Indian Railways ಚಿಕ್ಕಜಾಜೂರು-ಬಳ್ಳಾರಿ ಹಳಿ ದ್ವಿಪಥಕ್ಕೆ ₹3340 ಕೋಟಿ: ಸೋಮಣ್ಣ

Published : Aug 31, 2026, 11:18 AM IST
Indian Railways

ಸಾರಾಂಶ

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ 33 ರೈಲ್ವೆ ಸೇತುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು

ಚಿತ್ರದುರ್ಗ: ಚಿಕ್ಕಜಾಜೂರು-ಬಳ್ಳಾರಿ ಡಬ್ಲಿಂಗ್ ಯೋಜನೆಗೆ 3,340 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ರೈಲ್ವೇ ನಿಲ್ದಾಣದ ಹತ್ತಿರದ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಲಾಗುತ್ತಿರುವ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಟ್ಟು 33 ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.

ದೇಶಾದ್ಯಂತ ರೈಲ್ವೆ ವಿದ್ಯುದ್ದೀಕರಣ ಶೇ.99ರಷ್ಟು ಪೂರ್ಣ

ದೇಶಾದ್ಯಂತ ರೈಲ್ವೆ ವಿದ್ಯುದ್ದೀಕರಣ ಶೇ.99ರಷ್ಟು ಪೂರ್ಣಗೊಂಡಿದ್ದು, ಈ ವರ್ಷದ ಕೊನೆಯೊಳಗೆ ಶೇ.100ರಷ್ಟು ಸಾಧಿಸಿ ವಿಶ್ವ ದಾಖಲೆ ಬರೆಯಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಕಾರ್ಯ 2 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಕರ್ನಾಟಕ ಶೇ.100ರಷ್ಟು ರೈಲ್ವೆ ವಿದ್ಯುದ್ದೀಕರಣ ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ವಿ.ಸೋಮಣ್ಣ ಭರವಸೆ ನೀಡಿದರು.

ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ 52,000 ಕೋಟಿ ರು.ಗೂ ಹೆಚ್ಚು ಅನುದಾನ ತಂದಿದ್ದೇನೆ. ಹೊಸ ರೈಲ್ವೇ ಯೋಜನೆಗಳಿಗೆ 15,000 ಕೋಟಿ ರು. ನೀಡಲಾಗಿದೆ. ಗದಗ-ವಾಡಿ, ಗಿಣಿಗೆರಾ-ರಾಯಚೂರು, ಶಿವಮೊಗ್ಗ-ರಾಣೆಬೆನ್ನೂರು, ಕಡೂರು-ಚಿಕ್ಕಮಗಳೂರು-ಬೇಲೂರು ಹಾಗೂ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗಗಳ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಮಾಹಿತಿ ನೀಡಿದರು.

ಹಿಂದೆ ರಾಜ್ಯದ ರೈಲ್ವೆ ಯೋಜನೆಗಳಿಗೆ ವಾರ್ಷಿಕ 380 ರಿಂದ 400 ಕೋಟಿ ರು. ನೀಡಲಾಗುತ್ತಿತ್ತು. ಆದರೆ, ಈಗ ಪ್ರತಿ ವರ್ಷ 7,500 ರಿಂದ 8,000 ಕೋಟಿ ರು.ನೀಡಲಾಗುತ್ತಿದೆ. ರಾಜ್ಯದ ಸುಮಾರು 62 ರೈಲ್ವೆ ಸ್ಟೇಷನ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ತುಮಕೂರು - ಚಿತ್ರದುರ್ಗ - ದಾವಣಗೆರೆ ನೂತನ ನೇರ ರೈಲ್ವೆ ಮಾರ್ಗ

ತುಮಕೂರು - ಚಿತ್ರದುರ್ಗ - ದಾವಣಗೆರೆ ನೂತನ ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ ಶೇ.8 ರಷ್ಟು ಜಮೀನನ್ನು ಜಿಲ್ಲಾಡಳಿತ ಶೀಘ್ರವೇ ಹಸ್ತಾಂತರಿಸಿದರೆ, ಮುಂದಿನ ಒಂದೂವರೆ ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಇದಲ್ಲದೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿರುವುದರಿಂದ 25 ರಿಂದ 30 ವರ್ಷಗಳ ಸುದೀರ್ಘ ಸಂಚಾರ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರಾಜ್ಯ ಸರ್ಕಾರ ಶೇ.50ರಷ್ಟು ವೆಚ್ಚ ಹಂಚಿಕೆ ಮಾಡಬೇಕಾದ ಯೋಜನೆಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಈ ಯೋಜನೆಗೆ ಶೇಕಡಾ 100ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಿದೆ ಎಂದರು.

ವಿಶ್ವಮಾನವ ಎಕ್ಸ್ ಪ್ರೆಸ್, ಚಾಲುಕ್ಯ ಎಕ್ಸ್‍ಪ್ರೆಸ್‍

ಹೊಸದುರ್ಗದಲ್ಲಿ ವಿಶ್ವಮಾನವ ಎಕ್ಸ್ ಪ್ರೆಸ್, ಚಾಲುಕ್ಯ ಎಕ್ಸ್‍ಪ್ರೆಸ್‍ಗಳ ರೈಲುಗಳ ನಿಲುಗಡೆ, ಹೊಳಲ್ಕೆರೆಯಲ್ಲಿ ಸಿದ್ಧಗಂಗಾ ಎಕ್ಸ್ ಪ್ರೆಸ್ ಹಾಗೂ ಚಿಕ್ಕಜಾಜೂರಿನಲ್ಲಿ ರಾಣಿ ಚನ್ನಮ್ಮ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ನಿಲುಗಡೆ ಕಲ್ಪಿಸಬೇಕು ಎಂದು ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಗೋವಿಂದ ಎಂ ಕಾರಜೋಳ ಮನವಿ ಮಾಡಿದರು

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ರಾಜಿ ಇರಬಾರದು ಎಂದು ಮನವಿ ಮಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜೀಪೀರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಹೆಚ್ಚುವರಿ ರೈಲ್ವೇ ವಿಭಾಗೀಯ ಅಧಿಕಾರಿ ಶಬ್ಬಾಸ್ ಅಹ್ಮದ್ ಉಪಸ್ಥಿರಿದ್ದರು.

PREV
Read more Articles on
click me!

Recommended Stories

ಮಂಗಳೂರು: ಶಿರ್ಲಾಲು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಅಪರೂಪದ ಕರಿಚಿರತೆ!
ತೀರ್ಥಹಳ್ಳಿಯ ನಂದಿಹೊಳೆಯಲ್ಲಿ ಅಪರೂಪದ ವೀರಗಲ್ಲು ಪತ್ತೆ, ಹುಲಿಯೊಂದಿಗೆ ಹೋರಾಡಿ ಪತಿ ವೀರಮರಣ ಪತ್ನಿಯ ಸಹಗಮನ!