ಬಸ್ ಇಲ್ಲದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಬಸ್ ಪಾಸ್ ನೀಡಲು ಕೆಎಸ್‌ಆರ್‌ಟಿಸಿ ಇಲ್ಲಸಲ್ಲದ ಕಾನೂನುಗಳು ಈ ಬಾರಿ ತಂದಿರುವುದು. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿದೆ.
ಶಿವಮೊಗ್ಗ (ಫೆ.06): ಶಾಲಾ- ಕಾಲೇಜುಗಳು ಆರಂಭಗೊಂಡಿದ್ದರೂ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳ ಬಸ್ ಸೌಕರ್ಯ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಬಸ್ ಇಲ್ಲದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಬಸ್ ಪಾಸ್ ನೀಡಲು ಕೆಎಸ್‌ಆರ್‌ಟಿಸಿ ಇಲ್ಲಸಲ್ಲದ ಕಾನೂನುಗಳು ಈ ಬಾರಿ ತಂದಿರುವುದು.
ಈ ಕಾನೂನು ಕಟ್ಟಳೆಗಳನ್ನು ಪೂರೈಸಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳು ತಮ್ಮ ಓದಿಗೆ ಗುಡ್ ಬೈ ಹೇಳಬೇಕಾದ ಸ್ಥಿತಿ ಎದುರಾಗಿದೆ. ಆದರೆ, ಈ ಬಗ್ಗೆ ಸರ್ಕಾರವಾಗಲೀ, ಸಂಬಂಧಿಸಿದ ಇಲಾಖೆಯಾಗಲೀ ಗಮನವನ್ನೇ ಹರಿಸುತ್ತಿಲ್ಲ.
ಸಾಕಷ್ಟುವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಅವರಲ್ಲಿ ಸಾಕಷ್ಟುಮಂದಿ ಕುಗ್ರಾಮಗಳಲ್ಲಿ ಇರುವವರು. ಇಲ್ಲಿಗೆ ಯಾವುದೇ ಸಂಪರ್ಕ ಸಾಧನವೂ ಇಲ್ಲ. ಹೀಗಾಗಿ, ಕಾಲೇಜು ವಿದ್ಯಾಭ್ಯಾಸಕ್ಕಾಗಿ ಈ ವಿದ್ಯಾರ್ಥಿಗಳು ಬಸ್ ಮಾರ್ಗದ ಸಮೀಪದಲ್ಲಿ ಇರುವ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಬಸ್ ಪಾಸ್‌ಗೆ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಅರ್ಜಿ ಸಲ್ಲಿಸಿದರೆ, ವಾಸಸ್ಥಳ ದೃಢೀಕರ ಪತ್ರ ಸೇರಿದಂತೆ ಅನೇಕ ದಾಖಲೆ ತನ್ನಿ ಎನ್ನುತ್ತಾರೆ. ಕಾಲೇಜು ನೀಡುವ ದಾಖಲೆಯನ್ನು ಮಾತ್ರ ಇವರು ಒಪ್ಪುತ್ತಿಲ್ಲ. ಆದರೆ, ತಮ್ಮ ಊರಿನ ಬದಲು ಬೇರೆ ಕಡೆಯಿಂದ ಸಂಚರಿಸುವ ಅನಿವಾರ್ಯತೆಯಲ್ಲಿ ಇರುವ ವಿದ್ಯಾರ್ಥಿಗಳು ವಾಸಸ್ಥಳ ದೃಢೀಕರಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಾರಿಗೆ ಇಲಾಖೆ ಪಾಸ್ ನೀಡುತ್ತಿಲ್ಲ. ಪಾಸ್ ಇಲ್ಲದ ಕಾರಣ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣ ಡೋಲಾಯಮಾನವಾಗಿದೆ.
ಹಂದಿ ಕೊಲ್ಲಲು ಅನುಮತಿ ನೀಡಿ: ಶಾಸಕ ಹಾಲಪ್ಪ ..
ಇದು ಒಂದು ರೂಪದಲ್ಲಿನ ಸಮಸ್ಯೆಯಾದರೆ, ಇನ್ನು ಅನೇಕ ಕಡೆ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿಯೇ ಇಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಮಸ್ಯೆಯಾಗುತ್ತಿದೆ. ಅದರಲ್ಲಿಯೂ ನಿಗದಿತ ವೇಳೆಯಲ್ಲಿ ಕಾಲೇಜಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕಾಲೇಜು ಆರಂಭಿಸಿರುವ ಸರ್ಕಾರ ಇಂತಹ ಮೂಲಭೂತ ವ್ಯವಸ್ಥೆಯ ಕುರಿತು ಕೂಡ ಗಮನಹರಿಸಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘದ ಹೊಳಲೂರು ಗ್ರಾಮ ಘಟಕದ ಅಧ್ಯಕ್ಷರಾದ ಪಿ.ಎನ್. ಮೈಲಾರಪ್ಪ.
ಸರ್ಕಾರ ಈ ರೀತಿಯ ಇಲ್ಲ ಸಲ್ಲದ ಕಾನೂನು, ನಿಯಮಗಳನ್ನು ಇದ್ದಕ್ಕಿದ್ದಂತೆ ಹೇರಬಾರದು. ವಾಸ್ತವ ಸ್ಥಿತಿಯನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಕಾಲೇಜು ವಿದ್ಯಾರ್ಥಿ ತನಗೆ ನೀಡುವ ಬಸ್‌ಪಾಸ್ ಅನ್ನು ದುರ್ಬಳಕೆ ಮಾಡಿಕೊಡುವುದಿಲ್ಲ. ಕಾಲೇಜಿನವರು ನೀಡಿದ ದಾಖಲೆ ಆಧರಿಸಿ ಪಾಸ್ ನೀಡಬೇಕು. ಎಲ್ಲ ಕಡೆಗೂ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೈಲಾರಪ್ಪ ಅವರು ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಆದರೂ, ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಜೊತೆಗೆ ತಕ್ಷಣವೇ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದಾರೆ.