
ಸಾಗರ: ಮುಂದಿನ ವರ್ಷದಿಂದ ಶಿವಮೊಗ್ಗ, ಹೊಸನಗರ ಮಾದರಿಯಲ್ಲಿ ಸಾಗರದಲ್ಲಿಯೂ ದಸರಾ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಮ್ಮ ಆಶಯ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಅವರಣದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಬನ್ನಿ ಮುಡಿಯುವ ಶಾಸ್ತ್ರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಸರಾವನ್ನು ಅರ್ಥಪೂರ್ಣವಾಗಿ ಅಚರಿಸಲು ವಿವಿಧ ಸಂಘಸಂಸ್ಥೆಗಳ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ. ಸಾಗರ ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ತನ್ನದೆ ಸ್ಥಾನ ಹೊಂದಿದೆ. ಇಲ್ಲಿ ದಸರಾ ಉತ್ಸವ ನಡೆಸಬೇಕು ಎನ್ನುವುದು ನನ್ನ ಇಚ್ಛೆಯಾಗಿದೆ ಎಂದು ಹೇಳಿದರು.
ಸೀಮೋಲ್ಲಂಘನೆ ಶಾಸ್ರ್ರ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ವೀರೇಶಕುಮಾರ್, ಪ್ರತಿವರ್ಷ ಸಾಗರದಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದಿಂದ ಬನ್ನಿ ಮುಡಿಯುವ ಶಾಸ್ತ್ರ ಮುಗಿದ ನಂತರ ಮಾಜಿ ಶಾಸಕರು, ಹಿರಿಯರು, ಗಣ್ಯರ ಮನೆಗೆ ತೆರಳಿ ಬನ್ನಿ ನೀಡಿ ಶುಭಾಶಯ ಕೋರುವ ಹೊಸ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ತಹಶೀಲ್ದಾರ್ ಡಾ.ಪ್ರತಿಭಾ ಜಮಾಬಂಧಿಗೆ ಸಹಿ ಹಾಕಿದರು. ಮಾರಿಕಾಂಬಾ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾಗರಾಜ್, ಟಿ.ವಿ.ಪಾಂಡುರಂಗ, ಶ್ರೀನಿವಾಸ್ ಮೇಸ್ತ್ರೀ, ಎಂ.ಡಿ.ಆನಂದ್, ಸುಂದರ ಸಿಂಗ್, ಕೆ.ಎನ್. ನಾಗೇಂದ್ರ, ಐ.ವಿ. ಹೆಗಡೆ, ಗಣಪತಿ ಮಂಡಗಳಲೆ, ಗಿರೀಶ್ ಕೋವಿ, ಗಣಪತಿ ದೇವಸ್ಥಾನದ ಅರ್ಚಕರಾದ ನವೀನ್ ಜೋಯ್ಸ್ ಇನ್ನಿತರರು ಹಾಜರಿದ್ದರು.
ಪ್ರತಿವರ್ಷ ಬನ್ನಿ ಮುಡಿಯುವ ಶಾಸ್ತ್ರವನ್ನು ತಹಶೀಲ್ದಾರ್ ನೆರವೇರಿಸಿಕೊಂಡು ಬರುವುದು ರೂಢಿಯಾಗಿತ್ತು. ಆದರೆ ಈ ವರ್ಷ ಉಪವಿಭಾಗಾಧಿಕಾರಿ ಸೀಮೋಲ್ಲಂಘನೆ ನೆರವೇರಿಸಿದ್ದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಡಾ.ಪ್ರತಿಭಾ ಮಹಿಳೆ ಎನ್ನುವ ಕಾರಣಕ್ಕೆ ಅವರಿಂದ ಸೀಮೋಲ್ಲಂಘನೆ ಶಾಸ್ತ್ರ ಮಾಡಿಸಬಾರದು ಎನ್ನುವ ನಿಯಮವಿದೆ ಎಂದು ಕೆಲವರು ಅಭಿಪ್ರಾಯಿಸಿದ್ದರೂ, ಕಳೆದ ವರ್ಷ ಹೊಸನಗರದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್ ಬಾಳೆಮರ ಕಡಿದು ಸೀಮೋಲ್ಲಂಘನೆ ಶಾಸ್ತ್ರ ಮಾಡಿದ್ದರು. ಆದರೆ ಸಾಗರದಲ್ಲಿ ತಹಶೀಲ್ದಾರ್ ಅವರು ಜಮಾಬಂದಿ ನಡೆಸಿದರೂ ಬನ್ನಿ ಮುಡಿಯುವ ಶಾಸ್ತ್ರದಲ್ಲಿ ಪಾಲ್ಗೊಳ್ಳದೆ ಇರುವ ಬಗ್ಗೆ ಸ್ಥಳೀಯವಾಗಿ ವ್ಯಾಪಕ ಚರ್ಚೆ ನಡೆಯಿತು. ತಹಶೀಲ್ದಾರ್ ಡಾ.ಪ್ರತಿಭಾ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಜನರ ನಡುವೆ ನಿಂತು ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.