ಪಾಳು ಬಿದ್ದ ಇಂದಿರಾ ಕ್ಯಾಂಟಿನ್ : ತೆರಿಗೆ ಹಣ ಯಾರ ಸ್ವತ್ತು?

By Kannadaprabha News  |  First Published Nov 3, 2023, 9:04 AM IST

ಮೈಸೂರಿನ ವಾರ್ಡ್ 14ರ ಅಜೀಜ್ ಸೇಠ್ ಮುಖ್ಯರಸ್ತೆಯಲ್ಲಿ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನಿಗೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.


ಮೈಸೂರು :  ಮೈಸೂರಿನ ವಾರ್ಡ್ 14ರ ಅಜೀಜ್ ಸೇಠ್ ಮುಖ್ಯರಸ್ತೆಯಲ್ಲಿ ಆರು ವರ್ಷಗಳ ಹಿಂದೆ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನಿಗೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

ಸಾರ್ವಜನಿಕ ಮಾಹಿತಿ ಪ್ರಕಾರ ಕಟ್ಟಡ ನಿರ್ಮಾಣಕ್ಕೆ 28.5 ಲಕ್ಷ ಹಾಗೂ ಆಂತರಿಕ ವಿನ್ಯಾಸಕ್ಕೆ 32.5 ಲಕ್ಷ, ಒಟ್ಟು 61 ಲಕ್ಷ ವೆಚ್ಚದಲ್ಲಿ 2018ರಲ್ಲಿ ಸಂಪೂರ್ಣಗೊಂಡ ಈ ಇಂದಿರಾ ಕ್ಯಾಟೀನ್ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದೆ. ಶಾಸಕ ತನ್ವೀರ್ ಸೇಠ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಲಕ್ಷದಿಂದ ಜನರ ತೆರಿಗೆಯ ಹಣ ಈ ರೀತಿ ಪೋಲಾಗುತ್ತಿರುವುದು ಶೋಚನೀಯ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ ತಿಳಿಸಿದ್ದಾರೆ. ಕೂಡಲೇ ಕ್ಯಾಂಟೀನ್ ಪ್ರಾರಂಭಿಸಿ ನಗರದ ಬಡ ಜನತೆ ಸಹಾಯವಾಗುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Latest Videos

undefined

ಇಂದಿರಾ ಕ್ಯಾಂಟೀನ್ಗೆ ಬೀಗ

ಬೆಂಗಳೂರು(ಅ.13):  ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ಮರುಚಾಲನೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಣೆ ಕೊರತೆಯಿಂದಾಗಿ 23 ಕ್ಯಾಂಟೀನ್‌ಗಳಿಗೆ ಬೀಗಮುದ್ರೆ ಹಾಕಲಾಗಿದೆ.

ದಿನದಿಂದ ದಿನಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳ ಬಗ್ಗೆ ನಿರಾಸಕ್ತಿ ಹೆಚ್ಚಾಗುತ್ತಿದೆ. ನಿರ್ವಹಣೆ ಕೊರತೆ ಹಾಗೂ ಆಹಾರ ಪೂರೈಕೆದಾರರಿಗೆ ಬಿಲ್‌ ಪಾವತಿ ಸಮಸ್ಯೆಯಿಂದಾಗಿ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 175 ಶಾಶ್ವತ ಕಟ್ಟಡ ಹೊಂದಿರುವ ಇಂದಿರಾ ಕ್ಯಾಂಟೀನ್‌ಗಳು ಹಾಗೂ 24 ಮೊಬೈಲ್‌ ಕ್ಯಾಂಟೀನ್‌ಗಳಿದ್ದವು. ಅವುಗಳಲ್ಲಿ ಸದ್ಯ 6 ಶಾಶ್ವತ ಕ್ಯಾಂಟೀನ್‌ಗಳು, 17 ಮೊಬೈಲ್‌ ಕ್ಯಾಂಟೀನ್‌ಗಳು ಸೇರಿದಂತೆ ಒಟ್ಟು 23 ಕ್ಯಾಂಟೀನ್‌ಗಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗಿದೆ.

ಹಾವೇರಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ಬಂದ್.. ಬಡವರ ಪರದಾಟ

ಕ್ಯಾಂಟೀನ್ ಸ್ಥಗಿತಕ್ಕೆ ನಾನಾ ಕಾರಣಗಳು:

ಕ್ಯಾಂಟೀನ್‌ ಆಹಾರ ಪೂರೈಕೆ ಸ್ಥಗಿತಗೊಳಿಸಿದ್ದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ನಾನಾ ಕಾರಣಗಳನ್ನು ನೀಡುತ್ತಿದ್ದಾರೆ. ಅದರಂತೆ ಕಟ್ಟಡದಲ್ಲಿ ನಡೆಯುತ್ತಿದ್ದ 6 ಕ್ಯಾಂಟೀನ್‌ ಸ್ಥಗಿತಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಕ್ಯಾಂಟೀನ್‌ನ ಕಟ್ಟಡವನ್ನು ಮೆಟ್ರೋ ಕಾಮಗಾರಿಗಾಗಿ ಒಡೆದು ಹಾಕಲಾಗಿದೆ. ಅದಾದ ನಂತರ ಅದನ್ನು ಮರುಸ್ಥಾಪನೆಗೆ ಬಿಬಿಎಂಪಿ ಅಥವಾ ಬಿಎಂಆರ್‌ಸಿಎಲ್‌ ಮುಂದಾಗಿಲ್ಲ. ಅದೇ ರೀತಿ ಹನುಮಂತನಗರ ಕ್ಯಾಂಟೀನ್‌ನಲ್ಲಿ ಆಹಾರ ಸೇವನೆಗೆ ಬರುವವರ ಸಂಖ್ಯೆ ಕಡಿಮೆಯಿದೆ ಎಂದು, ಕುಮಾರಸ್ವಾಮಿ ಲೇಔಟ್‌ ಕ್ಯಾಂಟೀನನ್ನು ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಬೇರೆ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಅದರ ಜತೆಗೆ ಪದ್ಮನಾಭನಗರ ಕ್ಯಾಂಟೀನ್‌ಗೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದ್ದು, ಕ್ಯಾಂಟೀನ್‌ ಸ್ಥಗಿತಗೊಳಿಸಲಾಗಿದೆ ಎಂಬ ಉತ್ತರ ನೀಡಲಾಗಿದೆ.

ಅಲ್ಲದೆ, 24 ಮೊಬೈಲ್‌ ಕ್ಯಾಂಟೀನ್‌ಗಳ ಪೈಕಿ ಮಲ್ಲೇಶ್ವರ ಸೇರಿದಂತೆ ಕೇವಲ 7 ಕಡೆ ಮಾತ್ರ ಮೊಬೈಲ್‌ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿವೆ. ಉಳಿದ 17 ಮೊಬೈಲ್‌ ಕ್ಯಾಂಟೀನ್‌ಗಳ ವಾಹನಗಳ ನಿರ್ವಹಣೆ ಸಮಸ್ಯೆಯಿಂದಾಗಿ ಅವುಗಳು ಸಂಚರಿಸುವುದು ಸಾಧ್ಯವಾಗದೆ ಸ್ಥಗಿತಗೊಂಡಿವೆ.

50 ಕ್ಯಾಂಟೀನ್‌ಗಳಿಗೆ ಬೇಕು ದುರಸ್ತಿ ಭಾಗ್ಯ

ಸದ್ಯ ಚಾಲ್ತಿಯಲ್ಲಿರುವ 176 ಕ್ಯಾಂಟೀನ್‌ಗಳ ಪೈಕಿ 7 ಮೊಬೈಲ್‌ ಕ್ಯಾಂಟೀನ್‌ಗಳಾಗಿವೆ. ಈ ಮೊಬೈಲ್‌ ಕ್ಯಾಂಟೀನ್‌ಗಳ ವಾಹನಗಳನ್ನು ದುರಸ್ತಿ ಮಾಡಿಸಬೇಕಿದೆ. ಅದರ ಜತೆಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ 169 ಕ್ಯಾಂಟೀನ್‌ಗಳ ಪೈಕಿ 50ಕ್ಕೂ ಹೆಚ್ಚಿನ ಕ್ಯಾಂಟೀನ್‌ಗಳು ದುರಸ್ತಿಗೆ ಒಳಗಾಗಬೇಕಿದೆ. ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ, ಕ್ಯಾಂಟೀನ್‌ ಆವರಣದಲ್ಲಿ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರ ದುರಸ್ತಿ ಕಾಮಗಾರಿಗಳು ನಡೆಯಬೇಕು. ಅದಕ್ಕೆಲ್ಲ ಅನುದಾನದ ಅವಶ್ಯಕತೆಯಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

click me!