Bengaluru: ಮಹದೇವಪುರದಲ್ಲೀಗ ರಸ್ತೆ ಗುಂಡಿ ಗಂಡಾಂತರ!

By Kannadaprabha NewsFirst Published Oct 23, 2022, 2:40 PM IST
Highlights

ಪ್ರವಾಹ ಪರಿಸ್ಥಿತಿಯಿಂದ ಹೈರಾಣಾಗಿದ್ದ ಮಹದೇವಪುರ ವಲಯದ ಹಲವು ಬಡಾವಣೆಗಳ ನಿವಾಸಿಗಳು ಮತ್ತು ವಾಹನ ಸವಾರರಿಗೆ ಇದೀಗ ರಸ್ತೆ ಗುಂಡಿಗಳ ಸಮಸ್ಯೆಎದುರಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. 

ಸಂಪತ್‌ ತರೀಕೆರೆ

ಬೆಂಗಳೂರು (ಅ.23): ಪ್ರವಾಹ ಪರಿಸ್ಥಿತಿಯಿಂದ ಹೈರಾಣಾಗಿದ್ದ ಮಹದೇವಪುರ ವಲಯದ ಹಲವು ಬಡಾವಣೆಗಳ ನಿವಾಸಿಗಳು ಮತ್ತು ವಾಹನ ಸವಾರರಿಗೆ ಇದೀಗ ರಸ್ತೆ ಗುಂಡಿಗಳ ಸಮಸ್ಯೆಎದುರಾಗಿದ್ದು, ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಮುನ್ನೆನಕೊಳಲು, ಕುಂದಲಹಳ್ಳಿ, ದೇವರ ಬೀಸನಹಳ್ಳಿ, ವಿಜಿನಾಪುರ, ವಿಭೂತಿಪುರ, ಮಹದೇವಪುರ, ಹೊರಮಾವು, ಬಿ.ನಾರಾಯಣಪುರ, ಬಿಎಂಎಲ್‌ ಲೇಔಟ್‌, ಅಯ್ಯಪ್ಪ ನಗರ, ಮಾರತ್ತಹಳ್ಳಿ, ಕೆ.ಆರ್‌.ಪುರ ಸೇರಿದಂತೆ ಮಹದೇವಪುರ ವಲಯದ ಅನೇಕ ಬಡಾವಣೆಗಳಲ್ಲಿ ಒಟ್ಟು 500ರಿಂದ 600ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿತ್ತು. ಇದೀಗ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಗುಂಡಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡು ಸ್ಥಿತಿ ನಿರ್ಮಾಣಗೊಂಡಿದೆ.

ಮಹದೇವಪುರ ವಲಯ ಬಹುತೇಕ ಕೈಗಾರಿಕಾ ಪ್ರದೇಶವಾಗಿದ್ದು, ಐಟಿಬಿಟಿ ಸೇರಿದಂತೆ ಹಲವು ನೂರಾರು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಔಟರ್‌ ರಿಂಗ್‌ ರಸ್ತೆ, ವೈಟ್‌ಫೀಲ್ಡ್‌, ಬೆಳ್ಳಂದೂರು, ಬೇಗೂರು, ಹೊಸ ರೋಡ್‌, ಇಬ್ಬಲೂರು, ಹಗದೂರು ಒಳಗೊಂಡಂತೆ ಅನೇಕ ರಸ್ತೆಗಳಲ್ಲಿ ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಕಳೆದೊಂದು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಅನೇಕ ಬಡಾವಣೆಗಳು ಮುಳುಗಿ ರಸ್ತೆಗಳು ಕೆರೆಯಂತಾಗಿದ್ದವು. ವರ್ತೂರು, ಬೆಳ್ಳಂದೂರು ಕೆರೆಗಳು ತುಂಬಿ ನೀರು ರಸ್ತೆಗೆ ಹರಿದಿತ್ತು. ಹಾಗೆಯೇ ರಾಜಕಾಲುವೆಗಳು ಕೂಡ ತುಂಬಿ ಹರಿದು ಅನೇಕ ರಸ್ತೆಗಳು ಜಲಾವೃತಗೊಂಡಿದ್ದವು. ಇದರಿಂದಾಗಿ ನೂರಾರು ಗುಂಡಿಗಳು ಈ ರಸ್ತೆಗಳಲ್ಲಿ ನಿರ್ಮಾಣಗೊಂಡಿವೆ.

Bengaluru: ಹಾಫ್‌ ಹೆಲ್ಮೆಟ್‌ ಧರಿಸಿದರೆ ಬೀಳುತ್ತೆ 500 ರೂ. ದಂಡ!

ಸ್ಥಳೀಯರ ಪ್ರತಿಭಟನೆ: ಗುಂಡಿಗಳು ಕೇವಲ ಮುಖ್ಯ ರಸ್ತೆಗಳ ಹಣೆಬರಹವಲ್ಲ. ಇನ್ನೂ ವಾರ್ಡ್‌ ರಸ್ತೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಇತ್ತೀಚೆಗೆ ಹಗದೂರು ವಾರ್ಡ್‌ನ ನಲ್ಲೂರುಹಳ್ಳಿಯ ಹದಗೆಟ್ಟರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆಯನ್ನೂ ನಡೆಸಿದ್ದರು. ನಲ್ಲೂರಹಳ್ಳಿ ವೃತ್ತದಿಂದ ಸಿದ್ಧಾಪುರ, ಸರ್ಜಾಪುರ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿಗಳು ತಲೆನೋವು ತರಿಸಿದ್ದವು. ಅದೇ ರೀತಿ ಹಗದೂರು ವಾರ್ಡ್‌ ನಲ್ಲೂರಹಳ್ಳಿ, ಸಿದ್ದಾಪುರ ವೈಟ್‌ಫೀಲ್ಡ್‌ ಬೇರೆ ಬೇರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ವಿವಿಧ ರಸ್ತೆಗಳೆಲ್ಲವೂ ಗುಂಡಿಗಳಿಂದ ಕೂಡಿದ್ದು ವಾಹನ ಸವಾರರಿಗೆ ಜೀವಭಯ ತಂದೊಡ್ಡಿವೆ.

ಗುಂಡಿ ಮುಚ್ಚಲು ಆದ್ಯತೆ ನೀಡಿ: ಪ್ರತಿ ಬಾರಿ ಮಳೆ ಸುರಿದಾಗೆಲ್ಲ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಸ್ತೆ ಗುಂಡಿ ಮುಚ್ಚಿ, ಅನಾಹುತಗಳನ್ನು ತಪ್ಪಿಸುವಂತೆ ಅನೇಕ ಬಾರಿ ಒತ್ತಾಯಿಸಿದ್ದೇವೆ. ಇತ್ತೀಚೆಗೆ ಪ್ರವಾಹ ಪರಿಸ್ಥಿತಿಯಾಗಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರಿಂದ ರಸ್ತೆ ಗುಂಡಿಗಳನ್ನು ಮರೆತೇ ಬಿಟ್ಟಿದ್ದಾರೆ. ಈಗಲಾದರು ರಸ್ತೆ ಗುಂಡಿ ಮುಚ್ಚಲು ಮುಂದಾಗುವಂತೆ ಹಗದೂರು ನಿವಾಸಿ ಬಿ.ಕೆ.ಭಾನುಪ್ರಕಾಶ್‌ ಒತ್ತಾಯಿಸಿದ್ದಾರೆ.

Cracker Injury: ಪಟಾಕಿ ಅವಾಂತರದಿಂದ ಸಿಲಿಕಾನ್ ಸಿಟಿಯ ಇಬ್ಬರ ಕಣ್ಣಿಗೆ ಗಾಯ

ರಸ್ತೆ ಗುಂಡಿ ಮುಚ್ಚುವ ಕಾರ‍್ಯಕ್ಕೆ ಪಾಲಿಕೆ ಚಾಲನೆ: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಮಳೆ ಸ್ವಲ್ಪ ಬಿಡುವು ನೀಡಿದ ಬೆನ್ನಲ್ಲೇ ಮಹದೇವಪುರ ವಲಯ ಪ್ರಮುಖ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಔಟರ್‌ ರಿಂಗ್‌ ರಸ್ತೆ ಸವೀರ್‍ಸ್‌ ರಸ್ತೆ, ದೊಡ್ಡಾನೆಕುಂದಿ, ಮಾರತ್ತಹಳ್ಳಿ, ಇಬ್ಬಲೂರು, ಇಮ್ಮಡಿಹಳ್ಳಿ ರಸ್ತೆ, ಹಗದೂರು ರಸ್ತೆ, ವೈಟ್‌ಫೀಲ್ಡ್‌ ರಸ್ತೆ, ಸಿದ್ದಾಪುರ ನಲ್ಲೂರಹಳ್ಳಿ ರಸ್ತೆ, ಗುಂಜೂರು ರಸ್ತೆಯಲ್ಲಿ ಡಾಂಬರೀಕರಣ ಆರಂಭಗೊಂಡಿದೆ. ಈಗಾಗಲೇ 20ರಿಂದ 25 ಪ್ರಮುಖ ರಸ್ತೆಗಳ ಗುಂಡಿಗಳನ್ನು ಪತ್ತೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಮಹದೇವಪುರ ವಲಯದ ಕಾರ್ಯನಿರ್ವಾಹಕ ಅಭಿಯಂತರ (ರಸ್ತೆ ಮತ್ತು ಮೂಲಸೌಕರ್ಯ ವಿಭಾಗ) ಜಯಶಂಕರ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

click me!