ಹಾಲಿನ ದರ ₹8 ಏರಿಕೆ ಆದ್ರೂ ಈ ಟೀ ಅಂಗಡಿಯಲ್ಲಿ ಕೇವಲ ₹5ಗೆ ಕಾಫಿ, ಟೀ!

Kannadaprabha News   | Kannada Prabha
Published : Nov 01, 2026, 08:01 AM IST
₹5 tea coffee in Male Mahadeshwar tea stall

ಸಾರಾಂಶ

ಟಿ. ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ಬೆಲೆ ಏರಿಕೆಯ ನಡುವೆಯೂ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುತ್ತಿದ್ದಾರೆ. ಲಾಭಕ್ಕಿಂತ ಗ್ರಾಹಕರ ಸಂತೃಪ್ತಿಗೆ ಆದ್ಯತೆ ನೀಡಿರುವ ಇವರು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇವರ ಈ ಜನಪರ ಕಾಳಜಿ ಮತ್ತು ಸೇವಾ ಮನೋಭಾವ ಎಲ್ಲರ ಮೆಚ್ಚುಗೆ

ನರಸೀಪುರ(ನ.1): ಮಂಡ್ಯದ ಡಾ.ಶಂಕರೇಗೌಡರು ಕೇವಲ ಐದು ರೂಪಾಯಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದರೆ, ಟಿ. ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ಬೆಲೆ ಏರಿಕೆಯ ಬಿಸಿಯ ನಡುವೆಯೂ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಕಬ್ಬು ಕಿಚ್ಚು ಹೊತ್ತಿರುವ ಬೆನ್ನಲ್ಲೇ ರಾಜ್ಯದ ರೈತರಿಗೆ 6ನೇ ಗ್ಯಾರಂಟಿ ನೀಡಿದ ಸಿಎಂ ಡಿಕೆ ಶಿವಕುಮಾರ!

ಹಾಲಿನ ದರ ಏರಿಕೆ ನಡುವೆಯೂ ₹5 ಟೀ, ಕಾಫಿ!

ನ. 1 ರಿಂದ ಪ್ರತಿ ಲೀಟರ್ ಹಾಲಿನ ದರದಲ್ಲಿ 8 ರೂ. ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ಹಾಲಿನ ದರ ಏರಿಕೆಯ ನೇರ ಪರಿಣಾಮ ಹೋಟೆಲ್ಗಳು, ಟೀ ಅಂಗಡಿಗಳು ಹಾಗೂ ಸಣ್ಣಪುಟ್ಟ ಕ್ಯಾಂಟೀನ್ಗಳ ಮೇಲೂ ಬೀಳಲಿದ್ದು, ಈಗಾಗಲೇ ಟೀ ಮತ್ತು ಕಾಫಿ ದರಗಳು ಹೆಚ್ಚಳದಿಂದ ಗ್ರಾಹಕರ ಜೇಬು ಖಾಲಿಯಾಗುತ್ತಿದೆ. ಸಣ್ಣ ಟೀ ಅಂಗಡಿಗಳಲ್ಲಿ 10 ರೂಪಾಯಿ ಹಾಗೂ ಸಾಮಾನ್ಯ ಹೋಟೆಲ್ಗಳಲ್ಲಿ 15 ರೂಪಾಯಿ ಇರುವ ಟೀ, ಕಾಫಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಬೆಲೆ ಏರಿಕೆಯ ಈ ಹೊತ್ತಿನಲ್ಲಿ ಪಟ್ಟಣದ ನ್ಯಾಯಾಲಯದ ಸಮೀಪವಿರುವ ಪುಟ್ಟ ಗುಡಿಸಲಿನ ಮಾದರಿಯ ಕ್ಯಾಂಟೀನ್ನಲ್ಲಿ 'ಮಲೆ ಮಹದೇಶ್ವರ ಟೀ ಕಾರ್ನರ್' ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿರುವ ಚಿನ್ನಸ್ವಾಮಿ ಮಾತ್ರ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ.

ಹಾಲಿನ ದರ ಹೆಚ್ಚಾದರೂ ತಮ್ಮ ಅಂಗಡಿಯಲ್ಲಿ ಈ ಹಿಂದಿನಂತೆಯೇ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವುದನ್ನು ಮುಂದುವರಿಸುವುದಾಗಿ ನಿರ್ಧರಿಸಿದ್ದಾರೆ. ಒಂದು ಕಾಲದಲ್ಲಿ ಪಟ್ಟಣದ ಮಹದೇಶ್ವರ ಭವನ ಹೋಟೆಲ್ ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ಚಿನ್ನಸ್ವಾಮಿ, ಇದೀಗ ಸ್ವಂತವಾಗಿ ಪುಟ್ಟ ಟೀ ಅಂಗಡಿ ಆರಂಭಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಟೀ ಅಂಗಡಿ ನಡೆಸುತ್ತಿದ್ದರೂ ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ. ಬಿಡುವಿನ ವೇಳೆಯಲ್ಲಿ ಮದುವೆ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಹಾಗೂ ದೋಸೆ ಹಾಕುವ ಭಟ್ಟರಾಗಿ ದುಡಿಯುತ್ತಿದ್ದಾರೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಇಂದು 'HMT ಕನ್ನಡಿಗ’ ಸರಣಿಯಲ್ಲಿ 4 ಹೊಸ ವಾಚ್‌ ಬಿಡುಗಡೆ! ಬೆಲೆ ಎಷ್ಟು, ಖರೀಸೋದು ಹೇಗೆ?

ತೃಪ್ತಿಯಿಂದ ಟೀ, ಕಾಫಿ ಕುಡಿಯಬೇಕು

ಕಡಿಮೆ ಬೆಲೆಗೆ ಟೀ, ಕಾಫಿ ನೀಡುತ್ತಿದ್ದಾರೆ ಎಂದ ಮಾತ್ರಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಲಾಭಾಂಶ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ, ತಮ್ಮ ಅಂಗಡಿಗೆ ಬರುವ ಗ್ರಾಹಕರು ತೃಪ್ತಿಯಿಂದ ಟೀ, ಕಾಫಿ ಕುಡಿದು ಸಂತೋಷದಿಂದ ತೆರಳಬೇಕು ಎಂಬುದೇ ಅವರ ಆಶಯವಾಗಿದೆ. ಸರ್ಕಾರ ಹಾಲಿನ ಪ್ರತಿ ಲೀಟರ್ಗೆ 8 ರೂಪಾಯಿ ದರ ಹೆಚ್ಚಳ ಮಾಡಿದರೂ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹಾಕುವುದಿಲ್ಲ. ಹಿಂದಿನಂತೆಯೇ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವುದನ್ನು ಮುಂದುವರಿಸುತ್ತೇನೆ ಎಂಬುದು ಚಿನ್ನಸ್ವಾಮಿ ಅವರ ಸ್ಪಷ್ಟ ನಿಲುವು.

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಟೀ, ಕಾಫಿ ದೊರೆಯುತ್ತಿರುವುದರಿಂದ ಅವರ ಪುಟ್ಟ ಅಂಗಡಿಯ ಮುಂದೆ ಪ್ರತಿನಿತ್ಯ ಗ್ರಾಹಕರ ದಂಡೇ ಕಂಡು ಬರುತ್ತದೆ. ಲಾಭವನ್ನೇ ಮುಖ್ಯವಾಗಿಸಿಕೊಂಡಿರುವ ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಗ್ರಾಹಕರ ಹಿತ ಮತ್ತು ಸಂತೃಪ್ತಿಗೆ ಆದ್ಯತೆ ನೀಡುತ್ತಿರುವ ಚಿನ್ನಸ್ವಾಮಿ ಅವರ ನಡೆ ನಿಜಕ್ಕೂ ಶ್ಲಾಘನೀಯ. ಸಣ್ಣ ಉದ್ಯಮದಲ್ಲಿಯೂ ಮಾನವೀಯತೆ, ಸೇವಾ ಮನೋಭಾವ ಮತ್ತು ಗ್ರಾಹಕಪರ ಕಾಳಜಿಗೆ ಜಾಗವಿದೆ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ.

PREV
Read more Articles on
click me!

Recommended Stories

HMT ಇತಿಹಾಸಕ್ಕೆ ಹೊಸ ಕಳೆ; ವಾಚ್‌ಗೆ ನಾಡಿನ ಅಸ್ಮಿತೆ 'ಗಂಡಭೇರುಂಡ'ದ ಸ್ಪರ್ಶ, ಎಚ್‌ಡಿಕೆ ಸಾಥ್!
'ಯಾರೀ ಅದು ಕಮಿಷನರ್?' ಈ ಕುಮಾರಸ್ವಾಮಿಯನ್ನ ಟಚ್ ಮಾಡೋಕೆ ಆಗಲ್ಲ-HDK ವಾಗ್ದಾಳಿ