ಸದ್ಯ ಮಸೀದಿಗೆ ಮಹಿಳೆಯರ ಪ್ರವೇಶದ ವಿರುದ್ದ ಕಲ್ಕಡ್ಕ ಭಟ್ ಆಡಿರೋ ಮಾತು ಹೊಸ ವಿವಾದ ಸೃಷ್ಟಿಸಿದೆ. ಅದರಲ್ಲೂ ಮಸೀದಿ ಪ್ರವೇಶ ಕಾರ್ಯಕ್ರಮದ ವಿರುದ್ದವೇ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರು (ಫೆ. 04): ಮಸೀದಿಗಳು ಇಸ್ಲಾಂ ಧರ್ಮದ ಪವಿತ್ರ ಧಾರ್ಮಿಕ ಕೇಂದ್ರಗಳು. ಆದರೆ ಈ ಮಸೀದಿಗಳ ಬಗ್ಗೆ ಸಮಾಜದಲ್ಲಿ ಕೆಲ ಅಪನಂಬಿಕೆಗಳಿದ್ದು, ಕೆಲವರು ಮಸೀದಿ ಮತ್ತು ಮದ್ರಸಾಗಳ ಬಗ್ಗೆ ಹರಡಿದ ಸುಳ್ಳು ಸುದ್ದಿಗಳ ಪರಿಣಾಮ ಕೆಲವರು ಮಸೀದಿಗಳನ್ನ ಅನುಮಾನದ ದೃಷ್ಟಿಯಿಂದ ನೋಡೋ ಪರಿಸ್ಥಿತಿ ಇದೆ. ಹೀಗಾಗಿ ರಾಜ್ಯಾದ್ಯಂತ ಜಮಾತ್-ಎ-ಇಸ್ಲಾಮಿ ಸಂಘಟನೆ ಮತ್ತು ಮುಸ್ಲಿಂ ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಮಸೀದಿ ದರ್ಶನ ಅನ್ನೋ ಅರ್ಥ ಪೂರ್ಣ ಕಾರ್ಯಕ್ರಮ ನಡೀತಾ ಇದೆ. ಈಗಾಗಲೇ ರಾಜ್ಯದ ಹಲವು ಮಸೀದಿಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಹಿಂದೂಗಳು ಮತ್ತು ಮುಸ್ಲೀಮೇತರರನ್ನ ಮಸೀದಿಗಳಿಗೆ ಆಹ್ವಾನಿಸಿ ಅವರಿಗೆ ಮಸೀದಿಯ ದೈನಂದಿನ ಚಟುವಟಿಕೆ, ಧಾರ್ಮಿಕ ವಿಧಿಗಳ ಬಗ್ಗೆ ವಿವರಣೆ ನೀಡೋದೇ ಈ ಕಾರ್ಯಕ್ರಮದ ಉದ್ದೇಶ.
ಅದೇ ರೀತಿ ತೀರಾ ಇತ್ತೀಚೆಗೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಬೋಳಂಗಡಿ ಮಸೀದಿ ಮತ್ತು ಉಪ್ಪಿನಂಗಡಿ ಮಸೀದಿಯಲ್ಲಿ ಈ ಮಸೀದಿ ದರ್ಶನ ಕಾರ್ಯಕ್ರಮ ನಡೆದಿತ್ತು. ಮಸೀದಿ ಆಡಳಿತ ಮಂಡಳಿ ಮನವಿ ಮೇರೆಗೆ ಸ್ಥಳೀಯ ಹಿಂದೂಗಳು, ಹಿಂದೂ ಮುಖಂಡರು ಮಸೀದಿಗೆ ತೆರಳಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕ ರುಕ್ಮಯ ಪೂಜಾರಿ ಸೇರಿ ಹಲವು ಹಿಂದೂ ಮುಖಂಡರು ಹಾಗೂ ಸ್ಥಳೀಯ ಮಹಿಳೆಯರು ಕೂಡ ಮಸೀದಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೀಗ ಈ ಕಾರ್ಯಕ್ರಮದ ವಿರುದ್ದ ಭಾರೀ ಅಪಸ್ವರ ಕೇಳಿ ಬಂದಿದೆ. ಅದರಲ್ಲೂ ಮಸೀದಿಗೆ ಹಿಂದೂ ಮಹಿಳೆಯರ ಪ್ರವೇಶದ ವಿರುದ್ಧ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಮಸೀದಿಗೆ ಮಹಿಳೆಯರ ಪ್ರವೇಶದ ವಿರುದ್ದ ಕಲ್ಕಡ್ಕ ಭಟ್ ಆಡಿರೋ ಮಾತು ಹೊಸ ವಿವಾದ ಸೃಷ್ಟಿಸಿದೆ. ಅದರಲ್ಲೂ ಮಸೀದಿ ಪ್ರವೇಶ ಕಾರ್ಯಕ್ರಮದ ವಿರುದ್ದವೇ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ. ಅಸಲಿಗೆ ರಾಜ್ಯದ ನಾನಾ ಕಡೆಗಳಲ್ಲಿ ಈ ಮಸೀದಿ ದರ್ಶನ ಕಾರ್ಯಕ್ರಮ ನಡೆದಿದ್ದರೂ ದ.ಕ ಜಿಲ್ಲೆಯಲ್ಲಿ ಈವರೆಗೆ ಎರಡು ಮಸೀದಿಗಳಲ್ಲಷ್ಡೇ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಬೋಳಂಗಡಿ ಮಸೀದಿಯಲ್ಲಿ ಮೊದಲ ಕಾರ್ಯಕ್ರಮ ನಡೆದು ಹಲವು ಹಿಂದೂಗಳು ಭಾಗವಹಿಸಿದ್ದರು. ಮತ್ತೆ ಉಪ್ಪಿನಂಗಡಿ ಮಸೀದಿ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಹೆಸರು ಹಾಕಿದ್ದ ವಿಚಾರ ವಿವಾದ ಸೃಷ್ಟಿಸಿತ್ತು. ಆದರೆ ಅವರ್ ಯಾರೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇನ್ನು ಜಮಾತ್ ಸಂಘಟನೆ ಈ ಕಾರ್ಯಕ್ರಮ ನಡೆಸುತ್ತಿದ್ದರೂ ಸದ್ಯ ಆಯಾ ಮಸೀದಿ ಆಡಳಿತವೇ ಜವಾಬ್ದಾರಿ ಹೊತ್ತು ಇದನ್ನ ನಡೆಸಿಕೊಂಡು ಬರ್ತಿದೆ. ಪರಸ್ಪರ ಒಬ್ಬರನ್ನೊಬ್ಬರು ಅರಿಯಲು ಮತ್ತು ಸೌಹಾರ್ದ ಸಮಾಜ ನಿರ್ಮಾಣ ಈ ಕಾರ್ಯಕ್ರಮದ ಉದ್ದೇಶ. ನಮಾಜ್ (ಪ್ರಾರ್ಥನೆ)ಗೆ ಕರೆಯುವ ಅಜಾನ್, ಪ್ರಾರ್ಥನೆಗೆ ಮುನ್ನ ನೆರೆವೇರಿಸುವ ವಜೂ (ಕೈ, ಕಾಲು, ಮುಖ ಸ್ವಚ್ಛಗೊಳಿಸುವ ಪ್ರಕ್ರಿಯೆ), ನಮಾಜ್ ಮಾಡುವ ಹಾಲ್, ಖುತ್ಬಾ (ಪ್ರವಚನ) ನೀಡುವ ಸ್ಥಳ, ಗ್ರಂಥಾಲಯ ಸೇರಿ ಎಲ್ಲ ಮಾಹಿತಿಯನ್ನ ಮುಸ್ಲಿಂ ಧರ್ಮಗುರುಗಳು ಆಹ್ವಾನಿತ ಪ್ರಮುಖರಿಗೆ ವಿವರಿಸಿ ಈ ಕುರಿತ ಅಪನಂಬಿಕೆ ತೊಲಗಿಸೋದು ಇಡೀ ಕಾರ್ಯಕ್ರಮದ ಉದ್ದೇಶ ಅಂತಾರೆ ಮುಸ್ಲಿಂ ಮುಖಂಡರು.
ಒಟ್ಟಾರೆ ಮುಸ್ಲಿಂ ಮುಖಂಡರ ಕಾರ್ಯ ಶ್ಲಾಘನೀಯವೇ ಆದ್ರೂ ಹಿಂದೂ ಮಹಿಳೆಯರ ಮಸೀದಿ ಪ್ರವೇಶ ವಿವಾದ ಸೃಷ್ಟಿಸಿದೆ. ಈ ಕಾರ್ಯಕ್ರಮ ನಡೆದು ತಿಂಗಳುಗಳೇ ಕಳೆದ ಬಳಿಕ ಕಲ್ಲಡ್ಕ ಪ್ರಭಾಕರ ಭಟ್ ವಿರೋಧದ ಬಳಿಕ ಕರಾವಳಿಯಲ್ಲಿ ಮತ್ತೆ ಚರ್ಚೆ ಹುಟ್ಟು ಹಾಕಿದೆ.