ಎಸ್ಐಆರ್‌ಗೆ ಕಾಂಗ್ರೆಸ್ ಆಕ್ಷೇಪ ಅನುಮಾನಕ್ಕೆಡೆ ಮಾಡಿದೆ: ಮಾಜಿ ಸಚಿವ ಸಾ.ರಾ.ಮಹೇಶ್

Published : May 27, 2026, 12:28 AM IST
sa ra mahesh

ಸಾರಾಂಶ

ಎಸ್ಐಆರ್‌ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಕಾಂಗ್ರೆಸ್ ನವರು 2023ರ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು. 

ಮೈಸೂರು (ಮೇ.27): ಎಸ್ಐಆರ್‌ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಕಾಂಗ್ರೆಸ್ ನವರು 2023ರ ಚುನಾವಣೆಯಲ್ಲಿ ಯಾವ ರೀತಿ ಗೆದ್ದರು ಎಂಬ ಅನುಮಾನ ಕಾಡುತ್ತಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ ನವರು ಯಾಕೆ ಆತಂಕಗೊಂಡಿದ್ದಾರೆ. ಕೆ.ಆರ್. ನಗರ, ಚಾಮರಾಜ, ನರಸಿಂಹರಾಜ ಸೇರಿದಂತೆ ವಿವಿಧ ಕ್ಷೇತ್ರಗಳ ಮತದಾರರ ಪಟ್ಟಿ ಸಿಗುತ್ತಿಲ್ಲ ಎಂದು ಆಡಳಿತ ಪಕ್ಷದವರೇ ಗಾಬರಿ ಬೀಳುತ್ತಿದ್ದಾರೆ.

ಹಾಗಿದ್ದರೆ 2023ರ ಚುನಾವಣೆ ಪಾರದರ್ಶಕವಾಗಿ ನಡೆದಿರಲಿಲ್ಲವೇ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು. ಕೆ.ಆರ್. ನಗರದಲ್ಲಿ 18800 ಮತದಾರರ ವಿಳಾಸವೇ ಸಿಗುತ್ತಿಲ್ಲ. ಈಗ ಅವರೆಲ್ಲಾ ಎಲ್ಲಿಗೆ ಹೋದರು? ನಮಗೆ ಕಳೆದ ಚುನಾವಣೆ ಸರಿಯಾಗಿ ನಡೆದಿಲ್ಲ ಎಂಬ ಅನುಮಾನ ಕಾಡುತ್ತಿದೆ. ಅಷ್ಟಕ್ಕೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವ ಬಿಎಲ್‌ಒ, ತಹಸೀಲ್ದಾರ್, ಎಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ನಿಮ್ಮದೇ ಸರ್ಕಾರದ ನೌಕರರು. ನಿಮಗೆ ನಿಮ್ಮದೇ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ? ಸತ್ತವರು, ಮದುವೆಯಾಗಿ ಹೋದವರ ಹೆಸರನ್ನು ಪಟ್ಟಿಯಿಂದ ತೆಗೆಯಲು ಹೊರಟರೆ ನಿಮಗೇಕೆ ಗಾಬರಿ? ಅರ್ಹ ಮತದಾರರಿದ್ದರೆ ಪಟ್ಟಿ ಪ್ರಕಟವಾದ ಮೇಲೂ ಹೆಸರು ಸೇರಿಸಲು ಅವಕಾಶವಿದೆ ಎಂದರು.

ದ್ವೇಷ ರಾಜಕಾರಣ

ಕುಮಾರಸ್ವಾಮಿಯವರ ಕೇತಗಾನಹಳ್ಳಿ ತೋಟದ 50 ಎಕರೆ ಜಮೀನನ್ನು 40 ವರ್ಷಗಳ ಹಿಂದೆಯೇ ಕಾನೂನುಬದ್ಧವಾಗಿ ಖರೀದಿಸಿದ್ದಾರೆ. ಅದಕ್ಕೆ ಸ್ಪಷ್ಟ ದಾಖಲೆಗಳಿವೆ. ಯಾರೋ ಪುಣ್ಯಾತ್ಮ 14 ಎಕರೆ ಒತ್ತುವರಿ ಎಂದು ಸುಳ್ಳು ಹೇಳುತ್ತಿದ್ದಾನೆ. ರಾಜ್ಯದ ಇತಿಹಾಸದಲ್ಲಿ ಎಷ್ಟೋ ರಾಜಕಾರಣಿಗಳ ಭೂ ಒತ್ತುವರಿ ಪ್ರಕರಣಗಳು ಚರ್ಚೆಗೆ ಬಂದಿವೆ. ಆದರೆ, ಒಂದೇ ಒಂದು ಪ್ರಕರಣವನ್ನಾದರೂ ಎಸ್‌ಐಟಿಗೆ ಕೊಟ್ಟಿದ್ದೀರಾ?

ದೇವೇಗೌಡರ ಕುಟುಂಬ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆ ಇಡಬೇಕು ಎನ್ನುವ ಏಕೈಕ ಉದ್ದೇಶದಿಂದಲೇ ಇದನ್ನು ಎಸ್‌ಐಟಿಗೆ ವಹಿಸಲಾಗಿದೆ. ಇದು ನೂರಕ್ಕೆ ನೂರು ದ್ವೇಷದ ರಾಜಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕುಮಾರಸ್ವಾಮಿಯವರ ಆಸ್ತಿ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಆಲೂಗೆಡ್ಡೆ ಬೆಳೆದು ಇಷ್ಟೊಂದು ಅಸ್ತಿ ಮಾಡಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್ ನವರು ಭತ್ತ, ರಾಗಿ, ಕಡೆಲೆಕಾಯಿ ಬೆಳೆದು ಆಸ್ತಿ ಸಂಪಾದಿಸಿದ್ದಾರೆಯೇ? ದೊಡ್ಡ ದೊಡ್ಡ ಬಂಗ್ಲೆ ಕಟ್ಟಲು ದುಡ್ಡು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.

ಪಕ್ಷ ಸಂಘಟನೆಯಲ್ಲಿ ತೊಡಗಿರುವ ನಿಖಿಲ್ ಕುಮಾರಸ್ವಾಮಿ ನಿಮ್ಮನ್ನು ಪ್ರಶ್ನೆ ಮಾಡಿದರೆ ಇಷ್ಟೊಂದು ಬೇಸರ ಮಾಡಿಕೊಳ್ಳುತ್ತಿರುವುದೇಕೆ? ಅವರು ಮಂಡ್ಯದಲ್ಲಿ ಐದೂವರೆ ಲಕ್ಷ ಮತ ಪಡೆದಿದ್ದಾರೆ. ಇಂದು ಟೀಕೆ ಮಾಡುತ್ತಿರುವ ಕಾಂಗ್ರೆಸ್‌ ನ ಯಾವ ನಾಯಕರೂ ಯಾವುದೇ ಚುನಾವಣೆಯಲ್ಲೂ ವೈಯಕ್ತಿಕವಾಗಿ ಅಷ್ಟೊಂದು ಮತ ಪಡೆದಿಲ್ಲ. ಜನರ ಬೆಂಬಲ ಇಲ್ಲದವರು ನಿಖಿಲ್ ಅವರನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅವರು ತಿರುಗೇಟು ನೀಡಿದರು.

ರಾಜಕೀಯದಲ್ಲಿ ಟೀಕೆ- ಟಿಪ್ಪಣಿಗಳು ಸಹಜ. ಆದರೆ, ಸಾರ್ವಜನಿಕ ಜೀವನದಲ್ಲಿ ಭಾಷೆಯ ಮೇಲೆ ಇತಿಮಿತಿ ಇರಲಿ. ಇನ್ನೂ ಎರಡು ವರ್ಷ ನಿಮ್ಮದೇ ಸರ್ಕಾರ ಇರಬಹುದು‌. ಜನರೇ ಮುಂದಿನ ಚುನಾವಣೆಯಲ್ಲಿ ಸತ್ಯ ಯಾವುದು, ಅಸತ್ಯ ಯಾವುದು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದರು.

PREV
Read more Articles on
click me!

Recommended Stories

ನದಿಗಳಿಗೆ ತ್ಯಾಜ್ಯ ನೀರು ಬಿಟ್ಟರೆ ಕ್ರಿಮಿನಲ್ ಕೇಸ್: ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ
ಬೆಂಗಳೂರಿನಲ್ಲಿ ಎಬೋಲಾ ಆತಂಕ: ಉಗಾಂಡಾದಿಂದ ಬಂದ ಮಹಿಳೆ ಆಸ್ಪತ್ರೆಗೆ ಶಿಫ್ಟ್, ಏನಿದು ಪ್ರಕರಣ?