂ ಮುಕ್ತ ಸಂಚಾರ

ಸಾರಾಂಶ

ತುಮಕೂರು ರಸ್ತೆಯ ಪೀಣ್ಯ ಫ್ಲೈ ಓವರಗೆ ಕಳೆದ ಎರಡೂವರೆ ವರ್ಷದಿಂದ ಹಿಡಿದಿದ್ದ ಗ್ರಹಣಕ್ಕೆ ಶೀಘ್ರವೇ ಬಿಡುಗಡೆ ಸಿಗಲಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜು.22): ತುಮಕೂರು ರಸ್ತೆಯ ಪೀಣ್ಯ ಫ್ಲೈ ಓವರಗೆ ಕಳೆದ ಎರಡೂವರೆ ವರ್ಷದಿಂದ ಹಿಡಿದಿದ್ದ ಗ್ರಹಣಕ್ಕೆ ಶೀಘ್ರವೇ ಬಿಡುಗಡೆ ಸಿಗಲಿದೆ. ವಾರದಲ್ಲಿ 6 ದಿನ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತಗೊಳಿಸಲು ಸಿದ್ಧತೆ ನಡೆದಿದೆ.

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಿಂದ ಪಾರ್ಲೆಜಿ ಫ್ಯಾಕ್ಟರಿವರೆಗೆ 5 ಕಿ.ಮೀ. ಉದ್ದವಿರುವ ಈ ಮೇಲ್ಸೇತುವೆಯಲ್ಲಿ 120 ಪಿಲ್ಲರ್‌ಗಳಿವೆ. 2021ರ ಡಿಸೆಂಬರ್‌ನಲ್ಲಿ ಮೇಲ್ಸೇತುವೆಯಲ್ಲಿ ದೋಷ ಕಂಡುಬಂದಿದ್ದರಿಂದ ಎರಡು ಪಿಲ್ಲರ್‌ಗಳ ನಡುವೆ ಹೊಸದಾಗಿ ತಲಾ ಎರಡರಂತೆ 240 ಕೇಬಲ್‌ಗಳನ್ನು ಅಳವಡಿಸಲಾಗಿತ್ತು. ಎರಡನೇ ಹಂತದಲ್ಲಿ, ಎರಡು ಪಿಲ್ಲರ್‌ ನಡುವೆ ತಲಾ 10ರಂತೆ 1200 ಕೇಬಲ್‌ ಬದಲಾಯಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಈಗಾಗಲೇ 300 ಹೊಸ ಕೇಬಲ್‌ ಅಳವಡಿಸಲಾಗಿದೆ.

ಬೆಂಗಳೂರಿನ ವೀಕೆಂಡ್‌ ಒಂಟಿತನ ಕಳೆಯಲು ಆಟೋ ಡ್ರೈವರ್‌ ಆದ ಟೆಕ್ಕಿ!

ಎರಡ್ಮೂರು ತಂಡಗಳು ಕೇಬಲ್‌ ಬದಲಾವಣೆಯ ಕಾರ್ಯದಲ್ಲಿ ಮಗ್ನವಾಗಿದ್ದು, ಕೇಬಲ್‌ ಅಳವಡಿಕೆಯ ಬಳಿಕ ಸಿಮೆಂಟ್‌ ಹಾಕಿ ಭದ್ರಪಡಿಸಲು ಕಾಲಾವಕಾಶ ಬೇಕಿದೆ. ಆದ್ದರಿಂದ ವಾರದಲ್ಲಿ 6 ದಿವಸ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೂ ಮೇಲ್ಸೇತುವೆ ಮುಕ್ತಗೊಳಿಸಿ, ಒಂದು ದಿವಸ ಮಾತ್ರ ಎಲ್ಲ ಬಗೆಯ ವಾಹನಕ್ಕೂ ನಿರ್ಬಂಧ ವಿಧಿಸಬೇಕು ಎಂದು ಇತ್ತೀಚೆಗೆ ನಡೆದ ತಜ್ಞರ ಸಮಿತಿ ಸಭೆ ಅಭಿಪ್ರಾಯಪಟ್ಟಿದೆ.

ಇನ್ನೂ ಒಂದು ವರ್ಷ ಇದೇ ಪರಿಸ್ಥಿತಿ?: ತಜ್ಞರ ಸಮಿತಿಯ ಅಭಿಪ್ರಾಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ದವರು ಸಂಚಾರ ಪೊಲೀಸರಿಗೆ ರವಾನಿಸಿದ್ದಾರೆ. ಇದರಂತೆ ಸಂಚಾರ ಪೊಲೀಸರು ವಾರದಲ್ಲಿ 6 ದಿವಸ ಎಲ್ಲ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಅನುಮತಿ ನೀಡಲಿದ್ದಾರೆ. ಇನ್ನುಳಿದ 900 ಕೇಬಲ್‌ ಬದಲಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೂ ಇದೇ ಪರಿಸ್ಥಿತಿ ಮುಂದುವರೆಯಬಹುದು ಎಂದು ಮೂಲಗಳು ತಿಳಿಸಿವೆ.

ಗ್ಯಾಸ್‌ ಗೀಸರ್‌ ವಿಷಾನಿಲ ಸೋರಿಕೆ, ಬಾತ್‌ ರೂಂನಲ್ಲಿ ಉಸಿರು ಕಟ್ಟಿ ತಾಯಿ-ಮಗ ಸಾವು!

ಫ್ಲೈ ಓವರ್‌ನ 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103ನೇ ಪಿಲ್ಲರ್‌ ನಡುವಿನ 3 ಕೇಬಲ್‌ ಬಾಗಿದ್ದರಿಂದ 2021ರ ಡಿಸೆಂಬರ್‌ 25ರಿಂದ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಎನ್‌ಎಚ್‌ಎಐ ನಿಷೇಧಿಸಿತ್ತು. ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ತಜ್ಞರು ಮೇಲ್ಸೇತುವೆ ಪರಿಶೀಲಿಸಿ, ‘ಭಾರೀ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸಿದ್ದರಿಂದಲೇ ಕೇಬಲ್‌ಗಳು ಬಾಗಿವೆ’ ಎಂದು ವರದಿ ನೀಡಿದ್ದರು.

2022 ರ ಫೆಬ್ರವರಿ 16ರಿಂದ ಲಘು ವಾಹನಗಳಿಗೆ ಮಾತ್ರ ಮೇಲ್ಸೇತುವೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗಿತ್ತು. ಪ್ರಸಕ್ತ ಹಗಲಿನಲ್ಲಿ ಮಾತ್ರ ಲಘು ವಾಹನಗಳು ಸಂಚರಿಸಬಹುದಾಗಿದ್ದು, ರಾತ್ರಿ ಮೇಲ್ಸೇತುವೆಯನ್ನು ಬಂದ್‌ ಮಾಡಲಾಗುತ್ತಿದೆ.

ವೇಗದ ಚಾಲನೆಗೆ ಪತ್ತೆಗೆ ಕ್ಯಾಮೆರಾ: ಭಾರೀ ವಾಹನಗಳು ಮೇಲ್ಸೇತುವೆ ಮೇಲೆ ವೇಗವಾಗಿ ಸಂಚರಿಸುವುದನ್ನು ತಡೆಗಟ್ಟಲು ಇಂಟರ್‌ಸೆಪ್ಟ್‌ ಕ್ಯಾಮೆರಾ ಅಳವಡಿಸಬೇಕು ಎಂದು ತಜ್ಞರ ಸಮಿತಿ ಸಲಹೆ ನೀಡಿದೆ. ಇನ್ನು ಮುಂದೆ ಭಾರೀ ವಾಹನಗಳು ಮೇಲ್ಸೇತುವೆ ಮೇಲೆ ವೇಗವಾಗಿ ಸಂಚರಿಸಿದರೆ ಇದನ್ನು ಕ್ಯಾಮೆರಾಗಳು ಸೆರೆ ಹಿಡಿಯಲಿದ್ದು ದಂಡ ಪಾವತಿಸಬೇಕಾಗುತ್ತದೆ. ತಜ್ಞರ ಸಮಿತಿಯ ಸಲಹೆಯ ಬಗ್ಗೆ ಎನ್‌ಎಚ್ಎಐ ಅಧಿಕಾರಿಗಳು ಸಂಚಾರ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇಲ್ಲಿಯವರೆಗೂ ಮೇಲ್ಸೇತುವೆ ಮೇಲೆ ಕ್ಯಾಮೆರಾ ಅಳವಡಿಸಿರಲಿಲ್ಲ. ಹೊಸದಾಗಿ ಕ್ಯಾಮೆರಾ ಅಳವಡಿಕೆ ಮಾಡಬೇಕಿರುವುದರಿಂದ ಇದಕ್ಕೆ ಕೆಲ ದಿನಗಳಾಗಲಿದ್ದು ಬಳಿಕವಷ್ಟೇ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ವಾರದಲ್ಲಿ ಆರು ದಿನ ಮೇಲ್ಸೇತುವೆ ಮುಕ್ತವಾಗಲಿದೆ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ