ಕೆಂಪೇಗೌಡ ಲೇಔಟ್‌ ಕಾಮಗಾರಿ ಪರಿಶೀಲನೆಗೆ 3ನೇ ಸಂಸ್ಥೆ ನೇಮಕ!

By Kannadaprabha News  |  First Published Feb 4, 2022, 10:19 AM IST

*ಬ್ಯೂರೋ ವೆರಿಟಾಸ್‌ ಸಂಸ್ಥೆಗೆ ಜವಾಬ್ದಾರಿ
*ಕಾಮಗಾರಿ ವಿಳಂಬ, ವೆಚ್ಚದ ಬಗ್ಗೆ ಶೀಘ್ರ ವರದಿ
*ವರದಿ ಆಧರಿಸಿ ಮುಂದಿನ ನಿರ್ಧಾರ: ಅಧ್ಯಕ್ಷ ವಿಶ್ವನಾಥ್‌
*ಗುತ್ತಿಗೆದಾರರು, ಅಧಿಕಾರಿಗಳ ಸಭೆ


ಬೆಂಗಳೂರು(ಫೆ. 04): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿ ಪ್ರಗತಿ ಮತ್ತು ಗುಣಮಟ್ಟವನ್ನು ಪರಿಶೀಲಿಸಲು ಮೂರನೇ ಸಂಸ್ಥೆಯನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಗುರುವಾರ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಂಪೇಗೌಡ ಬಡಾವಣೆ ಗುತ್ತಿಗೆದಾರರು, ಎಂಜಿನಿಯರ್‌ಗಳು ಮತ್ತು ನಿವೇಶನದಾರರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೆಂಪೇಗೌಡ ಬಡಾವಣೆ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬದಿಂದಾಗಿ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿರುವ ಬಗ್ಗೆ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಅಧ್ಯಕ್ಷರು, ಯಾವುದೇ ಕಾರಣಕ್ಕೂ ಇನ್ನು ಮುಂದೆ ನಿರ್ಮಾಣ ವೆಚ್ಚ ದುಬಾರಿಯಾಗಬಾರದು. ಕಾಮಗಾರಿಗಳು ತ್ವರಿತವಾಗಿ ಮುಗಿಯಬೇಕು ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

Tap to resize

Latest Videos

ಇದನ್ನೂ ಓದಿ: Peenya Flyover: ಕಾಮಗಾರಿ ಮುಗಿದಿದ್ದರೂ ಸಂಚಾರಕ್ಕಿಲ್ಲ ಅವಕಾಶ, ಸಾರ್ವಜನಿಕರ ಆಕ್ರೋಶ

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಯೋಜನೆ ವಿಳಂಬ, ನಿರ್ಮಾಣ ವೆಚ್ಚ ಹೆಚ್ಚುತ್ತಿರುವುದು ಮತ್ತು ಗುಣಮಟ್ಟದ ಪರಿಶೀಲಿಸಿ ವರದಿ ಸಲ್ಲಿಸಲು ಬ್ಯೂರೋ ವೆರಿಟಾಸ್‌ ಸಂಸ್ಥೆಯನ್ನು ನೇಮಕ ಮಾಡಲಾಗುತ್ತಿದೆ. ಈ ಸಂಸ್ಥೆ ಆದಷ್ಟುಬೇಗ ವರದಿ ನೀಡಲಿದ್ದು, ಅದರ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಕೆಂಪೇಗೌಡ ಬಡಾವಣೆ ಕಾಮಗಾರಿಗಳಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಇಲ್ಲ. ಗುತ್ತಿಗೆದಾರರಿಗೆ ಬಾಕಿ ಇರುವ ಹಣದಲ್ಲಿ ಸ್ವಲ್ಪ ಭಾಗವನ್ನು ಪ್ರಾಧಿಕಾರದ ಸಭೆಯ ಅನುಮೋದನೆ ಪಡೆದ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಕಾಮಗಾರಿ ಈಗಾಗಲೇ ವಿಳಂಬವಾಗಿದೆ. ಈಗ ಮತ್ತಷ್ಟುವಿಳಂಬವಾಗುವುದು ಬೇಡ. ಗುತ್ತಿಗೆದಾರರು ಕಾಮಗಾರಿಗಳನ್ನು ಮುಂದುವರಿಸಬೇಕು. ಕೂಡಲೇ ಕುಡಿಯುವ ನೀರು, ವಿದ್ಯುತ್‌ ಮತ್ತು ಇತರೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಕಾರ್ಯಪ್ರಗತಿಗಳನ್ನು ಪರಿಶೀಲಿಸಿದ ನಂತರವೇ ಗುತ್ತಿಗೆದಾರರ ಬಿಲ್‌ ಪಾವತಿ ಮಾಡಬೇಕು ಎಂದು ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಆಯುಕ್ತ ರಾಜೇಶ್‌ ಗೌಡ, ಅಭಿಯಂತರ ಸದಸ್ಯ ಡಾ. ಶಾಂತರಾಜಣ್ಣ, ಆರ್ಥಿಕ ಸದಸ್ಯ ರಾಮಪ್ರಸಾದ್‌, ವಿಶೇಷ ಭೂಸ್ವಾಧೀನಾಧಿಕಾರಿ ಡಾ. ಸೌಜನ್ಯ ಮತ್ತು ಇತರರು ಇದ್ದರು.

ಇದನ್ನೂ ಓದಿ: ಅನುಮತಿ ಇಲ್ಲದೆ ರಸ್ತೆ ಅಗೆದರೆ ಪೊಲೀಸರಿಂದಲೂ ಕ್ರಮ!

ಪ್ರತಿಭಟನೆ, ಮೆರವಣಿಗೆ ನಿಯಂತ್ರಣ ಅಧಿಕಾರ!: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಸಂಘಗಳು, ವ್ಯಕ್ತಿಗಳು ನಡೆಸುವ ಮೆರವಣಿಗೆ, ಪ್ರತಿಭಟನೆ, ಧರಣಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಬೆಂಗಳೂರು ಹೃದಯ ಭಾಗದಲ್ಲಿ ಅಸಂಘಟಿತ ರೀತಿಯಲ್ಲಿ ನಡೆಯುವ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಮೆರವಣಿಗೆಗಳು ವಾಹನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಈ ಪ್ರತಿಭಟನೆಗಳಿಂದ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸುದ್ದಿ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್‌ ಸ್ವಯಂ ಪ್ರೇರಿತ ರಿಟ್‌ ಅರ್ಜಿ ದಾಖಲಿಸಿಕೊಂಡು ಕೆಲ ನಿರ್ದೇಶನ ನೀಡಿತ್ತು.

ಅಂತೆಯೆ ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನೆ ವಿರುದ್ಧ ಯೂನಿಯನ್‌ ಆಫ್‌ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಕೆಲವು ನಿರ್ದೇಶನ ನೀಡಿತ್ತು. ಈ ನಿರ್ದೇಶನಗಳನ್ವಯ ಕಾನೂನನ್ನು ಗಮನದಲ್ಲಿರಿಸಿಕೊಂಡು ಹೈಕೋರ್ಟ್‌ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ನಿಯಂತ್ರಿಸಲು ಸಮರ್ಪಕ ಕಾರ್ಯ ವಿಧಾನವನ್ನು ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

click me!